ADVERTISEMENT

ಕೆಸರಿನಲ್ಲಿ ಸಿಲುಕಿ ನರಳುತ್ತಿದ್ದ ಮರಿಯಾನೆ ಸಕ್ರೆಬೈಲ್‌ ಬಿಡಾರಕ್ಕೆ ಸ್ಥಳಾಂತರ

ಕಾಫಿ ತೋಟದ ಕೆಸರಿನಲ್ಲಿ ಸಿಲುಕಿ ನರಳುತ್ತಿದ್ದ ಮರಿಯಾನೆಗೆ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 13:50 IST
Last Updated 3 ಅಕ್ಟೋಬರ್ 2020, 13:50 IST
ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮರಿ ಆನೆಗೆ ಚಿಕಿತ್ಸೆ ನೀಡಲಾಯಿತು.
ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮರಿ ಆನೆಗೆ ಚಿಕಿತ್ಸೆ ನೀಡಲಾಯಿತು.   

ಹಾಸನ: ಸಕಲೇಶಪುರ ತಾಲ್ಲೂಕಿನ ಮಳಲಿಯ ಅನಿಲ್‌ ಎಂಬುವರ ಕಾಫಿ ತೋಟದಲ್ಲಿ ಗಾಯಗೊಂಡು ಕೆಸರಿನಲ್ಲಿ ಸಿಲುಕಿ ನರಳುತ್ತಿದ್ದ ಮರಿಯಾನೆಗೆ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶನಿವಾರ ಚಿಕಿತ್ಸೆ ನೀಡಿ, ಶಿವಮೊಗ್ಗದ ಸಕ್ರೆಬೈಲ್‌ ಬಿಡಾರಕ್ಕೆ ಸ್ಥಳಾಂತರಿಸಲಾಯಿತು.

ಆನೆ ಮರಿ ತಾಯಿಯಿಂದ ಪರಿತ್ಯಕ್ತವಾಗಿ ಗುಂಡಿಗೆ ಸಿಲುಕಿ‌ ಮುಂಗಾಲು ಮುರಿದಿತ್ತು. ಹಾಸನ ಮತ್ತು ತುಮಕೂರು ಜಿಲ್ಲೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ.ಮುರಳಿ ಮತ್ತು ತಂಡದವರು ಆನೆಯ ಆರೋಗ್ಯ ಪರೀಕ್ಷಿಸಿದರು. ಮುಂಭಾಗದ ಎಡಗಾಲಿಗೆ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಎಕ್ಸ್‌ರೆ, ರಕ್ತದ ಮಾದರಿ ಪರೀಕ್ಷೆ ಮಾಡಲಾಯಿತು. ಡ್ರಿಪ್ ಹಾಕಿ, ಬಾಟಲಿಯಲ್ಲಿ ಹಾಲು ಕುಡಿಸಿ ಆರೈಕೆ ಮಾಡಲಾಗಿದೆ.

‘ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು, ಸೋಂಕು ತಗುಲಿಲ್ಲ. ಎಕ್ಸ್‌ರೆಯಲ್ಲಿ ಮುಂಗಾಲಿಗೆ ಪೆಟ್ಟು ಬಿದ್ದಿರುವುದು ಗೊತ್ತಾಗಿದೆ. ನೋವು ನಿವಾರಕ ಹಾಗೂ ನರಗಳ ಚೇತರಿಕೆಗಾಗಿ ಇಂಜೆಕ್ಷನ್‌ ನೀಡಲಾಗಿದೆ. ತಾಯಿ ತನ್ನ ಮರಿ ಬಿಟ್ಟು ದೂರ ಹೋಗಿರುವುದರಿಂದ ಎದೆ ಹಾಲು ಕುಡಿದಿರಲಿಲ್ಲ. ಈಗ ಆರೋಗ್ಯದಲ್ಲಿ ಸುಧಾರಣೆ ಆಗುತ್ತಿದೆ’ ಎಂದು ಡಾ.ಮುರಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.