
ಅರಸೀಕೆರೆ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾಕತ್ತಿದ್ದರೆ ಅರಸೀಕೆರೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿ. ರಾಜಕೀಯ ರಣರಂಗ ನೋಡೋಣ ಎಂದು ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಸವಾಲು ಹಾಕಿದರು.
ನಗರದ ಪಿ.ಪಿ.ವೃತ್ತದಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಇಂದೇ ಸವಾಲು ಹಾಕಿದ್ದೇನೆ. ತಾಕತ್ತದ್ದರೆ ಬನ್ನಿ ಸ್ಪರ್ಧೆ ಮಾಡಿ. ಎಲ್ಲರ ಗೆಲುವು– ಸೋಲು ತೀರ್ಮಾನ ಮಾಡುವುದು ಜನತೆ. ಹೈಕಮಾಂಡ್ ಹಾಗೂ ಪಕ್ಷದ ಕಾರ್ಯಕರ್ತರನ್ನು ಕೇಳುವುದೇ ಬೇಡ. ನಾನೇ ಆಹ್ವಾನ ನೀಡುತ್ತಿದ್ದೇನೆ. ತಾಕತ್ತಿದ್ದರೆ ಅರಸೀಕೆರೆಯಲ್ಲಿ ಚುನಾವಣೆಯಲ್ಲಿ ನಿಲ್ಲಲಿ ಎಂದು ರೇವಣ್ಣ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.
ಎಚ್.ಕೆ.ಪಾಟೀಲ ಜೊತೆ ಮಾತುಕತೆ, ಅಲ್ಲಿ ನಾನು ಕಣ್ಣೀರು ಹಾಕಿದ್ದು ಸೇರಿದಂತೆ ವಿಧಾನಸಭೆಯಲ್ಲಿ ಎಲ್ಲ ದಾಖಾಲಾತಿ ಇರುತ್ತದೆ. ಎಲ್ಲರ ಜೊತೆ ಚರ್ಚೆ ಮಾಡಿ, ಹೋರಾಟ ಮಾಡಿ ನೀರು ತಂದಿದ್ದೇನೆ. ಸುಮ್ಮನೇ ಇಲ್ಲಸಲ್ಲದ ಆರೋಪ ಮಾಡುವುದಲ್ಲ. ರಾಜಕೀಯ ಮಾಡಿ, ಬೇಡ ಅನ್ನುವುದಿಲ್ಲ. ಆದರೆ ಅರಸೀಕೆರೆಯ ಶಾಂತಿ, ನೆಮ್ಮದಿ ಕದಡಬೇಡಿ. ಗುಂಪುಗಾರಿಕೆ ಮಾಡಿಕೊಂಡು ಆರೋಪಗಳು ಮಾಡಿದರೆ ಇಲ್ಲಿ ಯಾರೂ ಹೆದರುವವರಲ್ಲ ಎಂದು ಹೇಳಿದರು.
ಪಕ್ಷ ಬಿಡಲು ಬಲವಾದ ಕಾರಣಗಳಿವೆ. ಅರಸೀಕೆರೆಗೆ ಇದುವರೆಗೂ ಎಂಎಲ್‌ಸಿ ಸ್ಥಾನ ಸಿಕ್ಕಿಲ್ಲ. ಅದಕ್ಕಾಗಿ ಕೊಡಬೇಕು ಎಂದು ಕೇಳಿದೆ. ಬಿಳಿಚೌಡಯ್ಯ ಅವರಿಗೆ ನೀವೇ ರೆಡಿಯಾಗಿ ಅಂತಲೂ ಹೇಳಿದ್ದೆ. ಆದರೆ ಇವರು ಪುತ್ರರನ್ನು ಎಂಎಲ್‌ಸಿ ಮಾಡಿದರು. ಅಂದೇ ನಾನು ನಿಮ್ಮ ಪಕ್ಷದಲ್ಲಿ ಇರುವುದಿಲ್ಲ ಎಂದು ಬಹಿರಂಗವಾಗಿ ಹೇಳಿ ಬಂದಿದ್ದೇನೆ ಎಂದರು.
