ADVERTISEMENT

ನನ್ನ ನೋವು ಭಗವಂತನಿಗೆ ಗೊತ್ತು, ಏನಾದರೂ ಹೆದರುವ ವ್ಯಕ್ತಿ ನಾನಲ್ಲ: ಶಿವಲಿಂಗೇಗೌಡ

ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷದ ಬದಲಿಸಿದೆ...

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 6:29 IST
Last Updated 10 ಫೆಬ್ರುವರಿ 2026, 6:29 IST
ಅರಸೀಕೆರೆಯಲ್ಲಿ ನೂತನ ಬಸ್‌ ನಿಲ್ದಾಣ ಕಾಮಗಾರಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಅರಸೀಕೆರೆಯಲ್ಲಿ ನೂತನ ಬಸ್‌ ನಿಲ್ದಾಣ ಕಾಮಗಾರಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಸೋಮವಾರ ಭೂಮಿಪೂಜೆ ನೆರವೇರಿಸಿದರು.   

ಅರಸೀಕೆರೆ: ‘ನನ್ನ ನೋವು ಭಗವಂತನಿಗೆ ಗೊತ್ತು. ಏನಾದರೂ ಹೆದರುವ ವ್ಯಕ್ತಿ ನಾನಲ್ಲ. ಅರಸೀಕೆರೆ ಕ್ಷೇತ್ರದ ಜನರ ಋಣ ತೀರಿಸಿ, ಮಾದರಿ ಕ್ಷೇತ್ರವನ್ನಾಗಿಸುವುದೇ ನನ್ನ ಗುರಿ ಎಂದು ಶಾಸಕ, ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ನಗರದಲ್ಲಿ ₹30 ಕೋಟಿ ವೆಚ್ಚದ ನೂತನ ಬಸ್‌ ನಿಲ್ದಾಣದ ನಿರ್ಮಾಣದ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಆ ಭಗವಂತನ ಆಣೆಯಾಗಲೂ ರಾಜ್ಯದಲ್ಲೇ ಅರಸೀಕೆರೆಯನ್ನು ಮಾದರಿ ಕ್ಷೇತ್ರವನ್ನಾಗಿಸಲು, ಪ್ರಮುಖ ಯೋಜನೆಗಳನ್ನು ತರಲು ಪಕ್ಷ ಬದಲಾಯಿಸುವ ಅನಿವಾರ್ಯ ಎದುರಾಯಿತು. ಪಕ್ಷ ಬದಲಾವಣೆ ಮಾಡುವುದಾಗಿ ಬಹಿರಂಗವಾಗಿ ಹೇಳಿ ಜೆಡಿಎಸ್‌ನಿಂದ ಹೊರ ಬಂದಿದ್ದೇನೆ’ ಎಂದರು.

ADVERTISEMENT

‘ಪಕ್ಷ ಬದಲಾಯಿಸಿ ಮೋಸ ಮಾಡಿದರು ಎಂದು ಕೆಲವರು ಹೇಳುತ್ತಾರೆ. ಈ ಸಲ ಜೆಡಿಎಸ್‌ ಅಧಿಕಾರಕ್ಕೆ ಬರುವುದಿಲ್ಲ. ಇದರಿಂದ ಕ್ಷೇತ್ರದ ಅಭಿವೃದ್ದಿಗೆ ಬೇಕಾದ ಅನುದಾನ ಹಾಗೂ ಯೋಜನೆಗಳು ಸಿಗುವುದಿಲ್ಲ ಎಂಬುದನ್ನು ಅರಿತು, ಕ್ಷೇತ್ರದ ಅಭ್ಯುದಯಕ್ಕಾಗಿ ಕಾಂಗ್ರೆಸ್‌ ಸೇರಿದೆ. ಅದರಿಂದಾಗಿ ನೀರಾವರಿ, ಶಿಕ್ಷಣ ಸೇರಿದಂತೆ ಮೂಲಸೌಲಭ್ಯಗಳಿಗೆ ಅನುದಾನ ದೊರಕುತ್ತದೆ ಎಂದು ಪಕ್ಷ ಬದಲಾಯಿಸಿದೆ. ದೇಶದಲ್ಲಿ ಯಾರೂ ಪಕ್ಷ ಬದಲಾಯಿಸುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಎಂಜಿನಿಯರಿಂಗ್‌ ಕಾಲೇಜು ಹಾಗೂ ಪಾಲಿಟೆಕ್ನಿಕ್‌ ಕಾಲೇಜು, ಎತ್ತಿನ ಹೊಳೆ ಯೋಜನೆಗೆ ₹150 ಕೋಟಿ, ಕೆಪಿಎಸ್‌ ಶಾಲೆಗಳು, ಸೌರ ವಿದ್ಯುತ್‌ ಘಟಕಗಳು, ವಿದ್ಯುತ್‌ ಉಪ ಕೇಂದ್ರಗಳ ನಿರ್ಮಾಣ, ಬಸ್‌ ನಿಲ್ದಾಣ ಸೇರಿದಂತೆ ಇತರ ಅಭಿವೃದ್ದಿ ಕಾರ್ಯಗಳಿಗೆ ಜೆಡಿಎಸ್‌ನವರು ಹಣ ಕೊಡುತ್ತಿದ್ದರಾ? ಇವೆಲ್ಲವನ್ನು ಗಮನಿಸಿ ಕ್ಷೇತ್ರದ ಅಭಿವೃದ್ದಿಗಾಗಿ ಪಕ್ಷ ಬದಲಾಯಿಸಿದೆ’ ಎಂದು ವಿವರಿಸಿದರು. 

