ADVERTISEMENT

ಹಾಸನ: ಜಿಲ್ಲಾಧಿಕಾರಿ ವಿರುದ್ಧ ಶಾಸಕ ರೇವಣ್ಣ ಗರಂ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 13:27 IST
Last Updated 24 ಫೆಬ್ರುವರಿ 2025, 13:27 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ‘ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರ ಜಿಲ್ಲಾಧಿಕಾರಿ ಖಾತೆಗೆ ಹಾಕಿರುವ ಹಣ ಬಿಡುಗಡೆ ಮಾಡುತ್ತಿಲ್ಲ. ಖಜಾನೆಯಲ್ಲಿ ಇಟ್ಟುಕೊಂಡು ಹಣ್ಣಿಟ್ಟು, ಕಾಯಿ ಒಡೆದು, ದೀಪ ಹಚ್ಚಿ ಪೂಜೆ ಮಾಡಲಿ’ ಎಂದು ಶಾಸಕ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ. ಸರ್ಕಾರ ಜಿಲ್ಲೆಗೆ ಅತಿವೃಷ್ಟಿ ಪರಿಹಾರವಾಗಿ ₹ 12 ಕೋಟಿ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿಗಳು ಅದನ್ನು ಹಾಗೆಯೇ ಇಟ್ಟುಕೊಂಡಿದ್ದಾರೆ. ರಸ್ತೆ ಗುಂಡಿ ಮುಚ್ಚಲು ಸಹ ಜಿಲ್ಲಾಧಿಕಾರಿ ಹಣ ಕೊಡುತ್ತಿಲ್ಲ. ಬಿಡುಗಡೆಯಾಗಿರುವ ಹಣವನ್ನು ಖಜಾನೆಯಲ್ಲಿಯೇ ಇಡುವ ವರ್ತನೆ ಇದೇ ರೀತಿ ಮುಂದುವರಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ಮಾಡುತ್ತೇನೆ’ ಎಂದು ಎಚ್ಚರಿಸಿದರು.

‘ರಾಜ್ಯ ಸರ್ಕಾರ ಸಂಪೂರ್ಣ ದ್ವೇಷದ ರಾಜಕಾರಣ ಮಾಡುತ್ತಿದೆ. ಜಿಲ್ಲೆಯಲ್ಲಿ ಕಾಮಗಾರಿಗಳೆಲ್ಲ ನಿಂತು ಹೋಗಿವೆ. ಹಾಸನ ವಿಶ್ವವಿದ್ಯಾಲಯ ಮುಚ್ಚಲು ಹೊರಟಿದ್ದಾರೆ. ಮುಚ್ಚುವ ಬದಲು ಅದಕ್ಕೆ ಬೇಕಾದ ಸೌಲಭ್ಯ ಒದಗಿಸಲಿ’ ಎಂದು ಒತ್ತಾಯಿಸಿದರು

ADVERTISEMENT

‘ಹಾಸನ ಕೃಷಿ ಕಾಲೇಜನ್ನು ಮಂಡ್ಯ ವಿ.ವಿಗೆ ಸೇರಿಸುತ್ತಿದ್ದೀರಿ ಕೃಷಿ ಕಾಲೇಜು, ಬೆಂಗಳೂರು ವಿ.ವಿ ವ್ಯಾಪ್ತಿಯಲ್ಲಿ ಇರಲಿ ಎಂದು ಆಗ್ರಹಿಸಿದ ಅವರು, ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇನೆ. ಜೆಡಿಎಸ್‌ನ ನಾಲ್ವರು ಶಾಸಕರು ಒಟ್ಟಾಗಿ ಇದನ್ನು ಪ್ರಶ್ನೆ ಮಾಡುತ್ತೇವೆ. ನಮ್ಮ ಹೋರಾಟಕ್ಕೆ ಬಿಜೆಪಿ ಶಾಸಕರ ಸಹಕಾರವನ್ನು ಕೋರುತ್ತೇನೆ’ ಎಂದರು.

‘ಸರ್ಕಾರಿ ನೌಕರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ ಅಧಿಕಾರಿಗಳಿಂದ ಹಣ ಲೂಟಿ ಮಾಡಲು ಜಿಲ್ಲಾ ಪಂಚಾಯಿತಿ ಚುನಾವಣೆ ಮುಂದೂಡುತ್ತಿದ್ದಾರೆ. ಮಂಡ್ಯ ಜಿಲ್ಲೆಗೆ ಏನು ಬೇಕು ಚೆಲುವರಾಯಸ್ವಾಮಿ ಮಾಡಲಿ. ಮಂಡ್ಯ ಜನರ ಬಗ್ಗೆ ನನಗೆ ವಿಶ್ವಾಸವಿದೆ. ಆ ಜಿಲ್ಲೆಗೆ ಕುಮಾರಸ್ವಾಮಿ ಮತ್ತು ನನ್ನ ಕೊಡುಗೆ ಏನಿದೆ ಎಂಬುದು ಜನರು ಗಮನಿಸಲಿ’ ಎಂದರು.

‘ಕುಮಾರಸ್ವಾಮಿಗೆ ಮಂಡ್ಯ ಜಿಲ್ಲೆ ಜನರು ರಾಜಕೀಯವಾಗಿ ಶಕ್ತಿ ಕೊಟ್ಟಿದ್ದಾರೆ. ಮಂಡ್ಯಕ್ಕೆ ಏನು ಮಾಡಿದ್ದೇನೆ ಎಂದು ಚರ್ಚೆಗೆ ಬರಲಿ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿಗೆ ರೇವಣ್ಣ ತಿರುಗೇಟು ನೀಡಿದ ಅವರು, ಅಭಿವೃದ್ಧಿ ಮಾಡಲಿ, ಇಲ್ಲವೇ ಜನರು ನಮಗೆ ಶಕ್ತಿ ಕೊಟ್ಟಾಗ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.