ADVERTISEMENT

ಸಮಯ ವ್ಯರ್ಥ ಮಾಡದೆ, ಗುರಿ ಸಾಧಿಸಿ

ತುಮಕೂರು ರಾಮಕೃಷ್ಣ ಮಠದ ಸ್ವಾಮಿ ವೀರೇಶಾನಂದ ಸರಸ್ವತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 15:01 IST
Last Updated 18 ಜನವರಿ 2019, 15:01 IST
ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಮಾತನಾಡಿದರು.
ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಮಾತನಾಡಿದರು.   

ಹಾಸನ : ‘ಪ್ರತಿಯೊಬ್ಬರು ತಮ್ಮ ಸಾಮರ್ಥ್ಯವನ್ನು ಸರಿ ದಾರಿಯಲ್ಲಿ ಬಳಕೆ ಮಾಡಿಕೊಂಡರೆ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕಲು ಸಾಧ್ಯ’ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು.

ಹಾಸನಾಂಬ ಕಲಾಕ್ಷೇತ್ರದಲ್ಲಿ ವಿವಿಧ ಕಾಲೇಜುಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರಲ್ಲೂ ಏನಾದರೂ ಸಾಧಿಸುವ ಸಾಮರ್ಥ್ಯ ಹಾಗೂ ಪ್ರತಿಭೆ ಖಂಡಿತವಾಗಿಯೂ ಇರುತ್ತದೆ. ಹಾಗಾಗಿ ಅದರ ಸದ್ಬಳಕೆ ಆಗಬೇಕು. ಸಮಯ ವ್ಯರ್ಥ ಮಾಡದೆ ಗುರಿ ಮುಟ್ಟುವ ಕಡೆಗೆ ಗಮನ ಇಟ್ಟು ಕೊಂಡು ನಿರಂತರವಾಗಿ ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ADVERTISEMENT

ಬದುಕು ಕಟ್ಟಿಕೊಳ್ಳಲು ಉತ್ತಮರನ್ನು ನಿದರ್ಶನವಾಗಿ ಇಟ್ಟುಕೊಂಡು ಮುನ್ನಡೆಯಬೇಕು. ಆಗ ಮಾತ್ರ ಗುರಿ ಸಾಧನೆ ಸುಲಭವಾಗುತ್ತದೆ. ಒಮ್ಮೆ ಪ್ರಯತ್ನ ಮಾಡಿ ಸೋತರೂ ಪ್ರಯತ್ನಿಸುವುದನ್ನು ಬಿಡಬಾರದು. ಏಕೆಂದರೆ ಪ್ರಯತ್ನ ಮಾಡುವಲ್ಲಿ ವಿಫಲವಾದರೂ, ಪ್ರಯತ್ನವೇ ವಿಫಲವಾಗಲು ಬಿಡಬಾರದು ಎಂದು ಸಲಹೆ ನೀಡಿದರು.

ಸಮಾಜದಲ್ಲಿ ವಾಸ್ತವಿಕತೆಯಲ್ಲಿ ಬದುಕುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ದೌರ್ಬಲ್ಯಗಳನ್ನು ವರವೆಂಬಂತೆ ಜನರು ಮೆಚ್ಚಿಕೊಳ್ಳ ತೊಡಗಿದ್ದು, ಇದು ಸಮಾಜದ ದೊಡ್ಡ ದುರಂತ. ಇದೇ ರೀತಿ ಮುನ್ನಡೆದರೆ ದೇಶ ಅತಿ ದೊಡ್ಡ ವಿಪತ್ತು ಎದುರಿಸಬೇಕಾಗುತ್ತದೆ. ಸಂಕುಚಿತ ಮನೋಭಾವದಿಂದ ಜನರು ಹೊರಬಂದು ದೃಢತೆ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸದ ಅರಿವು ಇರಬೇಕು. ವೈಜ್ಞಾನಿಕವಾಗಿ ಪ್ರಜ್ಞಾವಂತರಾಗುವತ್ತ ಹೆಜ್ಜೆ ಇಡಬೇಕು ಎಂದು ನುಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಮರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ, ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ದೇವರಾಜು, ಬೇಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಕೆ.ಗೋಪಾಲ್, ಉಪನ್ಯಾಸಕ ಲಕ್ಷ್ಮೀನಾರಾಯಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.