ADVERTISEMENT

ಮಾನಸಿಕ ಒತ್ತಡದಿಂದ ಪಿಎಸ್‌ಐ ಆತ್ಮಹತ್ಯೆ: ಡಿವೈಎಸ್ಪಿ ನಾಗೇಶ್

ತನಿಖಾಧಿಕಾರಿ ಅರಸೀಕೆರೆ ಡಿವೈಎಸ್ಪಿ ನಾಗೇಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 5:57 IST
Last Updated 11 ಡಿಸೆಂಬರ್ 2020, 5:57 IST

ಹಾಸನ: ‘ಚನ್ನರಾಯಪಟ್ಟಣದಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆ ಸಂದರ್ಭದಲ್ಲಿ ಅವರಿಗೆ ಬಂದ ಅನೇಕ ದೂರವಾಣಿ ಕರೆಗಳಿಂದ ಮಾನಸಿಕ ಒತ್ತಡಕ್ಕೆ ಸಿಲುಕಿ ಪಿಎಸ್‍ಐ ಕಿರಣ್‍ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ತನಿಖಾಧಿಕಾರಿ ಹಾಗೂ ಅರಸೀಕೆರೆ ಡಿವೈಎಸ್ಪಿ ನಾಗೇಶ್ ತಿಳಿಸಿದರು.

ಪಿಎಸ್‌ಐ ಕಿರಣ್‌ಕುಮಾರ್‌ ಜುಲೈ 31ರ ರಾತ್ರಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಾವಿನ ತನಿಖೆಯ ನೇತೃತ್ವ ವಹಿಸಿದ್ದ ನಾಗೇಶ್ ಅವರು, ತನಿಖೆ ಪೂರ್ಣಗೊಳಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ವರದಿ ಸಲ್ಲಿಸಿದ್ದು ಗುರುವಾರ ಸುದ್ದಿಗಾರರಿಗೆಮಾಹಿತಿ ನೀಡಿದರು.

‘ಪಟ್ಟಣದಲ್ಲಿ ನಿರಂತರವಾಗಿ ಎರಡು ಕೊಲೆಗಳಾದವು. ನನ್ನ ವ್ಯಾಪ್ತಿಯಲ್ಲಿ ಇಷ್ಟೊಂದು ಅಪರಾಧ ಆಗುತ್ತಿದೆಯಲ್ಲ. ಮೇಲಧಿಕಾರಿಗಳಿಗೆ ಹೇಗೆ ಉತ್ತರಿಸಲಿ ಎಂದು ಮಾನಸಿಕ ಖಿನ್ನತೆಗೆ ಕಿರಣ್‌ಕುಮಾರ್‌ ಒಳಗಾಗಿ ದ್ದಾರೆ. ಆ ದಿನ ಅವರಿಗೆ 52 ಕರೆಗಳು ಬಂದಿವೆ. ರಾಜಕೀಯ ಮುಖಂಡರು, ಕಾರ್ಯಕರ್ತರು, ಪತ್ರಕರ್ತರು, ಸಂಬಂಧಿಕರು ಹಾಗೂ ಸ್ನೇಹಿತರು ಕರೆ ಮಾಡಿ ಕೊಲೆ ವಿಚಾರ ಕುರಿತಾಗಿಯೇ ಮಾತನಾಡಿದ್ದಾರೆ. ಕೊಲೆಯಾದ ಯುವಕನ ಸಂಬಂಧಿಕರು ಆರೋಪಿಗಳ ಶೀಘ್ರ ಬಂಧಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಹಾಗಾಗಿಕಿರಣ್‍ಕುಮಾರ್ ಆತ್ಮಹತ್ಯೆಯ ನಿರ್ಧಾರ ಕೈಗೊಂಡರು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಮಾತನಾಡಿ, ‘ಯಾವುದೇ ಅಪರಾಧ ನಡೆದರೆ ಆರೋಪಿಗಳ ಬಂಧಿಸುವವರೆಗೆ ಪೊಲೀಸರು ನಿದ್ರೆ ಮಾಡುವುದಿಲ್ಲ. ಯಾರೇ ಆಗಲಿ ಒಂದು ಸಲ ಫೋನ್‌ ಮಾಡಿದರೆ ಸರಿ ಎನ್ನಬಹುದು. ಆದರೆ ಪದೇ ಪದೇ ಕರೆ ಮಾಡಿ ಅದೇ ವಿಚಾರ ಕೇಳಿದರೆ ಬೇಜಾರಾಗುತ್ತದೆ. ಆತ್ಮಹತ್ಯೆಗೆ ಮೊದಲು ಇಲಾಖೆಯ ಅಧಿಕಾರಿಗಳಿಗೆ ಅವರು ಕರೆ ಮಾಡಿದ್ದರೆ ಆತುರದ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಅವರ ಆತ್ಮಹತ್ಯೆ ನಿಜಕ್ಕೂ ಬೇಸರ ಉಂಟುಮಾಡಿದೆ’ ಎಂದರು.

‘ಕಿರಣ್‌ ಕುಮಾರ್‌ ಅವರ ವಿರುದ್ಧ ಯಾವುದೇ ವಿಚಾರಣೆ ಇರಲಿಲ್ಲ. ಪೊಲೀಸ್‌ ವೃತ್ತಿಯನ್ನು ತುಂಬಾ ಇಷ್ಟಪಡುತ್ತಿದ್ದ ಅವರು ಕುಟುಂಬಕ್ಕಿಂತ ವೃತ್ತಿಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಮಗಳ ಜನ್ಮ ದಿನಾಚರಣೆಗೆಕೇವಲ ಒಂದು ಗಂಟೆ ರಜೆ ಪಡೆದು ಹಿಂತಿರುಗಿದ್ದರು. ಪತ್ನಿಯನ್ನು ಈವರೆಗೂ ಒಂದು ಸಿನಿಮಾ ಅಥವಾ ಶಾಪಿಂಗ್‌ಗೆ ಕರೆದುಕೊಂಡು ಹೋಗಿರಲಿಲ್ಲ. ಸಾರ್ವಜನಿಕರು ಇದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು. ಕಿರಣ್‌ಕುಮಾರ್‌ ಅವರಿಗೆ ಬಡ್ತಿ ಸಿಗುವ ಸಾಧ್ಯತೆ ಇತ್ತು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.