ADVERTISEMENT

ಸಂಭ್ರಮದ ಸಕಲೇಶ್ವರಸ್ವಾಮಿ ರಥೋತ್ಸವ

ದೇವರಿಗೆ ವಿವಿಧ ಪೂಜೆ; ಈಡುಗಾಯಿ ಸೇವೆ; ಗಮನ ಸೆಳೆದ ವೀರಗಾಸೆ ಕುಣಿತ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 3:22 IST
Last Updated 20 ಮಾರ್ಚ್ 2022, 3:22 IST
ಸಕಲೇಶಪುರದಲ್ಲಿ ಶನಿವಾರ ನಡೆದ ಸಕಲೇಶ್ವರಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು
ಸಕಲೇಶಪುರದಲ್ಲಿ ಶನಿವಾರ ನಡೆದ ಸಕಲೇಶ್ವರಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು   

ಸಕಲೇಶಪುರ: ಪಟ್ಟಣದ ರಾಜಬೀದಿಯಲ್ಲಿ ಸಕಲೇಶ್ವರಸ್ವಾಮಿ ರಥೋತ್ಸವ ಶನಿವಾರ ನೆರವೇರಿತು.

ಬೆಳಿಗ್ಗೆ 8.30ರಿಂದ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ನಡೆಯಿತು. ಪುಷ್ಪಾಲಂಕೃತ ರಥ ಮಧ್ಯಾಹ್ನ 12.30ಕ್ಕೆ ರಾಜಬೀದಿ ಪ್ರವೇಶಿಸಿತು. ದೇವಸ್ಥಾನ ಭಕ್ತ ಮಂಡಳಿ, ವ್ಯವಸ್ಥಾಪನಾ ಸಮಿತಿ, ಉತ್ಸವ ಸಮಿತಿ ಸದಸ್ಯರು ಹಾಗೂ ಭಕ್ತರು ಉತ್ಸಾಹದಿಂದ ರಥವನ್ನು ಎಳೆದರು. ಪ್ರತಿ 100 ಅಡಿ ದೂರಕ್ಕೆ ರಥ ನಿಲ್ಲಿಸಿ ಭಕ್ತರಿಂದ ಪೂಜೆ ಹರಕೆ ಹವನ, ಈಡುಗಾಯಿ ಸೇವೆಗೆ ಅವಕಾಶ ಕಲ್ಪಿಸಲಾಗಿತ್ತು.

ಮೆರವಣಿಗೆಯಲ್ಲಿ ಬಾಲಕಿಯರ ವೀರಗಾಸೆ ಕುಣಿತ ಗಮನ ಸೆಳೆಯಿತು. ನಾಲ್ಕೈದು ಕಡೆದ ವಿವಿಧ ಬ್ಯಾಂಡ್‌ಸೆಟ್‌, ಡೊಳ್ಳುಕುಣಿತ, ಮಲೆನಾಡಿನ ಕರಡಿ ವಾದ್ಯಕ್ಕೆ ಯುವಕರು ಕುಣಿದು ಕುಪ್ಪಳಿಸಿದರು.

ADVERTISEMENT

ಪಟ್ಟಣದ ಕೆಲವು ವರ್ತಕರು, ಯುವಕರು ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಫಲಾಹಾರ, ಸಿಹಿ, ತಂಪು ಪಾನೀಯ, ಮಜ್ಜಿಗೆ ವಿತರಿಸಿದರು. ದೇವಸ್ಥಾನ ಸಮಿತಿ ಹಾಗೂ ಪುರಸಭೆಯಿಂದಲೂ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಮಾರ್ಗ ಬದಲಾವಣೆ: ರಾಜಬೀದಿಯೇ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರ ವ್ಯವಸ್ಥೆಯನ್ನು ಬದಲಾಯಿಸಲಾಗಿತ್ತು.

ಮಂಗಳೂರು ಕಡೆಯಿಂದ ಬರುವ ವಾಹನಗಳನ್ನು ಆಜಾದ್‌ ರಸ್ತೆ ಮಾರ್ಗವಾಗಿ, ಹಾಸನ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳನ್ನು ಅಶೋಕ ರಸ್ತೆ ವಾಸವಿ ದೇವಸ್ಥಾನ ಬೀದಿ, ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆ ರಸ್ತೆ ಮಾರ್ಗವಾಗಿ ಬಿಡಲಾಗಿತ್ತು.

ಡಿವೈಎಸ್‌ಪಿ ಅನಿಲ್‌ಕುಮಾರ್, ಇನ್‌ಸ್ಪೆಕ್ಟರ್ ಚೈತನ್ಯ ಭದ್ರತಾ ವ್ಯವಸ್ಥೆ ಮಾಡಿದ್ದರು.

ಭಕ್ತ ಮಂಡಳಿ ಅಧ್ಯಕ್ಷ ಬ್ಯಾಕವರಳ್ಳೀ ಜಯಣ್ಣ, ಸಂಚಾಲಕ ಎಸ್‌.ಆರ್‌.ದೇವರಾಜು, ಕಾರ್ಯದರ್ಶಿ ಎಸ್‌.ಎನ್‌. ಅವಿನಾಶ್, ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.