ಹಾಸನದ ಸಮೀಪ 4 ಎಂಜಿನಿಯರಿಂಗ್ ಕಾಲೇಜುಗಳಿದ್ದರೂ, ಮೊಸಳೆಹೊಸಹಳ್ಳಿಗೆ ಮತ್ತೊಂದು ಎಂಜಿನಿಯರಿಂಗ್ ಕಾಲೇಜು ಕೊಟ್ಟರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಅರಸೀಕೆರೆ ಕ್ಷೇತ್ರಕ್ಕೆ ಎಂಜಿನಿಯರಿಂಗ್ ಕಾಲೇಜು ನೀಡದಿದ್ದಲ್ಲಿ ನಾನು ಪಕ್ಷ ಬಿಡುವುದಾಗಿ ಹೇಳಿದ್ದೆ. ತೀವ್ರ ಚರ್ಚೆ ಮಾಡಿದಾಗ ಅವರು ಒಪ್ಪಿದರು. ಆದರೆ ಸರ್ಕಾರ ಬಿದ್ದು ಹೋಯಿತು. ನಂತರ ಬಿಜೆಪಿ ಸರ್ಕಾರದಲ್ಲಿ ಮನವಿ ಮಾಡಿ ಮುಂದುವರಿಸಲಾಗಿತ್ತು. ಈಗ ಹಣ ಹಾಕಿಸಿ ಕಟ್ಟಡ ಮಾಡಲಾಗಿದೆ ಎಂದು ವಿವರಿಸಿದರು.
ರಾಜಕಾರಣ ಮಾಡುವುದಕ್ಕೆ ಬರುತ್ತದೆ. ನನಗೆ ಎಲ್ಲ ಸಮಾಜದವರೂ ಮತ ಹಾಕುತ್ತಾರೆ. ನನ್ನನ್ನು ಮಂತ್ರಿ ಮಾಡುವುದಾಗಿ ಸಂಸದ ಶ್ರೇಯಸ್ ಪಟೇಲ್ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನೋಡೋಣ, ಸಿದ್ದರಾಮಯ್ಯ ಅವರಂಥ ಸರಳ, ಸಜ್ಜನ ವ್ಯಕ್ತಿ ಮತ್ತೊಬ್ಬರಿಲ್ಲ. ಅವರು ನೀಡಿದ ಕೊಡುಗೆ ನಾಡಿನ ಜನತೆಗೆ ವರದಾನವಾಗಿದೆ ಎಂದರು.
ಗಂಡಸಿ ಹೋಬಳಿಯ ಜನತೆ ಕೂಡ ನನಗೆ ಲೀಡ್ ಕೊಟ್ಟಿದ್ದಾರೆ. ಅವರ ಬಲದಿಂದಲೂ ನಾನು ಸತತವಾಗಿ 4 ಬಾರಿ ಶಾಸಕನಾಗಿದ್ದೇನೆ. ಯಾರೇ ಏನೇ ಅಂದರೂ ಅಭಿವೃದ್ದಿ ಕೆಲಸ ಬಿಡುವುದಿಲ್ಲ. ಗೃಹಮಂಡಳಿಯಿಂದ ಸಾವಿರಾರು ಮನೆಗಳ ನಿರ್ಮಾಣಕ್ಕೆ ಕೆಲವರು ಅಡ್ಡಿ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಅರಸೀಕೆರೆ ಕ್ಷೇತ್ರಕ್ಕೆ ನೀರು ಬರುವುದಿಲ್ಲ ಎಂದು ತುಂಬು ಸಭೆಯಲ್ಲಿ ಹೇಳಿದ್ದರು. ಆದರೆ ಇಂದು ಕಣಕಟ್ಟೆ ಹೋಬಳಿಗೆ ನೀರು ಬಂದಿದೆ. ಮುಂದಿನ ದಿನಗಳಲ್ಲಿ ಎಲ್ಲ ಕೆರೆಗಳಿಗೂ ನೀರು ಹರಿಯುತ್ತದೆ. ಇದೀಗ ಹಾರನಹಳ್ಳಿ ಕೆರೆ ತುಂಬಿ ಬಾಗಿನ ಅರ್ಪಿಸುತ್ತೇವೆ ಬನ್ನಿ ಎಂದರು.