‘ಅರಸೀಕೆರೆ ತಾಲ್ಲೂಕಿನ ಅಭಿವೃದ್ದಿ ಹಾಗೂ ನನ್ನ ಕೆಲಸ ಕಾರ್ಯಗಳನ್ನು ಸಹಿಸಲಾಗದವರೂ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದು, ಕ್ಷೇತ್ರಕ್ಕೆ ಅನುದಾನ ತರುವುದನ್ನು ತಡೆಯಲು ಕೆಲವರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ’ ಎಂದು ದೂರಿದರು.

‘ವಿಧಾನಸಭೆ ಅಧಿವೇಶನದಲ್ಲಿ ಉದ್ಯೋಗ ಖಾತರಿ ಯೋಜನೆ ಕುರಿತು ನಾನು ರೈತರ ಪರ ಮಾತನಾಡಿ ವಿರೋಧ ಪಕ್ಷದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ. ಉದ್ಯೋಗ ಖಾತರಿ ಯೋಜನೆಯ ವಿಷಯವನ್ನು ಮರೆಮಾಚಲು, ನಾನು ಎದ್ದು ನಿಂತು ಭಾಷಣ ಮಾಡುವುದಕ್ಕೆ ಬಹಳ ಅಡೆತಡೆ ಮಾಡಿದರು. ಇದರಿಂದ ವಿಚಲಿತನಾದ ನಾನೂ ಹಳ್ಳಿ ಸೊಗಡಿನಲ್ಲಿ ಮಾತನಾಡಿದೆ. ಅಲ್ಲಿಯೂ ಕೆಲವರು ಬಿಜೆಪಿರಿಗೆ ಹೇಳಿಕೊಡುತ್ತಿದ್ದರು’ ಎಂದರು.

‘ರಾಜಕೀಯದಲ್ಲಿ ಟೀಕೆ, ಟಿಪ್ಪಣಿ ಸಹಜ, ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ನಮ್ಮ ಪಕ್ಷ ಹಾಗೂ ಕ್ಷೇತ್ರದ ಜನತೆ ಮುಖ್ಯ. ನನ್ನ ಅಧಿಕಾರಾವಧಿಯಲ್ಲಿ ಎಲ್ಲವೂ ಅಭಿವೃದ್ಧಿಯಾದರೆ ಕೆಲವರಿಗೆ ಮುಂದಿನ ಭವಿಷ್ಯ ಏನು ಎಂಬುದು ಚಿಂತೆಯಾಗಿದೆ’ ಎಂದು ಜೆಡಿಎಸ್‌ ಮುಖಂಡರನ್ನು ಲೇವಡಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರದಿಂದಲೇ ಕ್ಷೇತ್ರದ ಜನತೆಗೆ ಕುಡಿಯುವ ನೀರು ಒದಗಿಸುವ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ನೂರಾರು ಕೋಟಿ ರೂಪಾಯಿ ಅನುದಾನ ನಮ್ಮ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ₹38 ಕೋಟಿ ವೆಚ್ಚದಲ್ಲಿ ಮೊರಾರ್ಜಿ ಶಾಲೆ, ಕೆಪಿಎಸ್‌ ಶಾಲೆಗಳು ಸೇರಿದಂತೆ ಮತ್ತಷ್ಟು ಅಭಿವೃದ್ದಿ ಕೆಲಸಗಳ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸುತ್ತೇನೆ ಎಂದರು.

