ADVERTISEMENT

ರಸ್ತೆ ಅಭಿವೃದ್ಧಿಗೆ ಬರ ಪರಿಹಾರ ಹಣ: ರೈತ ಸಂಘದ ಕೊಟ್ಟೂರು ಶ್ರೀನಿವಾಸ್‌ ಖಂಡನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 12:01 IST
Last Updated 29 ಜನವರಿ 2019, 12:01 IST
ಕೊಟ್ಟೂರು ಶ್ರೀನಿವಾಸ್‌
ಕೊಟ್ಟೂರು ಶ್ರೀನಿವಾಸ್‌   

ಹಾಸನ : ‘ಬರ ಪರಿಹಾರಕ್ಕೆ ಬಿಡುಗಡೆಯಾದ ಹಣವನ್ನು ಸಚಿವ ಎಚ್.ಡಿ.ರೇವಣ್ಣ ಅವರು ರಸ್ತೆ ಕಾಮಗಾರಿಗೆ ವಿನಿಯೋಗಿಸಿದ್ದಾರೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್ ಆರೋಪಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಹಿಂದೆ 60 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುತ್ತಿದ್ದ ಆಲೂಗೆಡ್ಡೆ ಪ್ರದೇಶ, ಈಗ 20 ಸಾವಿರ ಹೆಕ್ಟೇರ್ ಗೆ ಇಳಿದಿದೆ. ಬೆಳೆ ವಿಮೆ ಕಟ್ಟಿಸಿಕೊಳ್ಳುವಾಗ ಸರ್ಕಾರ ಮತ್ತು ಇಲಾಖೆಗಳು ತೋರುವ ಉತ್ಸಾಹವನ್ನು ವಿಮೆ ನೀಡುವಾಗ ತೋರುತ್ತಿಲ್ಲ. ಬೇಸಿಗೆ ಆರಂಭಕ್ಕೂ ಮುನ್ನವೇ ಬಹುತೇಕ ಕಡೆಗಳಲ್ಲಿ ಜನರು ಕುಡಿಯುವ ನೀರಿಗೆ ಜನರು ಪರಿತಪಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬರ ಪರಿಹಾರದ ಹಣವನ್ನು ರಸ್ತೆ ಅಭಿವೃದ್ಧಿಗೆ ವಿನಿಯೋಗಿಸುತ್ತಿರುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಆಲೂಗೆಡ್ಡೆ ಸಂಸ್ಕರಣ ಕೇಂದ್ರ ನಿಷ್ಕ್ರಿಯವಾಗಿದೆ. ಪ್ರತಿ ಬಾರಿಯೂ ಆಲೂಗೆಡ್ಡೆ ಬಿತ್ತನೆ ಬೀಜ ನೀಡುವಾಗ ತೊಟಗಾರಿಕೆ ಇಲಾಖೆ ಖಾಸಗಿ ಕಂಪನಿಗಳೊಂದಿಗೆ ಶಾಮೀಲಾಗಿ ಮೋಸ ಮಾಡುತ್ತಿದೆ. ಇದರ ವಿರುದ್ಧ ಹೋರಾಟ ರೂಪಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಸದಸ್ಯತ್ವ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ADVERTISEMENT

ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ, ಬೇಲೂರು, ಸಕಲೇಶಪುರ ಹಾಗೂ ಅರಕಲಗೂಡಿನಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲಾಗಿದೆ. ಆದರೆ, ಸರ್ಕಾರ ಕೇಳಿರುವ ದಾಖಲೆಗಳನ್ನು ಒದಗಿಸಲಾಗದೆ ರೈತರು ನೋಂದಣಿ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ. ಮೂರು ತಾಲ್ಲೂಕುಗಳಿಂದ ಅಂದಾಜು 120 ರೈತರು ಮಾತ್ರವೇ ನೋಂದಣಿ ಮಾಡಿಕೊಂಡಿದ್ದಾರೆ. ಆದ್ದರಿಂದ ಸರ್ಕಾರ ತನ್ನ ನಿಯಮಗಳನ್ನು ಸಡಿಲ ಮಾಡಬೇಕು ಎಂದರು ಒತ್ತಾಯಿಸಿದರು.

ಜೋಳಕ್ಕೆ ಸೈನಿಕ ಹುಳು ಬಾಧೆ, ಆಲೂಗೆಡ್ಡೆಗೆ ಅಂಗಮಾರಿ, ಕಾಫಿ ಹಾಗೂ ಮೆಣಸಿಗೆ ಕೊಳೆ ರೋಗ. ಹೀಗೆ ವಿವಿಧ ಕಾರಣಗಳಿಂದ ಬೆಳೆ ನಾಶವಾಗಿದೆ. ಅರಸೀಕೆರೆ ಮತ್ತು ಚನ್ನರಾಯಪಟ್ಟಣ ಭಾಗದಲ್ಲಿ ತೇವಾಂಶ ಕೊರತೆಯಿಂದ ಲಕ್ಷಾಂತರ ತೆಂಗಿನ ಮರಗಳು ನಾಶವಾದರೂ ಸರ್ಕಾರ ಪರಿಹಾರ ನೀಡಿಲ್ಲ ಎಂದರು.

ರೈತ ಮುಖಂಡ ಶ್ರೀಕಂಠ ದೊಡ್ಡೇರಿ ಮಾತನಾಡಿ, ಆಲೂಗೆಡ್ಡೆ ಬಿತ್ತನೆ ಪ್ರದೇಶ ಪ್ರತಿ ವರ್ಷ ಕಡಿಮೆಯಾಗಲು ಪ್ರಮುಖ ಕಾರಣ ಅಂಗಮಾರಿ ರೋಗ. ತಜ್ಞರ ಸಮಿತಿ ರಚಿಸಿ ರೋಗದ ಮೂಲ ಕಾರಣ ಕಂಡು ಹಿಡಿದು ಸೂಕ್ತ ಪರಿಹಾರ ನೀಡುವಂತೆ 8 ವರ್ಷಗಳಿಂದ ಜಿಲ್ಲಾಡಳಿತಕ್ಕೆ ಒತ್ತಡ ಹೇರಿದರೂ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರಾದ ನಂಜೇಗೌಡ, ಹಿರೀಸಾವೆ ಟಿ.ಎನ್.ನಿಂಗೇಗೌಡ, ಸಿ.ಎಲ್.ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.