ADVERTISEMENT

ಶ್ರವಣಬೆಳಗೊಳ: ಜಿನವಾಣಿ ಸರಸ್ವತಿ ದೇವಿಗೆ ವೈಭವದ ಪೂಜೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 7:17 IST
Last Updated 4 ಅಕ್ಟೋಬರ್ 2025, 7:17 IST
ಶ್ರವಣಬೆಳಗೊಳದ ಜೈನ ಮಠದ ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿಗೆ ಸ್ವರ್ಣದ ವಸ್ತ್ರದ ಅಲಂಕಾರ ಮಾಡಲಾಗಿತ್ತು
ಶ್ರವಣಬೆಳಗೊಳದ ಜೈನ ಮಠದ ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿಗೆ ಸ್ವರ್ಣದ ವಸ್ತ್ರದ ಅಲಂಕಾರ ಮಾಡಲಾಗಿತ್ತು   

ಶ್ರವಣಬೆಳಗೊಳ: ಶರನ್ನವರಾತ್ರಿ ಪ್ರಯುಕ್ತ ಇಲ್ಲಿನ ಜೈನ ಮಠದ ಮುಂಭಾಗದ ಚಾವುಂಡರಾಯ ಸಭಾ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಚವ್ವೀಸ ತೀರ್ಥಂಕರರ ಯಕ್ಷ ಯಕ್ಷಿಯರ ಮತ್ತು ಜಿನವಾಣಿ ಸರಸ್ವತಿ ದೇವಿಗೆ ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ರಾತ್ರಿ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅದ್ದೂರಿಯಾಗಿ ಪೂಜೆ ಸಂಪನ್ನಗೊಂಡಿತು.

ವಿಶೇಷವಾಗಿ ನಿರ್ಮಿಸಿದ್ದ ಬೃಹತ್ ವೇದಿಕೆಯನ್ನು ಪುಷ್ಪಗಳಿಂದ ಹಸಿರು ತೋರಣಗಳಿಂದ ಛತ್ರಿ ಚಾಮರ, ರಜತದ ದಂಡ, ಧರ್ಮಧ್ವಜಗಳಿಂದ ಅಲಂಕರಿಸಲಾಗಿತ್ತು. ಪೂಜೆಯಲ್ಲಿ ಜಿನವಾಣಿ ಸರಸ್ವತಿಗೆ ವಿವಿಧ ಪುಷ್ಪಗಳ ಸುಂದರ, ಹಾರ ಆಭರಣಗಳಿಂದ ಅಲಂಕರಿಸಲಾಗಿತ್ತು.

ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶ್ರೀಗಳು ಮೇನೆಯಲ್ಲಿ ಅಸೀನರಾಗಿದ್ದ ಶ್ರೀಗಳು ಮಂಗಳ ವಾದ್ಯಗಳೊಂದಿಗೆ ಜನತೆಗೆ ಅಕ್ಷತೆಯೊಂದಿಗೆ ಬನ್ನಿಯನ್ನು ವಿತರಿಸಿದರು. ರಾತ್ರಿ ಜೈನಮಠದ ಬಸದಿಯಲ್ಲಿ ವಿರಾಜಮಾನರಾದ ಭಗವಾನ್ ನೇಮಿನಾಥ ತೀರ್ಥಂಕರರ ಯಕ್ಷಿ ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿಗೆ ನೂತನವಾಗಿ ವಿನ್ಯಾಸಗೊಳಿಸಿ ಸಿದ್ಧಪಡಿಸಿದ್ದ ಸ್ವರ್ಣದ ವಸ್ತ್ರವನ್ನು (ಸೀರೆ) ಭಕ್ತರ ಹರ್ಷೋದ್ಘಾರಗಳೊಂದಿಗೆ ಶ್ರೀಗಳು ಅರ್ಪಿಸಿದರು.

