
ಶ್ರವಣಬೆಳಗೊಳ (ಹಾಸನ): ಇಡೀ ಕರ್ನಾಟಕವೇ ಪುಣ್ಯಕ್ಷೇತ್ರ. ಸಂಸ್ಕೃತಿ, ಪರಂಪರೆ, ಅಧ್ಯಾತ್ಮವನ್ನು ರಕ್ಷಿಸುವ ಕೆಲಸವನ್ನು ಕನ್ನಡಿಗರು ಮಾಡುತ್ತಿದ್ದಾರೆ ಎಂದು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.
ಶಾಂತಿಸಾಗರ ಮಹಾರಾಜರ ಶ್ರವಣಬೆಳಗೊಳ ಭೇಟಿಯ ಶತಮಾನೋತ್ಸವದ ಅಂಗವಾಗಿ ಭಾನುವಾರ ನಡೆದ ಶಾಂತಿಸಾಗರ ಮಹಾರಾಜರ 10 ಅಡಿ ಎತ್ತರದ ಪ್ರತಿಮೆ ಅನಾವರಣ, ಅವರ ಚರಿತ್ರೆಯ ಶಿಲಾಶಾಸನ, ನಾಲ್ಕನೇ ಬೆಟ್ಟ ಶಾಂತಿಗಿರಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೈನ ಸಂಸ್ಕೃತಿ ಪ್ರತೀಕವಾಗಿರುವ ಶ್ರವಣಬೆಳಗೊಳ ಕ್ಷೇತ್ರ ಧಾರ್ಮಿಕತೆ, ಶಾಂತಿ, ತ್ಯಾಗದ ಸಂಕೇತವೂ ಆಗಿದೆ. ಭಾರತೀಯ ಸಂಸ್ಕೃತಿ, ಪರಂಪರೆಗೆ ಜೈನ ಧರ್ಮದ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.
ಶಾಂತಿಸಾಗರ ಮಹಾರಾಜರ ಪ್ರತಿಮೆ ಅನಾವರಣ ಮಾಡಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್
ತಮಿಳುನಾಡು ಹಾಗೂ ಜೈನ ಧರ್ಮದ ಮಧ್ಯೆ ಅವಿನಾಭಾವ ಸಂಬಂಧವಿದೆ. ತಮಿಳು ಸಾಹಿತ್ಯಕ್ಕೆ ಜೈನ ಧರ್ಮದ ಕೊಡುಗೆ ಅಪಾರವಾಗಿದೆ. ಅನೇಕ ಜೈನ ಮಠಗಳು, ಮಂದಿರಗಳು ತಮಿಳುನಾಡಿನಲ್ಲಿವೆ ಎಂದು ಹೇಳಿದರು.
ಶ್ರವಣಬೆಳಗೊಳ ಕ್ಷೇತ್ರದ ಅಭಿವೃದ್ಧಿಗೆ ಹಿಂದಿನ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಅಪಾರ ಶ್ರಮ ವಹಿಸಿದ್ದಾರೆ. 4 ಮಹಾಮಸ್ತಕಾಭಿಷೇಕ ನಡೆಸಿದ್ದಲ್ಲದೇ, ಪ್ರಾಕೃತ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ ಸ್ಥಾಪಿಸುವ ಮೂಲಕ ಜೈನ ಸಾಹಿತ್ಯದ ಅಧ್ಯಯನಕ್ಕೆ ಅವಕಾಶ ಮಾಡಿದರು. ಶಿಕ್ಷಣ, ಆರೋಗ್ಯ ಸೇರಿದಂತೆ ಸಮಾಜದ ಅಭಿವೃದ್ಧಿಗೆ ಭದ್ರವಾದ ಬುನಾದಿ ಹಾಕಿದವರು ಎಂದು ಸ್ಮರಿಸಿದರು.
ಅದೇ ಮಾರ್ಗದಲ್ಲಿ ಮುನ್ನಡೆಯುತ್ತಿರುವ ಇಂದಿನ ಅಭಿನವ ಚಾರುಕೀರ್ತಿ ಸ್ವಾಮೀಜಿಯವರು, ಶಾಂತಿಸಾಗರ ಮಹಾರಾಜರ ಭೇಟಿಯ ಶತಮಾನೋತ್ಸವ ಆಚರಿಸುವ ಮೂಲಕ ಧರ್ಮ ಪ್ರಜ್ಞೆ ಜಾಗೃತಿಯ ಕೆಲಸ ಮಾಡಿದ್ದಾರೆ. ಪ್ರತಿಮೆ, ಅವರ ಜೀವನ ಚರಿತ್ರೆಯ ಶಿಲಾಶಾಸನ ನಿರ್ಮಿಸುವ ಮೂಲಕ ಶಾಂತಿಸಾಗರ ಮಹಾರಾಜರ ತತ್ವ, ಸಿದ್ಧಾಂತ, ಸಂದೇಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಿದೆ ಎಂದು ಬಣ್ಣಿಸಿದರು.
