ADVERTISEMENT

ಸದೃಢ ಸಮಾಜದ ನಿರ್ಮಾಣ ಎಲ್ಲರ ಹೊಣೆ: ಸಂಸದ ಶ್ರೇಯಸ್‌ ಪಟೇಲ್‌

ನಶಾ ಮುಕ್ತ ಅಭಿಯಾನ, ಅಂಗಾಂಗ ದಾನ ಜಾಗೃತಿ ಜಾಥಾದಲ್ಲಿ ಸಂಸದ ಶ್ರೇಯಸ್‌ ಪಟೇಲ್‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 6:15 IST
Last Updated 19 ಫೆಬ್ರುವರಿ 2026, 6:15 IST
ಹಾಸನದಲ್ಲಿ ಬುಧವಾರ ನಶಾ ಮುಕ್ತ ಅಭಿಯಾನ ಹಾಗೂ ಅಂಗಾಂಗ ಜಾಗೃತಿ ಜಾಥಾ ನಡೆಯಿತು. ಸಂಸದ ಶ್ರೇಯಸ್ ಪಟೇಲ್‌, ಶಾಸಕ ಸ್ವರೂಪ್‌ ಪ್ರಕಾಶ್‌, ಬಿ.ಸಿ. ಭಗವಾನ್‌, ಜಿಲ್ಲಾಧಿಕಾರಿ ಕೆ.ಎಸ್‌.ಲತಾಕುಮಾರಿ, ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೆಜ್ಜೆ ಹಾಕಿದರು.
ಹಾಸನದಲ್ಲಿ ಬುಧವಾರ ನಶಾ ಮುಕ್ತ ಅಭಿಯಾನ ಹಾಗೂ ಅಂಗಾಂಗ ಜಾಗೃತಿ ಜಾಥಾ ನಡೆಯಿತು. ಸಂಸದ ಶ್ರೇಯಸ್ ಪಟೇಲ್‌, ಶಾಸಕ ಸ್ವರೂಪ್‌ ಪ್ರಕಾಶ್‌, ಬಿ.ಸಿ. ಭಗವಾನ್‌, ಜಿಲ್ಲಾಧಿಕಾರಿ ಕೆ.ಎಸ್‌.ಲತಾಕುಮಾರಿ, ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೆಜ್ಜೆ ಹಾಕಿದರು.   

ಹಾಸನ: ಮಾದಕ ವಸ್ತುಗಳ ವ್ಯಸನದಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿ ಎಂದು ಸಂಸದ ಶ್ರೇಯಸ್ ಪಟೇಲ್ ಬೇಸರ ವ್ಯಕ್ತಪಡಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ದಿಶಾ ಭೋದ್ ಫೌಂಡೇಶನ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ ಸಹಯೋಗದಲ್ಲಿ ಬುಧವಾರ ನಗರದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಆಯೋಜಿಸಿದ್ದ ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್ ಅಭಿಯಾನ, ಅಂಗಾಂಗ ದಾನ ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ಪೀಳಿಗೆಗೆ ಆರೋಗ್ಯಕರ, ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವುದು ಹಾಗೂ ನಶಾ ಮುಕ್ತ ಸಮಾಜವನ್ನು ಸ್ಥಾಪಿಸುವುದು ನಮ್ಮೆಲ್ಲರ ಹೊಣೆಗಾರಿಕೆ. ಇಂದಿನ ಕಾಲಘಟ್ಟದಲ್ಲಿ 8-10 ವರ್ಷದ ಮಕ್ಕಳೇ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ಸಮಾಜದ ಮುಂದಿನ ದೊಡ್ಡ ಯಕ್ಷ ಪ್ರಶ್ನೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭಗವಂತ ಕೊಟ್ಟ ಶಕ್ತಿಯನ್ನು ಸಮಾಜದ ಒಳಿತಿಗೆ ಬಳಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ನಶಾಮುಕ್ತ ಕರ್ನಾಟಕ, ಶ್ರೇಷ್ಠ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಬಿ.ಸಿ. ಭಗವಾನ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪದವಿ ಪಡೆಯುವುದಕ್ಕಷ್ಟೇ ಓದುತ್ತಿಲ್ಲ. ಅವರು ಆರೋಗ್ಯವಂತ ಹಾಗೂ ಜವಾಬ್ದಾರಿಯುತ ನಾಗರಿಕರಾಗಿ ದೇಶ ನಿರ್ಮಾಣಕ್ಕೆ ಸಜ್ಜಾಗುತ್ತಿದ್ದಾರೆ. ದೇಶದಲ್ಲಿ ಡ್ರಗ್ಸ್ ಸೇವನೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಕೆಲವು ಅಧ್ಯಯನಗಳ ಪ್ರಕಾರ ಶೇ 30 ರಿಂದ ಶೇ 40ರಷ್ಟು ಯುವಕರು ನಶಾ ಪದಾರ್ಥಗಳ ಬಳಕೆಯಲ್ಲಿ ತೊಡಗಿರುವುದು ಕಳವಳಕಾರಿ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ವಾಕಥಾನ್ ಮೂಲಕ 40 ಸಾವಿರಕ್ಕೂ ಹೆಚ್ಚು ಜನರನ್ನು ಜಾಗೃತಿಗೊಳಿಸಲಾಗಿದ್ದು, ಹಾಸನ 10ನೇ ಜಿಲ್ಲೆಯಾಗಿ ಈ ಅಭಿಯಾನಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವ್ಯಕ್ತಿಯ ಆರೋಗ್ಯದಷ್ಟೇ ದೇಶದ ಆರೋಗ್ಯವೂ ಮಹತ್ವದ್ದು. ನನ್ನ ಆರೋಗ್ಯದ ಜೊತೆಗೆ ಇತರರ ಆರೋಗ್ಯವನ್ನೂ ಕಾಪಾಡುತ್ತೇನೆ ಎಂಬ ಸಂಕಲ್ಪ ಪ್ರತಿಯೊಬ್ಬರೂ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು..

ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಸ್ವಸ್ಥ ಭಾರತವೇ ಶ್ರೇಷ್ಠ ಭಾರತ. ಪ್ರತಿಯೊಂದು ಕುಟುಂಬವೂ ನಶಾಮುಕ್ತವಾಗಿ ಇರಬೇಕು. ದೇಶವನ್ನು ದುರ್ಬಲಗೊಳಿಸಲು ಯುದ್ಧವೇ ಅಗತ್ಯವಿಲ್ಲ. ನಶೆ ಹಬ್ಬಿದರೆ ಸಾಕು ಎಂದು ಎಚ್ಚರಿಕೆ ನೀಡಿದರು.

ಒಬ್ಬರ ಅಂಗಾಂಗ ದಾನದಿಂದ ಎಂಟು ಜನರ ಜೀವ ಉಳಿಯಬಹುದು. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಅಂಗಾಂಗ ದಾನ ಮಾಡಿದ ಕುಟುಂಬಗಳನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಿಸಿದರು.

ನಾರ್ಕೋಟಿಕ್‌ ಬ್ಯುರೊ ಬೆಂಗಳೂರು ವಲಯದ ಇನ್‌ಸ್ಪೆಕ್ಟರ್ ವಿಕಾಸ್ ಸಿಂಗ್, ದಿಶಾ ಭೋದ್ ಫೌಂಡೇಶನ್ ನಿರ್ದೇಶಕ ಧ್ರುವಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಶ್ರೀನಿಧಿ,  ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ವೈದ್ಯರು ಉಪಸ್ಥಿತರಿದ್ದರು.

ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾಗವಹಿಸಿದ್ದ ಜನರು
ನಶಾಮುಕ್ತ ಹಾಸನ ನಿರ್ಮಾಣಕ್ಕೆ ಯುವಕರು ಮುಂಚೂಣಿಯಲ್ಲಿ ನಿಲ್ಲಬೇಕು. ಅಂಗಾಂಗ ದಾನ ಅತ್ಯುತ್ತಮ ದಾನವಾಗಿದ್ದು ಮತ್ತೊಬ್ಬರ ಜೀವಕ್ಕೆ ನಾವು ಉಸಿರಾಗಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ಪಸರಿಸಬೇಕು
. ಎಚ್.ಪಿ. ಸ್ವರೂಪ್ ಪ್ರಕಾಶ್‌ ಶಾಸಕ