ADVERTISEMENT

‘ನೀ ಇಲ್ಲದ ಜಗತ್ತು ಹೇಗಿರುತ್ತಿತ್ತು?’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:29 IST
Last Updated 9 ಜನವರಿ 2026, 7:29 IST
ಸಕಲೇಶಪುರದಲ್ಲಿ ಗುರುವಾರ ಲೇಖಕ ಮಲ್ನಾಡ್ ಮಹಬೂಬ್ ಅವರ ‘ನೀ ಇಲ್ಲದ ಜಗತ್ತು ಹೇಗಿರುತ್ತಿತ್ತು’ ಕೃತಿಯನ್ನು ರಂಗಕರ್ಮಿ ಪ್ರಸಾದ್ ರಕ್ಷಿದಿ ಲೋಕಾರ್ಪಣೆ ಮಾಡಿದರು. ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ್ ಪಾಲ್ಗೊಂಡಿದ್ದರು
ಸಕಲೇಶಪುರದಲ್ಲಿ ಗುರುವಾರ ಲೇಖಕ ಮಲ್ನಾಡ್ ಮಹಬೂಬ್ ಅವರ ‘ನೀ ಇಲ್ಲದ ಜಗತ್ತು ಹೇಗಿರುತ್ತಿತ್ತು’ ಕೃತಿಯನ್ನು ರಂಗಕರ್ಮಿ ಪ್ರಸಾದ್ ರಕ್ಷಿದಿ ಲೋಕಾರ್ಪಣೆ ಮಾಡಿದರು. ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ್ ಪಾಲ್ಗೊಂಡಿದ್ದರು   

ಸಕಲೇಶಪುರ: ಧರ್ಮಗಳೇ ಇಲ್ಲದ ಜಗತ್ತು, ದ್ವೇಷವೇ ಇಲ್ಲದ ಜಗತ್ತು, ರೋಗ ಇಲ್ಲದ ಜಗತ್ತು ಹೇಗಿರುತ್ತಿತ್ತು? ಲೇಖಕ ಮಲ್ನಾಡ್ ಮಹಬೂಬ್‌ ಅವರು ಇಂತಹ 31 ಪ್ರಶ್ನೆಗಳನ್ನು ಹಾಕಿಕೊಂಡು ಕಟ್ಟಿಕೊಟ್ಟಿರುವ ‘ನೀ ಇಲ್ಲದ ಜಗತ್ತು ಹೇಗಿರುತ್ತಿತ್ತು?’ ಕೃತಿ ವಾಸ್ತವ ಸಮಾಜಕ್ಕೆ ಹೆಚ್ಚು ಉಪಯುಕ್ತವಾಗಿದೆ ಎಂದು ಸಾಹಿತಿ ಪ್ರಸಾದ್ ರಕ್ಷಿದಿ ಹೇಳಿದರು.

ಪಟ್ಟಣದ ಲಯನ್ಸ್‌ ಸೇವಾ ಮಂದಿರದಲ್ಲಿ ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನ, ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸೇರಿದಂತೆ ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಲೇಖಕ ಮಲ್ನಾಡ್ ಮಹಬೂಬ್ ಅವರ ‘ನೀ ಇಲ್ಲದ ಜಗತ್ತು ಹೇಗಿರುತ್ತಿತ್ತು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಮನುಷ್ಯನನ್ನು ವಿನಾಶದೆಡೆಗೆ ದೂಡುತ್ತಿರುವ ಜಾತಿ, ಧರ್ಮ, ಗಡಿ, ಶತ್ರು, ದುರಾಸೆ ಇವೆಲ್ಲವೂ ಇಲ್ಲದೆ ಇದ್ದಿದ್ದರೆ ಈ ಜಗತ್ತು ಹೇಗಿರುತ್ತಿತ್ತು ಎಂದು ಲೇಖಕರ ಕಲ್ಪನೆಯ ಸೃಜನಶೀಲತೆಯನ್ನು ಅಕ್ಷರಗಳಲ್ಲಿ ಈ ಪುಸ್ತಕದ ಮೂಲಕ ದಾಖಲು ಮಾಡಿದ್ದಾರೆ. ಈ ಪುಸ್ತಕ ಲೇಖಕರ ಪ್ರಬುದ್ಧತೆ ಸಾಕ್ಷಿ ಎಂದರು. 

