ADVERTISEMENT

ಹಾಸನ; ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಿವಲಿಂಗೇಗೌಡರ ಹೆಸರು ಸೂಚಿಸಿದ ಬಿ.ಶಿವರಾಂ

ಚಿದಂಬರಪ್ರಸಾದ್
Published 18 ಜನವರಿ 2024, 21:09 IST
Last Updated 18 ಜನವರಿ 2024, 21:09 IST
ಕೆ.ಎಂ. ಶಿವಲಿಂಗೇಗೌಡ
ಕೆ.ಎಂ. ಶಿವಲಿಂಗೇಗೌಡ   

ಹಾಸನ: ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರ ಹೆಸರನ್ನು ಲೋಕಸಭೆ ಚುನಾವಣೆಗೆ ಸೂಚಿಸುವ ಮೂಲಕ ಅವರನ್ನೇ ಅಭ್ಯರ್ಥಿಯನ್ನಾಗಿಸಲು ಕಾಂಗ್ರೆಸ್‌ನ ಒಂದು ಗುಂಪು ಪ್ರಯತ್ನಿಸುತ್ತಿದೆ. ಟಿಕೆಟ್‌ ಆಕಾಂಕ್ಷಿಯಾಗಿರುವ, ಮಾಜಿ ಸಚಿವ ಬಿ.ಶಿವರಾಂ ಅವರೇ ಇದನ್ನು ಬಹಿರಂಗಪಡಿಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

‘ಅಭಿವೃದ್ಧಿ ಕಾಮಗಾರಿಗಳು ಆ ಕ್ಷೇತ್ರಕ್ಕಷ್ಟೇ ಸೀಮಿತವಾಗಿವೆ. ಇನ್ನೊಂದೆಡೆ ನಿಗಮ–ಮಂಡಳಿಯ ನೇಮಕಾತಿಯಲ್ಲೂ ಶಿವಲಿಂಗೇಗೌಡರ ಹೆಸರೇ ಪ್ರಮುಖವಾಗಿ ಕೇಳಿ ಬರು ತ್ತಿದೆ. ಹೀಗಾದರೆ, ನಮ್ಮ ಕ್ಷೇತ್ರದ ಜನ, ಕಾರ್ಯಕರ್ತರಿಗೆ ಏನೆಂದು ಉತ್ತರಿಸಬೇಕು ಎಂದು ಮುಖಂಡರು ಕೇಳುತ್ತಿದ್ದಾರೆ. ಅವರನ್ನೇ ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸಿ’ ಎಂದೂ ಪ್ರತಿಪಾದಿಸುತ್ತಿ ದ್ದಾರೆ.

‘ಜಿಲ್ಲೆಯಲ್ಲಿ ಬಹಳಷ್ಟು ನಿಷ್ಠಾವಂತ ಕಾರ್ಯಕರ್ತರಿದ್ದರೂ ಮೂಲೆ ಗುಂಪಾ ಗಿದ್ದಾರೆ. ಅಧಿಕಾರವಿಲ್ಲದಿದ್ದಾಗ ಮಾತ್ರ ನಮ್ಮನ್ನು ಬಳಸಿಕೊಳ್ಳುತ್ತಾರೆ. ಅಧಿಕಾರ ಬಂದಾಗ ಬಿಡುತ್ತಾರೆ. 40 ವರ್ಷದ ರಾಜಕೀಯದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಮೂಲೆ ಗುಂಪಾಗು
ತ್ತಿದ್ದೇನೆ ಎಂದು ನನಗೂ ಅನಿಸುತ್ತಿದೆ’ ಎಂದು ಬಿ.ಶಿವರಾಂ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಏನೇ ಇದ್ದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸ ಲೇಬೇಕು. ಯಾರು ಸಮರ್ಥ ಅಭ್ಯರ್ಥಿಯೆಂಬ ಪ್ರಶ್ನೆ ನಮ್ಮಲ್ಲಿದೆ. ಜನಾಭಿಪ್ರಾಯ ಸಂಗ್ರಹಿಸಿದ್ದೇವೆ. ಇಡೀ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡರೇ ಸಮರ್ಥರೆಂಬ ಅಭಿಪ್ರಾಯ ಬಂದಿದೆ’ ಎಂದಿದ್ದಾರೆ.

