ADVERTISEMENT

ಸುಳುಗೋಡಿನಲ್ಲಿ ಮತ್ತೆ ಶಿಲ್ಪ ಕಲಾಕೃತಿ ಪತ್ತೆ

ಅನೇಕ ವರ್ಷಗಳಿಂದ ಸಿಗುತ್ತಿರುವ ಜೈನ ಧರ್ಮಕ್ಕೆ ಸಂಬಂಧಿಸಿದ ಕಲಾ ಸಂಪತ್ತು

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 14:17 IST
Last Updated 23 ಜನವರಿ 2025, 14:17 IST
ಕೊಣನೂರು ಹೋಬಳಿಯ ಸುಳುಗೋಡ ಸೋಮವಾರ ಗ್ರಾಮದಲ್ಲಿ ಜಮೀನು ಉಳುಮೆ ಮಾಡುವ ವೇಳೆ ಸಿಕ್ಕಿರುವ ಕೆತ್ತನೆಯಿರುವ ಕಂಬದ ಆಕೃತಿ ಮತ್ತು ತೀರ್ಥಂಕರರ ಮೂರ್ತಿ.
ಕೊಣನೂರು ಹೋಬಳಿಯ ಸುಳುಗೋಡ ಸೋಮವಾರ ಗ್ರಾಮದಲ್ಲಿ ಜಮೀನು ಉಳುಮೆ ಮಾಡುವ ವೇಳೆ ಸಿಕ್ಕಿರುವ ಕೆತ್ತನೆಯಿರುವ ಕಂಬದ ಆಕೃತಿ ಮತ್ತು ತೀರ್ಥಂಕರರ ಮೂರ್ತಿ.   

ಕೊಣನೂರು: ಅರಕಲಗೂಡು ತಾಲ್ಲೂಕಿನ ಗಡಿಗ್ರಾಮ ಸುಳುಗೋಡು ಸೋಮವಾರ ಗ್ರಾಮದ ಬಸವೇಶ್ವರ ದೇವಾಲಯದ ಪಕ್ಕದ ಜಮೀನಿನಲ್ಲಿ ಜೈನ ಧರ್ಮದ ತೀರ್ಥಂಕರ ಹಾಗೂ ಕಲ್ಲಿನ ಸ್ತಂಭದ ಕಲಾಕೃತಿಯೊಂದು ಸಿಕ್ಕಿದೆ.

ಇಲ್ಲಿನ ಬಸವೇಶ್ವರ ದೇವಾಲಯದ ಸಮೀಪ ರೈತರು ತಮ್ಮ ಜಮೀನನ್ನು ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುವಾಗ ಸುಂದರವಾರ ಕೆತ್ತನೆಯಿರುವ ಕಂಬವನ್ನು ಹೋಲುವ ಶಿಲಾ ಸ್ತಂಭ ಮತ್ತು ತೀರ್ಥಂಕರರ ಕಲ್ಲಿನ ಮೂರ್ತಿ ಪತ್ತೆಯಾಗಿವೆ.

ಗ್ರಾಮದಲ್ಲಿ ಅನೇಕ ವರ್ಷಗಳಿಂದ ಜೈನ ಧರ್ಮಕ್ಕೆ ಸಂಬಂಧಿಸಿದ ವೈವಿಧ್ಯಮಯ ಶಿಲ್ಪಕಲಾಕೃತಿಗಳು ಸಿಗುತ್ತಲೇ ಇವೆ. 2015 ರಲ್ಲಿ ಚಾಮರ ಹಿಡಿದಿರುವ ಶಿಲಾಬಾಲಿಕೆಯನ್ನು ಹೋಲುವ 2 ಕಲಾಕೃತಿ ಮತ್ತು ಒಂದು ಕಂಬ ಪತ್ತೆಯಾಗಿದ್ದವು. ಕಳೆದ ವರ್ಷ ಬಳಪದ ಕಲ್ಲಿನ ಕಾಲಭೈರವನ ವಿಗ್ರಹ, ಕಲ್ಲಿನ ದೀಪ, ಕೆತ್ತನೆಯ ಕಂಬ, ನಿಷಧಿಗಲ್ಲು ಹಾಗೂ ಶಾಸನ ಕಂಬಗಳು ಸಿಕ್ಕಿದ್ದವು.

