ADVERTISEMENT

ಅರಸೀಕೆರೆಯಲ್ಲಿ ಪಕ್ಷಾತೀತ ಬೃಹತ್ ಪ್ರತಿಭಟನೆ

ಎಂಜಿನಿಯರಿಂಗ್‌ ಕಾಲೇಜು ನಿರ್ಮಾಣಕ್ಕೆ ಕೆಲವರ ಅಡ್ಡಿ: ಶಾಸಕ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 1:33 IST
Last Updated 22 ಜನವರಿ 2021, 1:33 IST
ಅರಸೀಕೆರೆಗೆ ಮಂಜೂರಾಗಿರುವ ಸರ್ಕಾರಿ ಎಂಜಿನಿಯರಿಂಗ್ ಸ್ಥಾಪನೆಯಾಗಲೇಬೇಕು ಎಂದು ತಾಲ್ಲೂಕಿನ ನಾಗರಿಕರು ಶಾಸಕ ಕೆ.ಎಂ. ಶಿವಲಿಂಗೇಗೌಡ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದರು
ಅರಸೀಕೆರೆಗೆ ಮಂಜೂರಾಗಿರುವ ಸರ್ಕಾರಿ ಎಂಜಿನಿಯರಿಂಗ್ ಸ್ಥಾಪನೆಯಾಗಲೇಬೇಕು ಎಂದು ತಾಲ್ಲೂಕಿನ ನಾಗರಿಕರು ಶಾಸಕ ಕೆ.ಎಂ. ಶಿವಲಿಂಗೇಗೌಡ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದರು   

ಅರಸೀಕೆರೆ: ‘ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಬಂದ ಮಂತ್ರಿಯಾಗುವ ಅವಕಾಶವನ್ನು ತ್ಯಾಗ ಮಾಡಿ ಅರಸೀಕೆರೆಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ತಂದಿದ್ದೇನೆ. ಕಾಲೇಜು ನಿರ್ಮಿಸುವಲ್ಲಿ ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ನಗರದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಕೆಲವರು ಅಡ್ಡಿಪಡಿಸಿ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವುದನ್ನು ವಿರೋಧಿಸಿ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಗುರುವಾರ ನಡೆದ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.

ಮಂತ್ರಿ ಮಾಡುವ ವಿಷಯವನ್ನು ಕುಮಾರಸ್ವಾಮಿಯವರು ನನ್ನ ಬಳಿ ಪ್ರಸ್ತಾಪಿಸಿದಾಗ ನನಗೆ ಮಂತ್ರಿ ಸ್ಥಾನ ಬೇಡ ನನ್ನ ತಾಲ್ಲೂಕಿಗೆ ಒಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಮಂಜೂರು ಮಾಡಿಕೊಡಿ ಈ ಮೂಲಕ ಅರಸೀಕೆರೆ ತಾಲ್ಲೂಕಿನ ಅಭಿವೃದ್ಧಿಗೆ ನೆರವು ನೀಡಬೇಕು,

ADVERTISEMENT

ತಾಲ್ಲೂಕಿನ ಬಡ ಮಕ್ಕಳು ಎಂಜಿನಿಯರಿಂಗ್ ಓದಲು ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ದೂರದ ಪಟ್ಟಣಗಳಿಗೆ ಓಡಾಡುತ್ತಿದ್ದಾರೆ, ಅರಸೀಕೆರೆಯಲ್ಲೇ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ಎಂದು ಬೇಡಿಕೆಯಿಟ್ಟು ತಂದಿದ್ದೇನೆ. ಈಗ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ತಡೆಯೊಡ್ಡುತ್ತಿರುವ ಕೆಲವೇ ಕೆಲವು ಪ್ರತಿಭಟನಕಾರರ ಹಿಂದೆ ಬಿಜೆಪಿಯ ಕೆಲವು ಮುಖಂಡರ ಕೈವಾಡವಿದೆ. ತಲೆ ಮೇಲೆ ತಲೆ ಬೀಳಲಿ ತಾಲ್ಲೂಕಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ನಡದೇ ನಡೆಯುತ್ತದೆ, ನನಗೆ ತಾಲ್ಲೂಕಿನ ಜನರ ಹಿತವೇ ಮುಖ್ಯ. ಯಾರಿಗೋ ಹೆದರಿಕೊಂಡು ಕೂರುವ ಜಾಯಮಾನ ನನ್ನದಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇಂದಿನ ಪ್ರತಿಭಟನೆ ಪಕ್ಷಾತೀತವಾಗಿದೆ. ಕಾಲೇಜು ನಿರ್ಮಾಣವಾಗುತ್ತಿರುವ ಜಾಗ ಬಂಜರು ಭೂಮಿಯಾಗಿದ್ದು ನಗರಸಭೆಗೆ 5 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಈ ಜಾಗವನ್ನು ಎಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳೇ ಸ್ಥಳ ಮೀಸಲಿರಿಸಿ ಆದೇಶಿಸಿರುತ್ತಾರೆ.ಮಾದೇಶ್ವರ ಸ್ವಾಮಿ ದೇವಾಲಯಕ್ಕೆ ಸ್ಥಳ ಬಿಟ್ಟು ಕೊಡಲಾಗುವುದು, ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಸುತ್ತಮುತ್ತಲಿನ ಬಹುತೇಕ ಗ್ರಾಮಗಳ ಗ್ರಾಮಸ್ಥರ ವಿರೋಧವಿಲ್ಲ’ ಎಂದು ಹೇಳಿದರು.

ನಗರದ ಪ್ರವಾಸಿ ಮಂದಿರದಿಂದ ಹೊರಟ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ತಾಲ್ಲೂಕು ಕಚೇರಿ ಆವರಣ ತಲುಪಿತು. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ನಮ್ಮ ತಾಲ್ಲೂಕಿಗೆ ಆಗುತ್ತಿರುವ ಅನ್ಯಾಯವನ್ನು ಆಲಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಶಾಸಕರು ಹಟ ಹಿಡಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಆರ್. ಗಿರೀಶ್ ಸಮಸ್ಯೆ ಆಲಿಸಿ ಮನವಿಯನ್ನು ಸ್ವೀಕರಿಸಿದರು.

ಕಟ್ಟಡ ನಿರ್ಮಾಣದ ಸುತ್ತಮುತ್ತಲಿನ ಗ್ರಾಮಸ್ಥರು, ತಾಲ್ಲೂಕಿನ ನಾಗರಿಕರು, ನಗರಸಭೆ ಸದಸ್ಯ ಸಮೀವುಲ್ಲಾ, ಪುಟ್ಟಸ್ವಾಮಿ, ಜೆಡಿಎಸ್ ಮುಖಂಡರಾದ ಧರ್ಮಶೇಖರ್, ಸಿಕಂದರ್ ಪಾಷಾ , ಜಿ.ಪಂ. ಸದಸ್ಯ ಬಿಳಿಚೌಡಯ್ಯ, ಹನುಮಪ್ಪ, ಹುಚ್ಚೇಗೌಡ, ಆದಿಜಾಂಬವ ಸಮುದಾಯದ ಮುಖಂಡ ಶಿವಮೂರ್ತಿ ಗುತ್ತಿನಕೆರೆ, ಕರವೇ ಕಾರ್ಯಕರ್ತರು, ರೈತ, ದಲಿತ ಸಂಘಟನೆಗಳ ಮುಖಂಡರು, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.