‘ಬಿ.ಶಿವರಾಂ ಅವರೊಂದಿಗೆ, ಪ್ರಮುಖ ಆಕಾಂಕ್ಷಿಗಳಾದ ಶ್ರೇಯಸ್‌ ಪಟೇಲ್‌, ಎಂ.ಎ. ಗೋಪಾಲಸ್ವಾಮಿ, ಬಾಗೂರು ಮಂಜೇಗೌಡ ಅವರು, ಮುಂಚಿತವಾಗಿಯೇ ಅಭ್ಯರ್ಥಿಯನ್ನು ಘೋಷಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಅಭ್ಯರ್ಥಿಯ ಘೋಷಣೆಯಾಗದಿರುವುದರಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅರಸೀಕೆರೆ ಕ್ಷೇತ್ರದ ಮೇಲೆ ಕಣ್ಣು

‘ತಡವಾಗಿ ಟಿಕೆಟ್‌ ಘೋಷಿಸಿದರೆ ಗೆಲ್ಲುವುದು ಸುಲಭವಲ್ಲ. ಹೀಗಾಗಿ ಶಿವಲಿಂಗೇಗೌಡರನ್ನು ಲೋಕಸಭೆಗೆ ಕಳುಹಿಸಬೇಕು. ತೆರವಾಗುವ ಅರಸೀಕೆರೆ ಕ್ಷೇತ್ರದಲ್ಲಿ ಬಿ.ಶಿವರಾಂ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಬೇಕು’ ಎಂಬುದು ಶಿವರಾಂ ಬೆಂಬಲಿಗರ ಲೆಕ್ಕಾಚಾರ.

‘ಶಿವಲಿಂಗೇಗೌಡರು ನಿಗಮ–ಮಂಡಳಿ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಅವರನ್ನೇ ಅಭ್ಯರ್ಥಿಯನ್ನಾಗಿಸಿದರೆ ಜಿಲ್ಲೆಯ ಮತ್ತೊಬ್ಬ ಮುಖಂಡರಿಗೆ ನಿಗಮ–ಮಂಡಳಿಯಲ್ಲಿ ಸ್ಥಾನ ಸಿಗುತ್ತದೆ. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತಾ
ಗುತ್ತದೆ’ ಎಂಬುದು ಕಾಂಗ್ರೆಸ್‌ನ ಕೆಲ ಮುಖಂಡರ ಆಲೋಚನೆ.

‘ಎಲ್ಲೋ ಕುಳಿತು ಅಭ್ಯರ್ಥಿ ಘೋಷಿಸಿದರೆ ಗೆಲ್ಲಲಾಗದು’

ಹಾಸನ: ‘ಜಿಲ್ಲೆಯಲ್ಲಿರುವ ಉಸ್ತುವಾರಿ, ವೀಕ್ಷಕರು ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಯಾವ ತಾಲ್ಲೂಕಿಗೂ ಭೇಟಿ ನೀಡಿಲ್ಲ. ಎಲ್ಲೋ ಕುಳಿತು ಅಭ್ಯರ್ಥಿ ಘೋಷಿಸಿದರೆ ಗೆಲ್ಲುವುದು ಸುಲಭವಲ್ಲ’ ಎಂದು ಮಾಜಿ ಸಚಿವ ಬಿ. ಶಿವರಾಂ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನೀತಿ ಗೆಟ್ಟು ಕಾಂಗ್ರೆಸ್‌ಗೆ ಬರುವವರು ಇಂದು ಹೆಚ್ಚಾಗಿದ್ದಾರೆ. ನಿಷ್ಠಾವಂತರಿಗೆ ಮನ್ನಣೆ ಇಲ್ಲದಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಚಿಕ್ಕಮಗಳೂರು ಜಿಲ್ಲೆಯಲ್ಲಿ ತಮ್ಮಯ್ಯ ಎಂಬುವರಿಗೆ ಟಿಕೆಟ್ ನೀಡಿದ್ದರಿಂದ ಅಲ್ಲಿ ಎಲ್ಲ ಸ್ಥಾನಗಳಲ್ಲೂ ಗೆಲ್ಲುವಂತಾಯಿತು. ಹಾಸನ ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದ್ದರಿಂದ ಅರಸೀಕೆರೆ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಸೋಲಬೇಕಾಯಿತು’ ಎಂದರು.