ADVERTISEMENT

ಈ ಹಿಂದೆ ಮಹಾವೀರನ ಆಕೃತಿ ಹೋಲುವ ವಿಗ್ರಹ ಕೂಡ ಗ್ರಾಮದ ಜಮೀನಿನಲ್ಲಿ ಸಿಕ್ಕಿದ್ದು, ಅದನ್ನು ಗ್ರಾಮದ ಯುವಕರು ದೇವಾಲಯದ ಮುಂಭಾಗದಲ್ಲಿ ಇಟ್ಟು ರಕ್ಷಿಸಿದ್ದಾರೆ. ಈ ಗ್ರಾಮದಲ್ಲಿ ಇದೇ ಮಾದರಿಯ ಇನ್ನೂ ಹಲವಾರು ಶಿಲಾವಷೇಶಗಳು ಲಭ್ಯವಿರಬಹುದು ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಹೇಮಾವತಿ ಹಿನ್ನೀರಿನಿಂದ ಸಂತ್ರಸ್ತರಾದ 15 ಗ್ರಾಮಗಳ ಜನರು 1963 ರಿಂದ ಈಚೆಗೆ ಸುಳಗೋಡು ಸೋಮವಾರ ಗ್ರಾಮದಲ್ಲಿ ವಾಸವಾಗಿದ್ದಾರೆ. ಈ ಗ್ರಾಮಕ್ಕೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳ ಬಗ್ಗೆ ನಿಖರ ಮಾಹಿತಿ ಯಾರಿಗೂ ತಿಳಿದಿಲ್ಲ. ಇಲ್ಲಿನ ಶಿಲಾವಶೇಷಗಳ ಬಗ್ಗೆ ವಿವರ ತಿಳಿಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ಉತ್ಪನನ ಮಾಡಬೇಕು. ಇಂತಹ ಜೈನಬಸದಿ, ಬಳಪದ ಕಲ್ಲಿನ ವಿಗ್ರಹ, ಕಲ್ಲಿನ ದೀಪ, ಕೆತ್ತನೆಯ ಕಂಬಗಳು, ನಿಷಧಿಗಲ್ಲು ಹಾಗೂ ಶಾಸನ ಕಂಬಗಳು ಮೊದಲಾದ ಶಿಲಾವಶೇಷಗಳನ್ನು ಸಂರಕ್ಷಿಸಿ ಒಂದು ರೂಪ ಕೊಡುವ ಅಗತ್ಯವಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಜೈನ ತೀರ್ಥಂಕರ ವಿಗ್ರಹ ಹಾಗೂ ಕೆತ್ತನೆಯುಳ್ಳ ಕಲ್ಲಿನ ಪುರಾತನ ಸ್ತಂಭ ಪತ್ತೆಯಾಗಿರುವ ಸ್ಥಳಕ್ಕೆ ತಹಶೀಲ್ದಾರ್ ಮಲ್ಲಿಕಾರ್ಜುನ್ ಎಚ್. ಮತ್ತು ಶಿರಸ್ತೇದಾರ ಸಿ.ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಹಶೀಲ್ದಾರ್‌ ಭೇಟಿ

ಜೈನ ತೀರ್ಥಂಕರ ವಿಗ್ರಹ ಹಾಗೂ ಕಲ್ಲಿನ ಪುರಾತನ ಸ್ತಂಭ ಪತ್ತೆಯಾಗಿರುವ ಸ್ಥಳಕ್ಕೆ ಅರಕಲಗೂಡು ತಹಶೀಲ್ದಾರ್ ಮಲ್ಲಿಕಾರ್ಜುನ ಎಚ್. ಮತ್ತು ಶಿರಸ್ತೇದಾರ ಸಿ.ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ‘ಸುಳುಗೋಡು ಸೋಮವಾರ ಗ್ರಾಮದ ಗೋಮಾಳದ ಜಮೀನಿನಲ್ಲಿ ರೈತರು ಉಳುಮೆ ಮಾಡುವಾಗ ಜೈನ ತೀರ್ಥಂಕರ ವಿಗ್ರಹ ಹಾಗೂ ಕಲ್ಲಿನ ಸ್ತಂಭ ಪತ್ತೆಯಾಗಿದ್ದು ಈ ಪ್ರದೇಶದಲ್ಲಿ ಇನ್ನು ಹೆಚ್ಚಿನ ಶಿಲಾವಶೇಷಗಳು ಸಿಗುವ ಸಾಧ್ಯತೆಯಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಪುರಾತತ್ವ ಇಲಾಖೆಯವರಿಗೆ ತಿಳಿಸಲಾಗಿದೆ ಎಂದು ಮಲ್ಲಿಕಾರ್ಜುನ್‌ ತಿಳಿಸಿದರು.  ಉಪ ತಹಶೀಲ್ದಾರ್ ಕುಮಾರ್ ಕಂದಾಯ ನಿರೀಕ್ಷಕ ಬಲರಾಮ್ ಗ್ರಾಮ ಆಡಳಿತ ಅಧಿಕಾರಿ ಮದನ್ ಹಾಗೂ ಗ್ರಾಮಸ್ಥರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.