ADVERTISEMENT

ಆರ್‌ಸಿಪಿಇ ವಿರುದ್ಧ ರೈತರ ಪ್ರತಿಭಟನೆ

ಕೃಷಿ ಮತ್ತು ಹೈನು ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ: ಆತಂಕ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 12:27 IST
Last Updated 25 ಅಕ್ಟೋಬರ್ 2019, 12:27 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಹಸಿರುಸೇನೆ ಹಾಗೂ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಹಸಿರುಸೇನೆ ಹಾಗೂ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಹಾಸನ: ‘ರೈತರಿಗೆ ಮರಣ ಶಾಸನವಾಗಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ವ್ಯಾಪಾರ ಒಪ್ಪಂದ (ಆರ್‌ಸಿಪಿಇ)ಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಬೃಹತ್‌ ಕೈಗಾರಿಕಾ ಆರ್ಥಿಕತೆ ಹೊಂದಿರುವ ಚೀನಾ, ಜಪಾನ್‌, ದಕ್ಷಿಣಾ ಕೊರಿಯಾ, ಆಸ್ಟ್ರೇಲಿಯಾ ದಂತಹ 15 ದೇಶಗಳೊಂದಿಗೆ ಆರ್‌ಸಿಇಪಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ವಿದೇಶಿ ಆಮದು ಮೇಲೆ ಶೇಕಡಾ 80 ರಿಂದ 95ರಷ್ಟು ಸುಂಕ ತೆಗೆದು ಹಾಕುವ ನಿಬಂಧನೆ ಒಳಗೊಂಡಿದೆ. ಇದು ಕೃಷಿ ಮತ್ತು ಹೈನು ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಆಗ್ನೇಯ ರಾಷ್ಟ್ರಗಳ ಒಕ್ಕೂಟ ಸದಸ್ಯ ರಾಷ್ಟ್ರಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸುಂಕ ರಹಿತವಾಗಿ ಒಪ್ಪಂದದ ಅನ್ವಯ ಕಡಿಮೆ ದರದಲ್ಲಿ ಹಾಲು ಹಾಗೂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದರಿಂದ ಹೈನುಗಾರಿಕೆ ಉದ್ಯಮ ನಾಶವಾಗಲಿದೆ. ಆದ್ದರಿಂದ ಹಾಲು ಆಮದು ನೀತಿಯನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.

ADVERTISEMENT

ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟರೂ ಶ್ರೀನಿವಾಸ್‌ ಮಾತನಾಡಿ, ’ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಎರಡು ವರ್ಷ ಬೆಳೆ ಸಂಪೂರ್ಣ ನಾಶವಾಗಿದೆ. ಇದಕ್ಕೆ ಪರಿಹಾರ ಕೊಟ್ಟಿಲ್ಲ. ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಮನವಿ ಸ್ವೀಕರಿಸಿ ಮಾತನಾಡಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌, ನವೆಂಬರ್‌ ಎರಡನೇ ವಾರದಲ್ಲಿ ಅಧಿಕಾರಿಗಳು, ರೈತರ ಸಭೆ ಕರೆದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಸಂಘ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್, ಮುಖಂಡರಾದ ಬಳ್ಳೂರು ಸ್ವಾಮಿಗೌಡ, ಕೆ.ಎಂ.ರಾಜೇಗೌಡ, ಯೋಗಣ್ಣ, ದೊಡ್ಡಳ್ಳಿ ಮಂಜೇಗೌಡ, ಮೇಣೇನಹಳ್ಳಿ ಸ್ವಾಮಿ, ಪದ್ಮಪ್ರಭು, ಭೋಗ ಮಲ್ಲೇಶ, ತ್ಯಾವಿಹಳ್ಳಿ ಲಕ್ಷ್ಮಣ, ಡಿಸಿಸಿ ಮುಖಂಡ ರಾಜಶೇಖರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.