‘ಅರಸೀಕೆರೆ ಕ್ಷೇತ್ರದಿಂದ ಲಿಂಗಾಯತ ಸಮುದಾಯದ ಶಶಿಧರ್ ಆಕಾಂಕ್ಷಿ ಆಗಿದ್ದರು. ಶಿವಲಿಂಗೇಗೌಡರಿಗೆ ಟಿಕೆಟ್ ನೀಡುವ ಸಂದರ್ಭದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು, ನಿಗಮ, ಮಂಡಳಿಯಲ್ಲಿ ಅವಕಾಶ ನೀಡುವುದಾಗಿ ಶಶಿಧರ್ ಅವರಿಗೆ ಭರವಸೆ ನೀಡಿದ್ದರು. ಅದರಂತೆ ನಡೆದುಕೊಳ್ಳಲಿ. ಶಿವಲಿಂಗೇ ಗೌಡರಿಗೆ ಸ್ಥಾನ ಕೊಡುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಷಯ’ ಎನ್ನುವ ಮೂಲಕ ಶಿವಲಿಂಗೇಗೌಡರ ನೇಮಕಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.

‘ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅರಸೀಕೆರೆ ಬಿಟ್ಟು ಬೇರೆ ಎಲ್ಲಿಗೆ ಹೋಗಿದ್ದಾರೆ? ಹೀಗಿರುವಾಗ ಅಧ್ಯಕ್ಷರಾಗಬೇಕು, ಮಂತ್ರಿಯಾಗಬೇಕೆಂದರೆ ಹೇಗೆ? ಶಿವಲಿಂಗೇಗೌಡರು ಕಾಂಗ್ರೆಸ್‌ಗೆ ಬಂದು ಎಂಟು ತಿಂಗಳಾಯಿತು. ನಾನು 47 ವರ್ಷಗಳಿಂದ ಇದ್ದೇನೆ. ಬೇರೆಯವರಂತೆ ವಲಸೆ ಹೋಗಿಲ್ಲ’ ಎಂದರು.

ಜೆಡಿಎಸ್-ಬಿಜೆಪಿ ಒಂದಾಗಿದ್ದು, ಆ ಕುಟುಂಬದ ವಿರುದ್ಧ ಸೆಣೆಸಬಲ್ಲ ಸಮರ್ಥ ಅಭ್ಯರ್ಥಿ ಎಂದರೆ ಕೆ.ಎಂ.ಶಿವಲಿಂಗೇಗೌಡರು ಮಾತ್ರ. ಇದು ಜನಾಭಿಪ್ರಾಯವೂ ಹೌದು.
ಬಿ. ಶಿವರಾಂ, ಮಾಜಿ ಸಚಿವ
ಚುನಾವಣೆ ಸಂದರ್ಭದಲ್ಲಿ ಗೊಂದಲ ಮೂಡಿಸುವುದು ಬೇಡ. ಹೈಕಮಾಂಡ್‍ ಅನ್ನು ಒಪ್ಪಿಸಿ ಟಿಕೆಟ್ ತಂದರೆ ನಾನೇ ಬಿ. ಶಿವರಾಂ ಪರವಾಗಿ ಪ್ರಚಾರ ಮಾಡುವೆ.
–ಕೆ.ಎಂ. ಶಿವಲಿಂಗೇಗೌಡ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.