ADVERTISEMENT

ಪೋಕ್ಸೊ ಕಾಯ್ದೆ ಕುರಿತು ಜಾಗೃತಿ ಮೂಡಿಸಿ

ಜಿಲ್ಲಾ ಮಟ್ಟದ ಬಾಲನ್ಯಾಯ ಸಮಿತಿ ಸಭೆಯಲ್ಲಿ ನ್ಯಾ. ಹೇಮಾವತಿ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 3:09 IST
Last Updated 28 ಸೆಪ್ಟೆಂಬರ್ 2025, 3:09 IST
ಹಾಸನದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಹೇಮಾವತಿ ಮಾತನಾಡಿದರು.
ಹಾಸನದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಹೇಮಾವತಿ ಮಾತನಾಡಿದರು.   

ಹಾಸನ: ಪೋಕ್ಸೊ ಕಾಯ್ದೆ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಹೇಮಾವತಿ, ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಪೋಕ್ಸೊ ಸಮಿತಿ ಮತ್ತು ಜಿಲ್ಲಾ ಮಟ್ಟದ ಬಾಲನ್ಯಾಯ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಸಂಕಷ್ಟಕ್ಕೆ ಸಿಲುಕುವವರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ನಿಗಾ ವಹಿಸಬೇಕು ಎಂದರು.

ADVERTISEMENT

ಪೋಕ್ಸೊ ಕಾಯ್ದೆ ಅಡಿ ಶಿಕ್ಷೆ ಆಗಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಚಾರವಾದರೆ, ಜನರಲ್ಲಿ ಸ್ಪಲ್ಪ ಭಯ ಬರುತ್ತದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಲು ಸಾಧ್ಯವಾಗುತ್ತದೆ. ವೃತ್ತಿಗೆ ದ್ರೋಹ ಮಾಡಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದರು.

ಪ್ರಕರಣಗಳನ್ನು ಕಡಿಮೆ ಮಾಡಲು ಎಲ್ಲರ ಪ್ರಯತ್ನ ಅತ್ಯಗತ್ಯ. ಸಾರ್ವಜನಿಕರಿಗೆ ಹೆಚ್ಚು ಕಾನೂನಿನ ಅರಿವು ಮೂಡಿಸಬೇಕು. ಸುಶಿಕ್ಷಿತ ಸಂಸ್ಕಾರವನ್ನು, ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು. ಇಲ್ಲವಾದಲ್ಲಿ ಮಕ್ಕಳಲ್ಲಿ ಅಪರಾಧದ ಸಂಖ್ಯೆ ಹೆಚ್ಚಳವಾಗುವುದು. ಈ ಬಗ್ಗೆ ಪೋಷಕರು, ಶಿಕ್ಷಕರು, ಸಮುದಾಯ, ಸಮಾಜ ಎಲ್ಲರೂ ಒಂದಾಗಿ ಶ್ರಮಿಸಬೇಕು. ಮಕ್ಕಳಲ್ಲಿ ಅಪರಾಧಿಯ ಭಾವನೆ ಬೆಳೆಯದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಮಕ್ಕಳನ್ನು ನಾವು ಕೇವಲ ಶಿಕ್ಷಣವಂತರನ್ನಾಗಿ ಮಾಡುತ್ತಿದ್ದೇವೆಯೇ ಹೊರತು, ಸಂಸ್ಕಾರವಂತರನ್ನಾಗಿ ರೂಪಿಸುತ್ತಿಲ್ಲ. ಇದರ ಪರಿಣಾಮವೇ ಪೋಕ್ಸೊದಂತಹ ಹೀನಕೃತ್ಯಗಳು, ಅಪರಾಧಗಳಲ್ಲಿ ಗಣನೀಯ ಏರಿಕೆಯಾಗುತ್ತಿದೆ ಎಂದರು.