ಶಾಂತಿ, ಅಹಿಂಸೆ, ಕರುಣೆಯ ಪ್ರತೀಕವಾಗಿ ಬಾಹುಬಲಿಯ ಕ್ಷೇತ್ರವಾಗಿರುವ ಶ್ರವಣಬೆಳಗೊಳದಲ್ಲಿ ಸಂತ ಪರಂಪರೆ ಪರಿಚಯಿಸುವ ಕಾರ್ಯಕ್ರಮ ಇದಾಗಿದೆ. ಧರ್ಮ, ಸಂಪ್ರದಾಯಗಳು ಕೇವಲ ಗ್ರಂಥದಲ್ಲಿ ಅಲ್ಲ, ಆಚರಣೆಯಲ್ಲಿವೆ ಎಂದು ತೋರಿಸಿದವರು ಶಾಂತಿಸಾಗರ ಮಹಾರಾಜರು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು.
ರಾಷ್ಟ್ರೀಯ ಚೇತನಯ ಉತ್ಸವವಾಗಿದೆ. ಸತ್ಯ, ಅಹಿಂಸೆಯ ಭಾರತೀಯ ಆತ್ಮವನ್ನು ಈ ಕಾರ್ಯಕ್ರಮ ಪ್ರತಿಬಿಂಬಿಸುತ್ತದೆ. ಈ ಪ್ರತಿಮೆಯ ಆತ್ಮಾವಲೋಕನಕ್ಕೆ ಪ್ರೇರಣೆ ನೀಡಲಿದೆ. ಶಾಂತಿಗಿರಿಯು ಸಾಧನೆ, ಅಧ್ಯಾತ್ಮದ ಬೆಟ್ಟವಾಗಿದೆ. ತಪ, ತ್ಯಾಗ, ಸಂಯಮದ ಸಾಕ್ಷಿಯಾಗಿ ನಿಲ್ಲಲಿದೆ ಎಂದರು.
ಅಹಿಂಸೆ, ತ್ಯಾಗ, ಮೈತ್ರಿ, ಶಾಂತಿಯ ಸೂತ್ರಗಳನ್ನು ತಿಳಿಸಿದ ಭಗವಾನ್ ಬಾಹುಬಲಿ ಅವರ ಪುಣ್ಯಕ್ಷೇತ್ರ ಆತ್ಮಶಾಂತಿ, ಅಧ್ಯಾತ್ಮದ ಕೇಂದ್ರವಾಗಿದೆ ಎಂದರು.
ಧಾರ್ಮಿಕತೆ, ಪರಂಪರೆಯ ಪ್ರತೀಕವಾಗಿರುವ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಶಾಂತಿಸಾಗರ ಮಹಾರಾಜರ ಪ್ರತಿಮೆ ಅನಾವರಣ ಆಗಿದೆ. ಇದು ಕೇವಲ ಕ್ಷೇತ್ರವಲ್ಲ, ಇದು ನಾಗರಿಕತೆಯ ಸಂಕೇತ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
1925 ರಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ 20 ನೇ ಶತಮಾನದ ಪ್ರಥಮಾಚಾರ್ಯರ ಶಾಂತಿಸಾಗರ ಮಹಾರಾಜರು ಭಾಗವಹಿಸಿದ್ದರು. ಅದರ ಸ್ಮರಣೆಗಾಗಿ ಶಾಂತಿಗಿರಿ ಬೆಟ್ಟದ ಅನಾವರಣ ಮಾಡಲಾಗಿದ್ದು, ಅವರ ಪ್ರತಿಮೆಯ ಅನಾವರಣ ಮಾಡಲಾಗಿದೆ ಎಂದರು.
ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಮುನ್ನಡೆಯೋಣ. ಅವರ ಸಂದೇಶಗಳು ಆಧುನಿಕ ಭಾರತ ನಿರ್ಮಾಣಕ್ಕೆ ದಾರಿದೀಪವಾಗಿವೆ ಎಂದರು.
ಕ್ಷೇತ್ರದ ಪೀಠಾಧಿಪತಿ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಚಿವ ಡಿ. ಸುಧಾಕರ್, ಸಂಸದ ಶ್ರೇಯಸ್ ಪಟೇಲ್, ಶಾಸಕ ಅಭಯ್ ಪಾಟೀಲ್, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಎಸ್ಪಿ ಮೊಹಮ್ಮದ್ ಸುಜೀತಾ ಸೇರಿದಂತೆ ದೇಶದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಜನರು ಭಾಗವಹಿಸಿದ್ದರು. ಶಾಸಕ ಸಿ.ಎನ್. ಬಾಲಕೃಷ್ಣ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.