ADVERTISEMENT

ಸೇವಾ ನಿವೃತ್ತಿ ಬಳಿಕ ಸಮಾಜ ಸೇವೆ: ಕಸ್ತೂರಿ ರಂಗನ್‌ಗೆ ರಾಜ್ಯೋತ್ಸವ ಗೌರವ

ರೈತರ ಅನುಕೂಲಕ್ಕಾಗಿ ಹುಲಿಕಲ್ಲು, ಶಿವಮೊಗ್ಗದಲ್ಲಿ ಸಹಕಾರ ಸಂಘಗಳ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 16:59 IST
Last Updated 31 ಅಕ್ಟೋಬರ್ 2021, 16:59 IST
ಎಚ್‌.ಆರ್‌. ಕಸ್ತೂರಿ ರಂಗನ್‌
ಎಚ್‌.ಆರ್‌. ಕಸ್ತೂರಿ ರಂಗನ್‌   

ಹಾಸನ: ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹುಲಿಕಲ್ಲು ಗ್ರಾಮದ ನಿವೃತ್ತ ಐಪಿಎಸ್‌ ಅಧಿಕಾರಿ ಎಚ್‌.ಆರ್‌. ಕಸ್ತೂರಿ ರಂಗನ್‌ ಅವರು 2020–21ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೇವಾ ನಿವೃತ್ತಿ ಬಳಿಕ ಅವರ ಸಮಾಜ ಸೇವೆ ಪರಿಗಣಿಸಿ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಅವರು, 1942ರಲ್ಲಿ ಜನಿಸಿದರು. ಹುಲಿಕಲ್‌ನಲ್ಲಿ ಕೃಷಿ ಜಮೀನು ಹಾಗೂ ಮನೆ ಹೊಂದಿದ್ದಾರೆ.

ರೈತರ ಅನುಕೂಲಕ್ಕಾಗಿ ಆರು ವರ್ಷದ ಹಿಂದೆ ಗ್ರಾಮದಲ್ಲಿ ‘ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣಾ ಸಹಕಾರ ಸಂಘ’ ಸ್ಥಾಪಿಸಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುಲಿಕಲ್ಲು ಗ್ರಾಮದಲ್ಲಿ ಮತ್ತೊಂದು ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಶಿವಮೊಗ್ಗದಲ್ಲಿ 2002ರಲ್ಲಿ ಅಡಿಕೆ ಮಾರಾಟಕ್ಕಾಗಿ ಸಹಕಾರ ಸಂಘ ಸ್ಥಾಪಿಸಿದ್ದಾರೆ.

ADVERTISEMENT

1970ರಲ್ಲಿ ಬೀದರ್‌ ಜಿಲ್ಲೆಯ ಭಾಲ್ಕಿಯಲ್ಲಿ ಡಿ.ವೈ.ಎಸ್ಪಿಯಾಗಿ ಸೇವೆ ಆರಂಭಿಸಿದ ಅವರು, ಕೊಡಗು, ಮೈಸೂರು, ದಕ್ಷಿಣ ಕನ್ನಡ, ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.ಬೆಂಗಳೂರು ಮೆಟ್ರೋ ಪಾಲಿಟನ್‌ ಟಾಸ್ಕ್‌ಫೋರ್ಸ್‌ ಕರ್ನಾಟಕ ವಿದ್ಯುತ್‌ ಮಂಡಳಿ ಐಜಿಪಿಯಾಗಿ ಸೇವೆ ಸಲ್ಲಿಸಿ 2002ರಲ್ಲಿ ನಿವೃತ್ತಿಯಾಗಿದ್ದಾರೆ.

1983ರಲ್ಲಿ ಅತ್ಯುತ್ತಮ ಕೆಲಸಕ್ಕಾಗಿ ಮುಖ್ಯಮಂತ್ರಿ ಚಿನ್ನದ ಪದಕ ಹಾಗೂ ನಗದು, 1988ರಲ್ಲಿ ರಾಷ್ಟ್ರಪತಿಗಳ ಪೊಲೀಸ್‌ ಚಿನ್ನದ ಪದಕ, 1999ರಲ್ಲಿ ರಾಷ್ಟ್ರಪತಿ ಪೊಲೀಸ್‌ ಚಿನ್ನದ ಪದಕ ಪಡೆದಿದ್ದಾರೆ.

‘ರಾಜ್ಯೋತ್ಸವ ಪ್ರಶಸ್ತಿ ನಿರೀಕ್ಷೆ ಇರಲಿಲ್ಲ. ಪ್ರಶಸ್ತಿ ಬಂದಿರುವುದು ಸಂತೋಷ ಉಂಟು ಮಾಡಿದೆ. ಪೊಲೀಸ್ ವೃತ್ತಿಯಲ್ಲಿ ಸಾಕಷ್ಟು ಜನರಿಗೆ ಅನುಕೂಲವಾಗುವ ರೀತಿ ಕರ್ತವ್ಯ ನಿರ್ವಹಿಸಿದ್ದೇನೆ. ನಿವೃತ್ತಿ ಬಳಿಕ ರೈತರಿಗೆ ಅನೂಕೂಲಕ್ಕಾಗಿ ಶಿವಮೊಗ್ಗ ಮತ್ತು ಹುಲಿಕಲ್ಲು ಗ್ರಾಮದಲ್ಲಿ ಸಹಕಾರ ಸಂಘಗಳನ್ನು ಸ್ಥಾಪನೆ ಮಾಡಿದ್ದೇನೆ’ ಎಂದು ಎಚ್‌.ಆರ್‌. ಕಸ್ತೂರಿ ರಂಗನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.