‘ತಾಲ್ಲೂಕಿನ ರೈತರ ಕೃಷಿಗೆ ನಿತ್ಯ 8 ಗಂಟೆಗಳ ಕಾಲ ವಿದ್ಯುತ್‌ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಇದೆ.  ₹31 ಕೋಟಿ ನಗರೋತ್ಥಾನ ಯೋಜನೆಯಿಂದ ನಗರದ ಅಭಿವೃದ್ದಿಗೆ ಸಾಧ್ಯವಾಗಿದೆ. ಮುಂದಿನ ವಾರದಲ್ಲಿ ₹6 ಕೋಟಿ ವೆಚ್ಚದಲ್ಲಿ ನಗರದ ಜೂನಿಯರ್‌ ಕಾಲೇಜು ಆವರಣದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತದೆ’ ಎಂದರು.

ನಗರಸಭಾ ಮಾಜಿ ಅಧ್ಯಕ್ಷ ಎಂ.ಸಮೀವುಲ್ಲಾ ಮಾತನಾಡಿ, ‘ಬಸ್‌ ನಿಲ್ದಾಣದ ಬಳಿ ಹಲವರು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ. ಅವರ ಸಣ್ಣಪುಟ್ಟ ವ್ಯಾಪಾರಗಳಿಗೆ ಅನೂಕೂಲ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ನಗರಸಭಾ ಸದಸ್ಯರಾದ ದರ್ಶನ್‌, ವೆಂಕಟಮುನಿ, ಕೆಪಿಸಿಸಿ ಕಾರ್ಯದರ್ಶಿ ಶಶಿಧರ್‌, ಬಾಣಾವಾರ ಶ್ರೀನಿವಾಸ್‌, ನಗರಯೋಜನಾ ಪ್ರಾಧಿಕಾರ ಸದಸ್ಯರಾದ ಬಾಲಮುರುಗನ್‌, ಮನು, ಸುಬ್ರಹ್ಮಣ್ಯ ಬಾಬು, ಗ್ಯಾರಂಟಿ ಸಮಿತಿ ಸದಸ್ಯರಾದ ಕಮಲಮ್ಮ, ಸಿರಾಜ್‌, ಮುಖಂಡರಾದ ಮಂಜುಳಾಬಾಯಿ, ಸುಲೋಚನಾ ಬಾಯಿ, ಗೌಸ್‌ ಖಾನ್‌, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಕಿರಣ್‌ಕುಮಾರ್‌, ಕೆಎಸ್‌ಆರ್‌ಟಿಸಿ ಅಧಿಕಾರಿಗಳಾದ ಕೃಷ್ಣಪ್ಪ, ಅರವಿಂದ್‌, ರಂಗರಾಜು, ಪ್ರದೀಪ್‌ ಕುಮಾರ್‌ ಗುತ್ತಿಗೆದಾರ ಶಂಕ್ರಪ್ಪ ಇದ್ದರು. 

ಮುಳ್ಳಿಗೆ ಮುಳ್ಳೆ ಉತ್ತರ. ವಿರೋಧಿಗಳು ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಇಲ್ಲಸಲ್ಲದ ವಿಡಿಯೊ ತುಣುಕುಗಳು ಆಡಿಯೊ ಹಾಗೂ ಮಿಮಿಕ್ರಿ ಬಿಡುತ್ತಾರೆ. ಅವರಿಗೆ ನೀವೂ ತಕ್ಕ ಉತ್ತರ ನೀಡಿ.
-ಕೆ.ಎಂ. ಶಿವಲಿಂಗೇಗೌಡ, ಶಾಸಕ
ಸಚಿವರು ಮಾಡುವ ಕೆಲಸವನ್ನು ಅರಸೀಕೆರೆ ಶಾಸಕರು ಮಾಡುತ್ತಿದ್ದಾರೆ. ಜನರ ಅನೂಕೂಲಕ್ಕಾಗಿ ಬೃಹತ್ ಯೋಜನೆ ತರುತ್ತಿದ್ದಾರೆ. ನೂತನ ಬಸ್‌ ನಿಲ್ದಾಣಕ್ಕೆ ಅವರ ಹೋರಾಟ ಇದೆ. ನಾವೆಲ್ಲರೂ ಅವರ ಕೈ ಬಲಪಡಿಸಬೇಕು.
-ಅರುಣ್‌ಕುಮಾರ್‌, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ
ಶಾಸಕರ ಅಭಿವೃದ್ದಿ ಸಹಿಸದವರು ಅರ್ಥವಿಲ್ಲದ ಮಾತು ಆಡುತ್ತಾರೆ. ಶಾಸಕರ ಅಭಿವೃದ್ದಿ ಕೆಲಸಗಳು ಏನು ಎಂಬುದು ಜನರಿಗೆ ಗೊತ್ತಿದೆ. ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳಿಂದ ಬಡವರ ಜೀವನ ಉತ್ತಮವಾಗಿದೆ.
-ಧರ್ಮಶೇಖರ್‌, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.