ನನ್ನ ಮಗ ರಾಜಕೀಯಕ್ಕೆ ಬರಲ್ಲ
ಅರಸೀಕೆರೆ ಕ್ಷೇತ್ರ ಬಿಡುವವನಲ್ಲ. ನನಗೆ ರಾಜಕೀಯ ಜನ್ಮ ಪುನಜನ್ಮ ನೀಡಿರುವ ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗಲ್ಲ. ಇವರ ರೀತಿ ಕುಟುಂಬ ರಾಜಕಾಕಾರಣ ಮಾಡುವವನಲ್ಲ. ನನ್ನ ಪುತ್ರ ರಾಜಕೀಯಕ್ಕೆ ಬರುತ್ತಾರೆ ಎಂದು ಯಾವುದೋ ಪತ್ರಿಕೆಯಲ್ಲಿ ಬರೆದಿದ್ದರು. ಆದರೆ ಅವನು ರಾಜಕೀಯಕ್ಕೆ ಬರುವುದಿಲ್ಲ. ವೈದ್ಯ ವೃತ್ತಿ ಮಾಡುತ್ತಾನೆ. ನಮ್ಮ ಮುಖಂಡರಲ್ಲಿ ಯಾರೋ ಒಬ್ಬರು ಮುಂದುವರಿಯುತ್ತಾರೆ. ಯಾವ ಸಮಾಜದವರಾದರೂ ನಿಂತುಕೊಳ್ಳಲಿ ಅವರಿಗೆ ಸಹಕಾರ ಆಶೀರ್ವಾದ ಮಾಡುತ್ತೇನೆ ಎಂದು ಶಿವಲಿಂಗೇಗೌಡ ಹೇಳಿದರು. ಕ್ಷೇತ್ರ ವಿಂಗಡಣೆ ಆದಾಗ ಯಾರೂ ಟಿಕೆಟ್ ನೀಡಲಿಲ್ಲ. ಈ ಹಿಂದೆ ನಾನು 14 ಮತಗಳಿಂದ ಸೋತಾಗ ನಾನೇ ಖುದ್ದಾಗಿ ಬಿ.ಫಾರ್ಮ್ ತೆಗೆದುಕೊಂಡು ಧೈರ್ಯ ಮಾಡಿ ಪ್ರಯತ್ನ ಮಾಡೋಣ ಎಂದು ನಿಂತಿದ್ದೆ. ಅರಸೀಕೆರೆ ತಾಲ್ಲೂಕಿನ ಜನತೆ 34 ಸಾವಿರ ಮತಗಳ ಅಂತರದಲ್ಲಿ ಗೆಲುವು ಕೊಟ್ಟರು ಎಂದರು. ಒಕ್ಕಲಿಗರು ಇರುವ ದುದ್ದ ಶಾಂತಿಗ್ರಾಮ ತಣ್ಣೀರುಹಳ್ಳ ಸೇರಿಸಿಕೊಂಡು ಹೊಳೆನರಸೀಪುರ ಕ್ಷೇತ್ರ ಮಾಡಿದರು. ಗಂಡಸಿ ಹೋಬಳಿ ಸೇರಿಸಿ ಅರಸೀಕೆರೆ ಕ್ಷೇತ್ರ ಮಾಡಿದರು. ಲಿಂಗಾಯತ ಸಮಾಜದವರು ಇರುವ ಕ್ಷೇತ್ರ ಬಿಟ್ಟು ನನಗೆ ಕ್ಷೇತ್ರ ಇಲ್ಲದಂತೆ ಮಾಡಿದರಲ್ಲ ಅದು ನ್ಯಾಯವೇ ಎಂದು ಪ್ರಶ್ನಿಸಿದರು.
ಅರಸೀಕೆರೆ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು? ನೀವು ಯಾವ ಅಭಿವೃದ್ಧಿ ಮಾಡಿದ್ದೀರಾ? ನನ್ನ ಕೆಲಸಗಳ ಬಗ್ಗೆ ದಾಖಾಲಾತಿ ಬಿಡುಗಡೆ ಮಾಡುತ್ತೇನೆ-ಕೆ.ಎಂ. ಶಿವಲಿಂಗೇಗೌಡ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.