ADVERTISEMENT

ಪುರಸಭೆ ಆಸ್ತಿ ಖಾಸಗಿಯವರ ಪಾಲು: ನ್ಯಾಯಾಂಗ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 1:58 IST
Last Updated 9 ಫೆಬ್ರುವರಿ 2021, 1:58 IST

ಸಕಲೇಶಪುರ: ‘ಇಲ್ಲಿಯ ಪುರಸಭೆಯ ಕೆಲ ಸಿಬ್ಬಂದಿ ಹಾಗೂ ಹಿಂದಿನ ಮುಖ್ಯಾಧಿಕಾರಿ ಅವಧಿಯಲ್ಲಿ ಹತ್ತಾರು ನಿವೇಶನಗಳ ಮೂಲ ದಾಖಲೆಗಳಿಗೆ ವೈಟ್ನರ್‌ ಹಚ್ಚಿ ಖಾಸಗೀಯವರ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಲಾಗಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ, ತಪ್ಪಿತಸ್ಥರನ್ನು ಜೈಲಿಗೆ ಕಳಿಸಬೇಕು’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಉಮೇಶ್ ಹಾಗೂ ಪಕ್ಷದ ಮುಖಂಡರು ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುರಸಭೆ ಕೆಲ ನೌಕರರು, ಸದಸ್ಯರು ಸೇರಿಕೊಂಡು ಸಾವಿರಾರು ಚದುರ ಅಡಿ ಪುರಸಭೆ ನಿವೇಶನ ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿದ್ದಾರೆ. ಉದಾಹರಣೆಗೆ ತೇಜಸ್ವಿ ಚಿತ್ರಮಂದಿರ ಮಾಲೀಕರ ದಾಖಲೆಗೆ 4200 ಅಡಿ ಜಾಗ ಅಕ್ರಮವಾಗಿ ಸೇರಿಸಿರುವುದು. ವಾರ್ಡ್ ನಂ 20ರ ಆಜಾದ್ ರಸ್ತೆ ಖಾತೆ ಸಂಖ್ಯೆ 3634/ 3304 ಕ್ಕೆ ಹೆಚ್ಚುವರಿಯಾಗಿ 870 ಅಡಿ ಜಾಗ ಅಕ್ರಮವಾಗಿ ಸೇರಿಸಲಾಗಿದೆ. ನಂತರ ಅಡಿಗೆ ₹ 1ರಂತೆ ಪುರಸಭೆಯಲ್ಲಿ ಕಟ್ಟಿಕೊಂಡು ಹಿಂದಿನ
ದಿನಾಂಕವನ್ನು ನೋಂದಾಯಿಸಿ 20-11-1994ರ ಸಾಮಾನ್ಯ ಸಭೆಯ ನಿರ್ಣಯವೆಂದು ತಿಳಿಸಿ, ಇತ್ತೀಚೆಗೆ ದಾಖಲೆ ಸೃಷ್ಟಿ ಮಾಡಿದ್ದಾರೆ’ ಎಂದು ಆರೋಪಿಸಿದರು.

ಪುರಸಭೆ ಮಾಜಿ ಸದಸ್ಯ ಮೋಹನ್ ಮಾತನಾಡಿ, ‘ಪುರಸಭೆಯಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಮಳಲಿ ಪಂಚಾಯತಿ ವ್ಯಾಪ್ತಿಯ ಕೆರೆ ಜಾಗವೊಂದನ್ನು ವ್ಯಕಿಯೊಬ್ಬರು ಕಬಳಿಸಿದ್ದಾರೆ. ಈ ಕುರಿತು ಪೌರಾಡಳಿತ ನಿರ್ದೇಶನಾಲಯ ತನಿಖೆಗೆ ಆದೇಶ ನೀಡಿದೆ’ ಎಂದರು.

ADVERTISEMENT

ಬಿಜೆಪಿ ಮುಖಂಡರಾದ ಹೆತ್ತೂರು ವಿಜಯ್‌ಕುಮಾರ್, ವಿನಯ್, ನಂದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.