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಹಾಗೂ ಡ್ರಗ್ಸ್ ಮುಕ್ತ ಭಾರತ ಆಂದೋಲನದ ಪ್ರಮುಖರಾದ ಎಚ್.ಎಂ. ವಿಶ್ವನಾಥ್ ಮಾತನಾಡಿ, ಇಂದು ಸಮಾಜವನ್ನು ಪ್ರಶ್ನಿಸುವ, ಚಿಂತನೆಗೆ ಒತ್ತುವ ಸಾಹಿತ್ಯ ಅತ್ಯಂತ ಅಗತ್ಯ. ಮಲ್ನಾಡ್ ಮೆಹಬೂಬ್ ಅವರ ಬರಹಗಳು ಸಮಾಜವನ್ನು ಎಚ್ಚರಿಸುವ ಶಕ್ತಿಯನ್ನು ಹೊಂದಿವೆ. ಸಮಾಜದಲ್ಲಿ ಪ್ರತಿಯೊಬ್ಬರೂ ನಿತ್ಯ ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದಲ್ಲಾ ಒಂದು ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ. ನಾವು ಮಾಡುತ್ತಿರುವ ತಪ್ಪುಗಳಿಂದ ವೈಯಕ್ತಿಕ, ಕುಟುಂಬ ಹಾಗೂ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂದು ಒಮ್ಮೆಯೂ ಗಂಭೀರವಾಗಿ ತಿರುಗಿ ನೋಡುವುದಿಲ್ಲ. ಮಹಬೂಬ್‌ ಅವರ ಪುಸ್ತಕವನ್ನು ಒಮ್ಮೆ ಒದಿದರೆ ಎಲ್ಲಾ ರೀತಿಯ ಪ್ರಶ್ನೆಗಳು ಹಾಗೂ ಆ ಪ್ರಶ್ನೆಗಳಿಗೆ ನಮ್ಮಲ್ಲಿಯೇ ಉತ್ತರವನ್ನು ನಾವೇ ಹುಡುಕಬಹುದು. ಆ ಮೂಲಕವಾದರೂ, ಸ್ವಲ್ಪ ಪ್ರಮಾಣದಲ್ಲಿ ಸಾಮಾಜಿಕ ಬದಲಾವಣೆ ಸಾಧ್ಯವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಆನೆಮಹಾಲ್ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಕೆ. ಮುಸ್ಲಿಯಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜೈ ಮಾರುತಿ ದೇವರಾಜ್, ಪತ್ರಕರ್ತ ನಾಗರಾಜ್ ಹೆತ್ತೂರು, ಲೇಖಕ ಮಲ್ನಾಡ್ ಮೆಹಬೂಬ್, ಲೇಖಕ ಯೆಡೇಹಳ್ಳಿ ಆರ್. ಮಂಜುನಾಥ್, ಯೋಜನಾ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಯ್ಯದ್ ಮುಫೀಜ್, ನಮ್ಮ ಹಾಸನ ಟಿವಿ ಮುಖ್ಯಸ್ಥ ತೌಪೀಕ್ ಅಹಮದ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಾರದ ಗುರುಮೂರ್ತಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು, ಡಾ. ಫಾದರ್ ಫ್ರಾನ್ಸಿಸ್ ಚಿರಯ್ಕಲ್, ಚನ್ನವೇಣಿ ಎಂ.ಶೆಟ್ಟಿ, ಕೆ.ಜಿ. ಚಂದ್ರಶೇಖರ್ ಇದ್ದರು.

ಪರ್ತಕರ್ತರ ಸಂಘದ ಅಧ್ಯಕ್ಷ ಜೈ ಭೀಮ್ ಮಂಜು ಕಾರ್ಯಕ್ರಮ ನಿರೂಪಿಸಿದರು, ಪತ್ರಕರ್ತ ಯೋಗೀಶ್ ಸ್ವಾಗತಿಸಿದರು. ಸಾ.ಸು ವಿಶ್ವನಾಥ್ ಪ್ರಾರ್ಥಿಸಿದರು. ಹಸೆನಾರ್ ಆನೆಮಹಲ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.