ADVERTISEMENT

ಪಿಯುಸಿ ಫಲಿತಾಂಶ: ಹಾಸನದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ

ಫಲಿತಾಂಶ ಕುಸಿತಕ್ಕೆ ಇಂಗ್ಲಿಷ್‌ ಪರೀಕ್ಷೆ ವಿಳಂಬ ಕಾರಣ: ಡಿಡಿಪಿಯು

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 15:32 IST
Last Updated 15 ಜುಲೈ 2020, 15:32 IST

ಹಾಸನ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇಕಡಾ 69.53 ಉತ್ತೀರ್ಣತೆಯೊಂದಿಗೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇಕಡಾ 59.07 ರಷ್ಟು ಬಾಲಕರು ಪಾಸಾಗಿದ್ದಾರೆ.

ನಗರದ ಮಾಸ್ಟರ್ಸ್‌ ಹಾಗೂ ಬ್ರಿಗೇಡ್‌ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ವಿಭಾಗದಲ್ಲಿ ತಲಾ 596 ಅಂಕ ಪಡೆದು ಜಿಲ್ಲೆಗೆ ಪ್ರಥಮ ಮತ್ತು ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಾರೆ. ಮಾಸ್ಟರ್‌ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ನಿತಾ ಅವರು 591 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಹಾಸನದ ಸೆಂಟ್ರಲ್‌ ಕಾಮರ್ಸ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಸ್‌.ಜಿ.ಅನುಷಾ 590 ಅಂಕಹಾಗೂ ಕಲಾ ವಿಭಾಗದಲ್ಲಿ ನಗರದ ಸಂತ ಫಿಲೋಮಿನಾ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ದೃತಿ ಭಟ್‌ 575 ಅಂಕದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲೂ ಬಾಲಕಿಯರೇ ಪ್ರಥಮ ಸ್ಥಾನ ಪಡೆದಿರುವುದು ವಿಶೇಷ.

ADVERTISEMENT

ಆರನೇ ಸ್ಥಾನ ಪಡೆದಿದ್ದ ಜಿಲ್ಲೆ ಈ ಬಾರಿ 11ನೇ ಸ್ಥಾನ ಪಡೆದು ಕಳಪೆ ಸಾಧನೆ ಮಾಡಿದೆ. ಕಳೆದ ಬಾರಿ ಉತ್ತಮ ಫಲಿತಾಂಶ ಬಂದಿದ್ದರಿಂದ ಮೊದಲ ಐದರಲ್ಲಿ ಸ್ಥಾನ ಪಡೆಯಬಹುದು ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿದೆ.

ಜಿಲ್ಲೆಯಲ್ಲಿರುವ 171 ಪದವಿ ಪೂರ್ವ ಕಾಲೇಜುಗಳ ಪೈಕಿ 86 ಸರ್ಕಾರಿ, 26 ಅನುದಾನಿತ, 58 ಅನುದಾನ ರಹಿತ ಇವೆ. ಪರೀಕ್ಷೆ ಬರೆದ ಒಟ್ಟು 14,766 ವಿದ್ಯಾರ್ಥಿಗಳಲ್ಲಿ 11051 ಮಕ್ಕಳು ನಗರ ಪ್ರದೇಶದವರಾಗಿದ್ದು, ತೇರ್ಗಡೆ ಹೊಂದಿದವರ ಸಂಖ್ಯೆ 7931. ಗ್ರಾಮೀಣ ಭಾಗದ 3715 ಮಕ್ಕಳಲ್ಲಿ 2432 ವಿದ್ಯಾರ್ಥಿಗಳು ವಿವಿಧ ಶ್ರೇಣೆಯಲ್ಲಿ ತೇರ್ಗಡೆಯಾಗಿದ್ದಾರೆ.

‘ಇಂಗ್ಲಿಷ್‌ ಪರೀಕ್ಷೆ ನಿಗದಿತ ದಿನಾಂಕದಂತೆ ನಡೆದಿದ್ದರೇ ಉತ್ತಮ ಫಲಿತಾಂಶ ಬರುತ್ತಿತ್ತು. ಕೊರೊನಾ ಲಾಕ್‌ಡೌನ್‌ನಿಂದಾಗಿ ತಡವಾಗಿ ನಡೆದ ಕಾರಣ ಫಲಿತಾಂಶ ಕುಸಿದಿದೆ. ಪರೀಕ್ಷೆ ನಡೆಸದೆ ಸಾಮೂಹಿಕವಾಗಿ ಪಾಸ್‌ ಮಾಡಲಾಗುತ್ತದೆ ಅಂದುಕೊಂಡು ಓದಿನ ಕಡೆ ವಿದ್ಯಾರ್ಥಿಗಳು ಅಷ್ಟಾಗಿ ಗಮನ ಹರಿಸಲಿಲ್ಲ. ಶೇಕಡಾ 25ರಷ್ಟು ಉಪನ್ಯಾಸಕರ ಕೊರತೆ ಇದೆ. ಲಾಕ್‌ಡೌನ್‌ ಅವಧಿಯಲ್ಲಿ ಇಂಗ್ಲಿಷ್‌ ಉಪನ್ಯಾಸಕರ ಜತೆ ಚರ್ಚಿಸಿ, ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ಸಹ ನೀಡಲಾಗಿದೆ’ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಡಿ.ಜಯಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಫಲಿತಾಂಶ ಸುಧಾರಣೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷ ತರಗತಿ, ಕಲಿಕೆಯಲ್ಲಿ ಹಿಂದಿದ್ದ
ವಿದ್ಯಾರ್ಥಿಗಳ ದತ್ತು ಪಡೆಯುವಿಕೆ, ಉಪನ್ಯಾಸಕರಿಂದ ಸಂಜೆ ವಿಶೇಷ ತರಬೇತಿ, ಗುಂಪು ಅಧ್ಯಯನ ನಡೆಸಲಾಗಿತ್ತು. ಫೇಲಾದ ವಿದ್ಯಾರ್ಥಿಗಳು ಆಗಸ್ಟ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಮುಖ್ಯ ಪರೀಕ್ಷೆಗೆ ಯಾವ ರೀತಿ ತಯಾರಿ ನಡೆಸಿದರೋ ಅದೇ ರೀತಿ ಓದಿನ ಕಡೆ ಗಮನ ಹರಿಸಬೇಕು. ಇಲಾಖೆಯಿಂದ ಮಾರ್ಗಸೂಚಿ ಬಂದರೆ ಆನ್‌ಲೈನ್‌ ತರಗತಿ ನಡೆಸಲಾಗುವುದು’ಎಂದು ಹೇಳಿದರು.

ಸರ್ಕಾರಿ ಕಾಲೇಜು ಸಾಧನೆ: ಹಾಸನದ ವಿದ್ಯಾನಗರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ ಪಡೆದಿದೆ. ವಿಜ್ಞಾನ ವಿಭಾಗದಲ್ಲಿ ಸಿ.ಎನ್‌.ದಿಲೀಪ್‌ 580, ಕೆ.ವಿ.ಸಹನಾ 553, ವಾಣಿಜ್ಯ ವಿಭಾಗದಲ್ಲಿ ಕೆ.ಎಂ.ಚಂದನಾ 509, ಎ.ಸಚಿನ್‌ 486, ಕಲಾ ವಿಭಾಗದಲ್ಲಿ ಎಸ್‌.ಅಘಮರ್ಷನಾ 553, ಎ.ಎನ್‌.ಕಿರಣ್‌ ಕುಮಾರ್‌ 404 ಅಂಕ ಗಳಿಸಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.