ADVERTISEMENT

ಜೆಡಿಎಸ್ ಮೈತ್ರಿ ತೊರೆಯಿರಿ: ವೀಕ್ಷಕರ ಎದುರೇ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 3:27 IST
Last Updated 30 ಜೂನ್ 2020, 3:27 IST
   

ಚನ್ನರಾಯಪಟ್ಟಣ: ‘ಜಿಲ್ಲೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದಾಗಿ ಕಾಂಗ್ರೆಸ್ ಸಂಘಟನೆ ದುರ್ಬಲವಾಗುತ್ತಿದೆ’ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣದ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಸಂಘಟನೆ ಬಲಿಷ್ಠವಾಗಿದೆ ಎಂದು ವೀಕ್ಷಕ ಡಾ.ಸಂಜಯ್ ಗೌಡ ಭಾಷಣ ಮಾಡುತ್ತಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು, ‘ತಾಲ್ಲೂಕಿನಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಚೆನ್ನಾಗಿದೆ. ಆದರೆ, ದೇವೇಗೌಡರ ಸಖ್ಯ ಮಾಡಿದರೆ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಲು ಹೇಗೆ ಸಾಧ್ಯ. ವೀಕ್ಷಕರು ಪಕ್ಷದ ಸಭೆ ಮಾಡ್ತೀರ ನಂತರ ಹೊರಟು ಹೋಗ್ತೀರಾ. ಕಾರ್ಯಕರ್ತರ ಭಾವನೆಯನ್ನು ವರಿಷ್ಠರಿಗೆ ಮುಟ್ಟಿಸುವುದಿಲ್ಲ. ರಾಜ್ಯದ ವರಿಷ್ಠರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜೊತೆ ಚರ್ಚಿಸಲು ಹೋದರೆ ಹಾಸನ ಜಿಲ್ಲೆಯ ವಿಚಾರ ಬಿಟ್ಟು ಬೇರೆ ವಿಷಯ ಚರ್ಚಿಸಿ ಎನ್ನುತ್ತಾರೆ. ಈ ರೀತಿಯಾದರೆ ಕಾರ್ಯಕರ್ತರ ಪಾಡು ಏನು? ಪಕ್ಷದ ಆಧಾರ ಸ್ತಂಭವಾದ ಕಾರ್ಯಕರ್ತರನ್ನು ದಿಕ್ಕು ತಪ್ಪಿಸಬೇಡಿ’ ಎಂದು ಖಾರವಾಗಿ ಹೇಳಿದರು.

‘ತಾಲ್ಲೂಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಯಾದಾಗ ಅದಕ್ಕೆ ಸ್ಪಂದಿಸುವರಿಲ್ಲವಾಗಿದೆ. ಗೌಡಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೋಟ್ಯಂತರ ಅವ್ಯವಹಾರ ನಡೆದರೂ ಅದನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಪ್ರತಿಭಟಿಸಲಿಲ್ಲ. ಸರ್ಕಾರಿ ನೌಕರ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದರೂ ಕೇಳುವರಿಲ್ಲದಾಗಿದೆ. ಮೊದಲು ಜೆಡಿಎಸ್ ಸಖ್ಯ ತೊರೆದು ಕಾರ್ಯಕರ್ತರ ಬಳಿ ಬನ್ನಿ’ ಎಂದು ಕಾಂಗ್ರೆಸ್ ಕಾರ್ಯಕರ್ತರಾದ ರವೀಶ್, ಗಿರೀಶ್, ಚಂದ್ರು, ವಿನೋದ್ ಆಗ್ರಹಿಸಿದರು.

ADVERTISEMENT

ಇದಕ್ಕೆ ಉತ್ತರಿಸಿದ ವೀಕ್ಷಕ ಡಾ.ಸಂಜಯ್ ಗೌಡ, ‘ಕಾರ್ಯಕರ್ತರ ಭಾವನೆ ನನಗೆ ಅರ್ಥವಾಗುತ್ತದೆ. ನೀವು ಮಾತನಾಡಿರುವುದರಲ್ಲಿ ತಪ್ಪಿಲ್ಲ. ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದ್ದೀರಿ. ಇದುವರೆಗೆ ಜೆಡಿಎಸ್ ಜೊತೆ ಹೊಂದಾಣಿಕೆ ಇತ್ತು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.