ADVERTISEMENT

ಸಕಲೇಶಪುರ: 15 ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಉಳಿದ ಪುರಸಭೆ ವಾಣಿಜ್ಯ ಸಂಕೀರ್ಣ

ಜಾನೆಕೆರೆ ಆರ್‌.ಪರಮೇಶ್‌
Published 9 ಜನವರಿ 2026, 7:29 IST
Last Updated 9 ಜನವರಿ 2026, 7:29 IST
   

ಸಕಲೇಶಪುರ: ಪಟ್ಟಣದ ಹಳೆಯ ಬಸ್‌ನಿಲ್ದಾಣದಲ್ಲಿ ಸುಮಾರು 15 ವರ್ಷಗಳಿಂದಲೂ ಪುರಸಭೆಯ ಕಟ್ಟಡ ನಿರ್ಮಾಣ ಹಂತದಲ್ಲಿಯೇ ಇದ್ದು, ಧೂಮಪಾನ, ಮದ್ಯಪಾನ, ಶೌಚಾಲಯ, ಗಾಂಜಾ ಸೇವನೆ ಸೇರಿ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

ಹಿಂದಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆಯಿಂದ, ಕಟ್ಟಡವನ್ನು ಅವೈಜ್ಞಾನಿಕವಾಗಿ ಗೋದಾಮು ರೀತಿ ಕಟ್ಟಿದ್ದು, ಪೂರ್ಣಗೊಳಿಸದೇ ಹಾಳು ಬಿಡಲಾಗಿದೆ. ಪಟ್ಟಣದ ಹೃದಯ ಭಾಗದಲ್ಲಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಎದುರು ವ್ಯರ್ಥವಾಗಿ ಈ ಕಟ್ಟಡ ನಿಂತಿದ್ದು, ಸಭೆ ಸಮಾರಂಭಗಳ ದೊಡ್ಡ ಫ್ಲೆಕ್ಸ್‌ ಹಾಕಲು, ಬ್ಯಾನರ್ ಕಟ್ಟಲು ಬಳಸಲಾಗುತ್ತಿದೆ. ನೆಲ ಮಳಿಗೆಗಳ ಒಳಗೆ ದುರ್ವಾಸನೆ ಹಬ್ಬಿದೆ ಎನ್ನುತ್ತಾರೆ ಸುತ್ತಲಿನ ವ್ಯಾಪಾರಿಗಳು.

ಈ ನಿಲ್ದಾಣಕ್ಕೆ ಬರುವ ಬಸ್‌ಗಳು ನಿಲ್ದಾಣದ ಸುತ್ತಲೂ ಸಂಚರಿಸುತ್ತಿದ್ದವು. ಅಕ್ಕಪಕ್ಕ ಅಂಗಡಿಗಳಿದ್ದವು. ಜನ ಜಂಗುಳಿ ಇರುತ್ತಿತ್ತು. ಇಲ್ಲಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಾಣವಾಗಿದ್ದು, ಬಳಿಕ ಹಳೆ ನಿಲ್ದಾಣ ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡಲಾಯಿತು. ಅದೇ ಜಾಗದಲ್ಲಿ ಪುರಸಭೆಯಿಂದ ವಾಣಿಜ್ಯ ಸಂಕೀರ್ಣ ನಿರ್ಮಾಣ ಆರಂಭಿಸಲಾಯಿತು.

ADVERTISEMENT

‘ಬೆಳೆಯುತ್ತಿರುವ ಪಟ್ಟಣ, ಜನಸಂಖ್ಯೆ, ವಾಹನಗಳ ಅಗತ್ಯಕ್ಕೆ ತಕ್ಕ ಮುಂದಾಲೋಚನೆ ಇಲ್ಲದೇ, ಸಾರ್ವಜನಿಕರ ಅಭಿಪ್ರಾಯಗಳನ್ನೂ ಪಡೆಯದೇ ಕಟ್ಟಡ ಕಟ್ಟಿದ್ದಾರೆ’ ಎನ್ನುತ್ತಾರೆ ಪಟ್ಟಣದ ಹಿರಿಯರು.

‘ಅಕ್ಕಪಕ್ಕ ರಸ್ತೆಯಲ್ಲಿ ದ್ವಿಮುಖವಾಗಿ ವಾಹನಗಳ ಸಂಚಾರಕ್ಕೆ ಅಗತ್ಯವಿರುವಷ್ಟು ಜಾಗ ಬಿಟ್ಟಿಲ್ಲ. 100 ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿಯೇ ನಿರ್ಮಿಸಿದ್ದ ಹಳೆಯ ಬಸ್‌ ನಿಲ್ದಾಣ ಕಟ್ಟಡ ವ್ಯವಸ್ಥಿತವಾಗಿತ್ತು’ ಎಂದು ಸ್ಮರಿಸುತ್ತಾರೆ.

ಗುತ್ತಿಗೆದಾರರ ಸಮಸ್ಯೆಯಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಮೊದಲ ಹಂತದ ಮಳಿಗೆಗಳಿಗೆ ಗೋಡೆ, ರೋಲಿಂಗ್ ಶೆಟ್ಟರ್, ವಿದ್ಯುತ್ ಸಂಪರ್ಕ ಕಲ್ಪಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು.
ಟಿ.ಸಿ. ಮಹೇಶ್ವರಪ್ಪ, ಪುರಸಭೆ ಮುಖ್ಯಾಧಿಕಾರಿ
ಈ ಜಾಗವನ್ನು ಸಿಟಿ ಬಸ್‌ನಿಲ್ದಾಣಕ್ಕೆ ಬಳಕೆ ಮಾಡಬೇಕಾಗಿತ್ತು. ಸಾರ್ವಜನಿಕರ ಅನುಕೂಲ ಯೋಚನೆ ಮಾಡದೇ, ಮನಸ್ಸಿಗೆ ಬಂದಂತೆ ಕಟ್ಟಡ ಕಟ್ಟಿದ್ದಾರೆ. ಈ ಬಗ್ಗೆ ಕೂಡಲೇ ನಿರ್ಧಾರ ತೆಗೆದುಕೊಳ್ಳಲಾಗುವುದು
ಸಿಮೆಂಟ್ ಮಂಜು, ಶಾಸಕ
ಬೀದಿ ಬದಿ ವ್ಯಾಪಾರಿಗಳಿಗೆ ನೀಡಿ
‘ಹಳೆ ಬಸ್‌ ನಿಲ್ದಾಣ ಆವರಣದಲ್ಲಿ ತೆರವುಗೊಳಿಸಲಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಮಾಡುವವರೆಗೂ ಅಪೂರ್ಣ ಕಟ್ಟಡದ ನೆಲ ಮಳಿಗೆಯಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಕಲ್ಪಿಸುವುದು ಸೂಕ್ತ’ ಎಂದು ವರ್ತಕರು ಹೇಳುತ್ತಿದ್ದಾರೆ. ಇತ್ತೀಚೆಗೆ ಸ್ಥಳ ಪರಿಶೀಲಿಸಿದ ಶಾಸಕ ಸಿಮೆಂಟ್‌ ಮಂಜು ಅವರ ಗಮನವನ್ನೂ ಸೆಳೆದಿದ್ದಾರೆ. ‌ ‘ವ್ಯಾಪಾರ ಶುರು ಮಾಡಿದರೆ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತದೆ. ಬೀದಿ ಬದಿಯ ವ್ಯಾಪಾರಿಗಳಿಗೆ ಅನುಕೂಲವೂ ಆಗುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.