ADVERTISEMENT

ಕಾನೂನು ಪ್ರಕಾರ ಮೀಸಲಾತಿ ನಿಗದಿ

ಪಾಳೇಗಾರಿಕೆ ಸಂಸ್ಕೃತಿ ನಡೆಯುವುದಿಲ್ಲ; ಶಾಸಕ ಪ್ರೀತಂ ಜೆ.ಗೌಡ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 18:10 IST
Last Updated 14 ಅಕ್ಟೋಬರ್ 2020, 18:10 IST
ಪ್ರೀತಂ ಜೆ.ಗೌಡ
ಪ್ರೀತಂ ಜೆ.ಗೌಡ   

ಹಾಸನ: ‘ಜನರು ಪ್ರಜಾಪ್ರಭುತ್ವದ ವ್ಯವಸ್ಥೆ ಇಷ್ಟ ಪಡುತ್ತಾರೆಯೇ ಹೊರತು ಪಾಳೇಗಾರಿಕೆ ಸಂಸ್ಕೃತಿಯಲ್ಲ’ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಹಿಂದೆ ಜಿಲ್ಲೆಯಲ್ಲಿ ಅವರು ಹೇಳಿದ್ದೆ ಶಾಸನ ಎಂಬಂತೆ ನಡೆಸಲಾಗುತಿತ್ತು. ಆದರೆ ಇಂದು ಬದಲಾಗಿದೆ. ಬಿಜೆಪಿ ಏಜೆಂಟರಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂಬ ಶಾಸಕ ರೇವಣ್ಣ ಆರೋಪ ಸುಳ್ಳು. ಅಧಿಕಾರಿಗಳು ಯಾವ ಪಕ್ಷದ ಕೈಗೊಂಬೆ ಅಲ್ಲ, ಜನರಿಗೆ ಬೇಕಾದ ಕೆಲಸ ಮಾಡುತ್ತಿದ್ದಾರೆ’ಎಂದರು.

‘ಕಾನೂನು ಪ್ರಕಾರವೇ ಹಾಸನ ನಗರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲು ನಿಗದಿ ಮಾಡಲಾಗಿದೆ. ಕಾಂಗ್ರೆಸ್‌ ಅವಧಿಯಲ್ಲಿ ನಗರಸಭೆಯ 35 ವಾರ್ಡ್‌ಗಳ ಮೀಸಲಾತಿ ಪ್ರಕಟಿಸಲಾಗಿತ್ತು. ಆದರೆ, ಹಿಂದಿನ ಕಾಂಗ್ರೆಸ್‌, ಸಮ್ಮಿಶ್ರ ಸರ್ಕಾರದಲ್ಲಿ 35 ವಾರ್ಡ್‌ಗಳ ಮೀಸಲಾತಿ ಬದಲಾವಣೆ ಮಾಡಲಾಯಿತು. ಆಗ ಏಕೆ ಬದಲಾಯಿಸಿದರು ? ಆಗ ಕಾನೂನು ಎಲ್ಲಿ ಹೋಗಿತ್ತು? ಅವರು ಮಾಡಿದರೆ ರಾಜಕಾರಣ, ಬೇರೆಯವರು ಮಾಡಿದರೆ ಕಾನೂನು ಬಾಹಿರ ಎನ್ನುವುದಾದರೆ ನಾವು ರಾಜಕಾರಣ ಮಾಡುತ್ತಿರುವುದು’ಎಂದು ಸ್ಪಷ್ಟಪಡಿಸಿದರು.

ADVERTISEMENT

‘ನಗರಸಭೆಯ ನಾಲ್ಕನೇ ವಾರ್ಡ್‌ನಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ಹೆಚ್ಚು ಇದ್ದಾರೆ. ಆದರೆ ಆ ವಾರ್ಡ್‌ ಅನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿದರು. ಇದರಲ್ಲಿ ಕಾನೂನು ಪಾಲನೆ ಆಗಿದೆಯೇ ’ಎಂದು ಪ್ರಶ್ನಿಸಿದ ಅವರು, ‘ಹಾಸನ ನಗರಸಭೆಯಲ್ಲಿ 14 ಬಿಜೆಪಿ ಬೆಂಬಲಿತ ಸದಸ್ಯರು ಇದ್ದಾರೆ. ನನ್ನ ಒಂದು ಮತ ಸೇರಿ 15 ಮತಗಳು ಇವೆ. 17 ಸ್ಥಾನ ಗೆದ್ದಿರುವ ಜೆಡಿಎಸ್‌ಗೂ ಬಹುಮತ ಇಲ್ಲ. ಕಾಂಗ್ರೆಸ್ ಮತ್ತು ಪಕ್ಷೇತರರು ಯಾರಿಗೆ ಮತ ಹಾಕುತ್ತಾರೆ ಎಂಬುದು ಗೊತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆ ಗಮನಿಸಿದರೆ ಕ್ಷೇತ್ರದ ಜನರು ಜೆಡಿಎಸ್‌ ಪರ ಇಲ್ಲ ಎಂಬುದು ಸ್ಪಷ್ಟವಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಸಹಕಾರ ನೀಡಬೇಕು’ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.