
ಹಿರೀಸಾವೆ: ಹೋಬಳಿಯ ಕಬ್ಬಳಿ ಗ್ರಾಮದಲ್ಲಿ ಶನಿವಾರ ಬಸವೇಶ್ವರಸ್ವಾಮಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಪ್ರಥಮ ಆರತಿ ಬೆಳಗುವ ಮೂಲಕ ಐದು ದಿನ ನಡೆಯುವ ರಾಸುಗಳ ಪೂಜೆಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ವಿವಿಧ ಪುಷ್ಪಗಳು, ಒಡವೆ-ವಸ್ತ್ರಗಳಿಂದ ಅಲಂಕಾರಗೊಂಡಿದ್ದ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ಸ್ವಾಮೀಜಿಯವರು ಪೂಜೆ ಸಲ್ಲಿಸಿದ ನಂತರ ಅಡ್ಡಪಲ್ಲಕ್ಕಿ ಉತ್ಸವವು ಪ್ರಾರಂಭವಾಯಿತು. ಗ್ರಾಮದ ಕಲ್ಲೇಶ್ವರ, ಲಕ್ಷ್ಮೀದೇವಿ, ಈಶ್ವರ ದೇವರು ಸೇರಿದಂತೆ ಎಲ್ಲ ದೇವಾಲಯಗಳಿಗೆ ಪೂಜೆ ಸಲ್ಲಿಸಲಾಯಿತು. ಮಂಗಳವಾದ್ಯದೊಂದಿಗೆ ಮೂಲ ಸ್ಥಾನಕ್ಕೆ ದೇವರನ್ನು ಕರೆತರಲಾಯಿತು. ಮೂಲಸ್ಥಾನದಲ್ಲಿ ಇರುವ ಬಸವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಸ್ವಾಮೀಜಿ ಕಲ್ಯಾಣಿಯಲ್ಲಿ ಗಂಗೆ ಪೂಜೆ ಮಾಡಿ, ಧರ್ಮ ಧ್ವಜಾರೋಹಣ ನೆರವೇರಿಸಿದರು.
ಆದಿಚುಂಚನಗಿರಿ ಹಾಸನ–ಕೊಡಗು ಮಠದ ಕಾರ್ಯದರ್ಶಿಗಳಾದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ, ಗುಡಿಗೌಡ ಪ್ರಕಾಶ್, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭಾನುವಾರ ಬೆಳಿಗ್ಗೆ ಸ್ವಾಮಿಯವರಿಗೆ ವಿಶೇಷ ಪೂಜೆಗಳು ನಡೆಯಲಿವೆ, ಸಂಜೆ 6 ಗಂಟೆಗೆ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಸಂಜೆ ಏರ್ಪಡಿಸಲಾಗಿದೆ. ಕಾರ್ತಿಕ ಸೋಮವಾರ ಬೆಳಗ್ಗೆ ದೇವರಿಗೆ ಪಂಚಾಮೃತಾಭಿಷೇಕ, ಹೋಮಗಳು ಸೇರಿದಂತೆ ಹಲವು ಪೂಜೆಗಳು ಜರುಗುತ್ತವೆ. ಸಾಮೀಜಿ ಸಾನ್ನಿಧ್ಯದಲ್ಲಿ, ದಾನಿಗಳಾದ ಪ್ರದೀಪಾ ವೆಂಕಟೇಶ ಪ್ರಸಾದರವರ ಸಹಕಾರದಲ್ಲಿ ದೇವಸ್ಥಾನದ ಆವರಣದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಯುತ್ತದೆ. ಸಂಜೆ ಬಸವೇಶ್ವರ ಸ್ವಾಮಿಯವರ ಸರ್ಪೋತ್ಸವ, ದಸರಿ ಘಟ್ಟದ ಚೌಡೇಶ್ವರಿ ದೇವಿ, ಬಾಲ ಗಂಗಾಧರನಾಥ ಸ್ವಾಮೀಜಿಯವರ ಪುತ್ಥಳಿ, ನಿರ್ಮಾಲಾನಂದನಾಥ ಸ್ವಾಮೀಜಿಯವರ ಮುತ್ತಿನ ಪಲ್ಲಕ್ಕಿ ಮೆರವಣಿಗೆ ಮತ್ತು ಪುಷ್ಕರಣಿಯಲ್ಲಿ ತೇಪ್ಪೋತ್ಸವ ಹಾಗೂ ಧಾರ್ಮಿಕ ಸಭೆ ಜರುಗಲಿದೆ.
ಮಂಗಳವಾರ ಸ್ವಾಮಿಯವರಿಗೆ ವಿವಿಧ ಗ್ರಾಮಸ್ಥರಿಂದ ಪೂಜೆ, ಉತ್ಸವ ಮತ್ತು ಸಂಜೆ ಶಿವಾರ ಉಮೇಶ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ಬುಧವಾರ ಸಂಜೆ ಗೋಧೂಳಿ ಲಗ್ನದಲ್ಲಿ ಧರ್ಮಧ್ವಜ ಅವರೋಹಣ, ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಗ್ರಾಮಕ್ಕೆ ಕರೆದುಕೊಂಡು ಹೋಗುವ ಮೂಲಕ ಜಾತ್ರೆ ಮುಕ್ತಾಯವಾಗಲಿದೆ ಎಂದು ಶಂಭುನಾಥ ಸ್ವಾಮೀಜಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.