ADVERTISEMENT

ಗುರುವಾರ ವಿಜಯ ದಶಮಿಯ ಪ್ರಯುಕ್ತ ಚಾವುಂಡರಾಯ ಮಂಟಪದಲ್ಲಿ 24 ತೀರ್ಥಂಕರರನ್ನು ಹಾಗು 24 ಯಕ್ಷ, ಯಕ್ಷಿಯರನ್ನು ಅಲಂಕರಿಸಿದ ಪ್ರಭಾವಳಿಯೊಂದಿಗೆ ಪ್ರತಿಷ್ಠಾಪಿಸಲಾಗಿತ್ತು. ಚವ್ವೀಸ ತೀರ್ಥಂಕರರ ಸನ್ನಿಧಿಯಲ್ಲಿ ಮರುದೇವಿ, ಬ್ರಹ್ಮದೇವ, ಜ್ವಾಲಾಮಾಲಿನಿ, ಕೂಷ್ಮಾಂಡಿನಿದೇವಿ, ಪದ್ಮಾವತಿ, ಸಿದ್ಧಾಯಿನಿ, ಬಾಹುಬಲಿ ಸ್ವಾಮಿ ಹಾಗು ಜಿನವಾಣಿ ಸರಸ್ವತಿ ದೇವಿಯನ್ನು ಪ್ರತಿಷ್ಠಾಪಿಸಲಾಗಿತ್ತು.

ಜಿನವಾಣಿ ಸರಸ್ವತಿ ದೇವಿಯನ್ನು ನೂತನವಾಗಿ ಅರ್ಪಿಸಿದ ಉಯ್ಯಾಲೆಯಲ್ಲಿ ಪ್ರತಿಷ್ಠಾಪಿಸಿ ಎಡ ಬಲ ಭಾಗಗಳಲ್ಲಿ ಸ್ವರ್ಣದ ದಂಡಗಳನ್ನು ಮತ್ತು ಚಾಮರಗಳನ್ನು ಇರಿಸಲಾಗಿತ್ತು. ವಿದ್ವಾಂಸರು ಶಾಸ್ತ್ರಿಗಳಿಂದ ಮಂಗಲಾಷ್ಟಕ, ಮಹಾಮಂತ್ರಗಳನ್ನು ಪಠಿಸಲಾಯಿತು. ಜಿನವಾಣಿ ಸನ್ನಿಧಿಯಲ್ಲಿ ಪ್ರಥಮಾನುಯೋಗ, ಗದ್ಯಸೇವೆ, ಚೂರ್ಣಿಕ ಸೇವೆ, ಸಂಗೀತ ಸೇವೆ, ಶಂಖನಾದ, ವೀಣಾನಾದ, ಮುಖವೀಣಾ, ಶ್ರುತಮುಖರಿ, ಚಕ್ರವಾಧ್ಯ, ಚಂಡೆವಾಧ್ಯ ನೃತ್ಯ, ಸರ್ವವಾಧ್ಯ ಸೇವೆಗಳೊಂದಿಗೆ ಅಷ್ಟಾವಧಾನ ಪೂಜೆ ನೆರವೇರಿತು.

ತುಮಕೂರಿನ ಪೂಜ್ಯಾ ಮೋಹನ್ ಅವರಿಂದ ಸಂಗೀತ ಕಾರ್ಯಕ್ರಮ ನಡೆದವು. ಅಷ್ಟಮಂಗಲಗಳೊಂದಿಗೆ ಮಹಾಮಂಗಳಾರತಿ ನೆರವೇರಿತು. ನಂತರ ಭಕ್ತರಿಗೆ ಗಂಧೋದಕ ವಿತರಿಸಲಾಯಿತು. ಪೂಜೆಯ ನೇತೃತ್ವವನ್ನು ನಂದಕುಮಾರತ್ ಶಾಸ್ತ್ರಿ, ಕಿರಣ್, ಮೇಲ್ವಿಚಾರಣೆ ವಿಜಯಂತ್ ವಹಿಸಿದ್ದರು.

ಕ್ಷೇತ್ರದ ವತಿಯಿಂದ ಕಲಾವಿದರು ಶಾಸ್ತ್ರಿಗಳು, ಕಾರ್ಯಕರ್ತರನ್ನು ಗೌರವಿಸಲಾಯಿತು. ಆಗಮಿಸಿದ ಭಕ್ತರಿಗೆ ಶ್ರೀಗಳು ಸಿಹಿಯನ್ನು ವಿತರಿಸಿದರು.

ಶ್ರವಣಬೆಳಗೊಳದ ಚಾವುಂಡರಾಯ ಸಭಾ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಚವ್ವೀಸ ತೀರ್ಥಂಕರರ ಸನ್ನಿಧಿಯಲ್ಲಿ ಜಿನವಾಣಿ ಸರಸ್ವತಿ ದೇವಿ ಕಂಗೊಳಿಸುತ್ತಿರುವುದು.
ಶ್ರವಣಬೆಳಗೊಳದ ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಭಾಗವಹಿಸಿದ್ದ ಅಭಿನವ ಚಾರುಕೀರ್ತಿ ಶ್ರೀಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.