ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯು ಸಂತೆ ಮೈದಾನಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣವು ಗಿಡಗಂಟೆಗಳಿಂದ ಆವೃತ್ತವಾಗಿದೆ.
ಶ್ರವಣಬೆಳಗೊಳ: ಇಲ್ಲಿಯ ನಾಗಮಂಗಲ– ಮೈಸೂರು ರಸ್ತೆಯ ವಾರದ ಸಂತೆ ನಡೆಯುವ ಮೈದಾನಕ್ಕೆ ಹೊಂದಿಕೊಂಡಂತೆ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ನೂತನವಾಗಿ ವಾಣಿಜ್ಯ ಮಳಿಗೆ ನಿರ್ಮಿಸಿದೆ. ಆದರೆ, ಸಾರ್ವಜನಿಕರ ಉಪಯೋಗಕ್ಕೆ ಹರಾಜು ಮಾಡದೇ ಇರುವುದರಿಂದ ಕಟ್ಟಡವು ಅನಾಥ ಸ್ಥಿತಿಯಲ್ಲಿ ಉಳಿಯುವಂತಾಗಿದೆ.
ಈ ವಾಣಿಜ್ಯ ಸಂಕೀರ್ಣವು ‘ಯು’ ಆಕೃತಿಯಲ್ಲಿದ್ದು, 12 ಮಳಿಗೆಗಳನ್ನು ನಿರ್ಮಿಸಲಾಗಿದೆ. ಈ ಮಳಿಗೆಗಳಿಂದ ಗ್ರಾಮ ಪಂಚಾಯಿತಿಗೆ 4 ವರ್ಷಗಳಿಂದ ಲಕ್ಷಾಂತರ ರೂಪಾಯಿ ಆದಾಯ ಬರಬೇಕಿತ್ತು. ಆದರೆ ಹರಾಜು ಮಾಡದೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಾಣಿಜ್ಯ ಕಟ್ಟಡವನ್ನು ನಿರ್ಮಿಸಲು 15 ನೇ ಹಣಕಾಸು ನಿಧಿಯಿಂದ ₹12 ಲಕ್ಷ ಮಂಜೂರಾಗಿದ್ದು, ಇದರ ಉದ್ಘಾಟನೆ 2021ರ ಅಕ್ಟೋಬರ್ 8 ರಂದು ಆಗಿರುವ ಬಗ್ಗೆ ಅಧಿಕೃತ ನಾಮಫಲಕವಿದೆ.
ಈ ಮಳಿಗೆಗಳನ್ನು ಉಪಯೋಗಿಸದೇ ಇರುವುದರಿಂದ ಭಾಗಶಃ 12 ರೋಲಿಂಗ್ ಶೆಟರ್‌ಗಳು ತುಕ್ಕು ಹಿಡಿದಿದ್ದು, ಕೆಲವುಗಳು ಹಾಳಾಗಿ ಮುರಿದು ಹೋಗಿವೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಈಗ ಹರಾಜು ಹಾಕಬೇಕಾದರೆ ಹಾಳಾಗಿರುವ ರೋಲಿಂಗ್ ಶೆಟರ್‌ಗಳನ್ನು ಬದಲಾಯಿಸಬೇಕು. ವಿಷ ಜಂತುಗಳಿಂದ ಕೂಡಿರುವ ಮಳಿಗೆಗಳನ್ನೂ ಸ್ವಚ್ಛಗೊಳಿಬೇಕಾಗಿದೆ.
ಈ ಕಟ್ಟಡವು 3 ಕಡೆ ಗೋಡೆಯಿಂದ ನಿರ್ಮಾಣವಾಗಿದ್ದು, ಮುಂಭಾಗ ರೋಲಿಂಗ್ ಶೆಟರ್ ಮೇಲ್ಚಾವಣಿಯೂ ಎ.ಸಿ. ಶೀಟ್‌ಗಳಿಂದ ಕೂಡಿದೆ. ತಳಪಾಯವನ್ನು ಕಟ್ಟಡಕ್ಕೆ ತಕ್ಕಂತೆ ಎತ್ತರಿಸದೇ ಭೂಮಿ ಮಟ್ಟಕ್ಕೆ ಇಡಲಾಗಿದೆ. ಮಳೆಗಾಲದಲ್ಲಿ ಮಳೆ ನೀರು ನಿಲ್ಲಲಿದ್ದು, ಗುಣಮಟ್ಟ ಮತ್ತು ಮೇಲ್ವಿಚಾರಣೆಯಲ್ಲಿಯೂ ನಿಗಾ ವಹಿಸದೇ ಇಲ್ಲಿಯೂ ಅಧಿಕಾರಿಗಳಿಂದ ಕರ್ತವ್ಯ ಲೋಪ ಕಂಡು ಬರುತ್ತದೆ. ಇದರ ಹೊಣೆ ಹೊರುವವರು ಯಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಮಳಿಗೆಗಳನ್ನು ಬಾಡಿಗೆ ನೀಡಲು ವಿನಂತಿಸಿದರೂ ಗಮನಿಸುತ್ತಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ಆದಾಯಕ್ಕೆ ಪೆಟ್ಟು ಬಿದ್ದಿದೆ ಎಂದು ಸಂತೆ ವ್ಯಾಪಾರಿಗಳಾದ ಮಂಜಮ್ಮ, ಶಿವಣ್ಣ, ರಮೇಶ, ನಾಗರಾಜ ಮುಂತಾದವರು ಆರೋಪಿಸುತ್ತಾರೆ.
ವಾಣಿಜ್ಯ ಮಳಿಗೆಗಳ ಹರಾಜಿಗೆ ಸೂಕ್ತ ಕ್ರಮ ಜರುಗಿಸದಿದ್ದರೆ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹಾಸನ ಜಿಲ್ಲಾ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮೀಸೆ ಮಂಜೇಗೌಡ ಎಚ್ಚರಿಸಿದರು.
ದೂರು ನೀಡಿ 4 ವರ್ಷಗಳು ಕಳೆದರೂ ಪಿಡಿಒ, ತಾಲ್ಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯಿತಿ ಸಿಇಒ ಯಾರೂ ಗಮನ ಹರಿಸಿಲ್ಲ.ಲೋಕೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ
ಪಿಡಿಒ ಬಸವರಾಜು ಸಾಮಾನ್ಯ ಸಭೆಯ ಪ್ರತಿಯೊಂದೂ ನಿರ್ಣಯಗಳ ಬಗ್ಗೆ ಅಸಡ್ಡೆ ತೋರುತ್ತಿದ್ದು, ಯಾವ ಕೆಲಸಗಳನ್ನೂ ಅನುಷ್ಠಾನ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ.ಎನ್.ಆರ್.ವಾಸು, ಗ್ರಾಮ ಪಂಚಾಯಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.