ಹೈಕೋರ್ಟ್ ನಿರ್ದೇಶನದ ಮೇರೆಗೆ ಪ್ರತಿ ಜಿಲ್ಲಾ ಮಟ್ಟದಲ್ಲಿ ಪೋಕ್ಸೊ ಸಮಿತಿ ಮತ್ತು ಬಾಲನ್ಯಾಯ ಸಮಿತಿ ರಚಿಸಲಾಗಿದೆ. ಅದರನ್ವಯ ಪ್ರತಿ ತಿಂಗಳು ಇದಕ್ಕೆ ಪರಿಶೀಲನಾ ಸಭೆ ನಡೆಸಲಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಸಮಗ್ರ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಎಲ್ಲರ ಸಮನ್ವಯದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ನ್ಯಾಯಾಲಯಗಳು ಕೇವಲ ಪ್ರಕರಣಗಳಲ್ಲಿ ವಿಚಾರಣೆ ನಡೆಸಿ, ತೀರ್ಪು ನೀಡುವುದಕ್ಕಷ್ಟೇ ಸೀಮಿತವಾಗದೇ ಅರಿವು ಮೂಡಿಸುವ ಕೆಲಸ ಮಾಡುತ್ತಿವೆ. ಜಿಲ್ಲಾ ಮಟ್ಟದ ಅನುಪಾಲನಾ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿಸುವ ಮೂಲಕ ಮಕ್ಕಳಿಗೆ ರಕ್ಷಣೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಬಾಲನ್ಯಾಯ ಮಂಡಳಿಯಲ್ಲಿ ಸಂಘರ್ಷಕ್ಕೊಳಗಾದ ಮಕ್ಕಳಿಗೆ ಅಪರಾಧಿಯ ಮನೋಭಾವ ಬೆಳೆಯದಂತೆ ಮನೆಯ ವಾತಾವರಣ ಕಲ್ಪಿಸಿ, ಅವರನ್ನು ಉತ್ತಮ ಪ್ರಜೆಗಳಾಗುವಂತೆ ರೂಪಿಸಲಾಗುವುದು. ಶೀಘ್ರವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಬಾಲನ್ಯಾಯ ಮಂಡಳಿಯ ಅಧ್ಯಕ್ಷರೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ಗಿರಿಗೌಡ ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ರಮೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ದಿಲೀಪ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಮಧುಕುಮಾರಿ ಎಂ.ಎಸ್., ಕಾನೂನು ನೆರವು ಅಭಿರಕ್ಷಕರು, ಪ್ಯಾನಲ್ ವಕೀಲರು, ಮತ್ತಿತರರು ಹಾಜರಿದ್ದರು.

ಶಾಲೆ–ಕಾಲೇಜುಗಳಲ್ಲಿ ಅರಿವು ಮೂಡಿಸಿ

ಪ್ರತಿ ಶಾಲಾ– ಕಾಲೇಜುಗಳಲ್ಲಿ ನಿರಂತರವಾಗಿ ಪೋಕ್ಸೊ ಕಾಯ್ದೆ ಮಕ್ಕಳ ಅಪರಾಧಗಳ ಬಗ್ಗೆ ಅರಿವು ಕಾರ್ಯಕ್ರಮ ನಡೆಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶೆ ದಾಕ್ಷಾಯಿಣಿ ಜಿ.ಕೆ. ಸೂಚಿಸಿದರು. ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ ಕೇವಲ ಅಂಕಿ ಅಂಶಗಳ ಪರಿಶೀಲನೆ ಮಾಡದೇ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಲ್ಲಿ ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಅರಿವು ಮೂಡಿಸಲಾಗುತ್ತಿದೆ. ಪ್ರಕರಣಗಳಲ್ಲಿ ಉಚಿತ ಕಾನೂನು ನೆರವು ನೀಡಲಾಗುತ್ತಿದ್ದು ಕಾನೂನು ನೆರವು ಅಭಿರಕ್ಷರನ್ನು ಇದಕ್ಕಾಗಿ ನೇಮಿಸಿಕೊಳ್ಳಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.