
ಹಾಸನ: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಪ್ರಚಾರಾತ್ಮಕ ಉದ್ದೇಶದೊಂದಿಗೆ ‘ನಮ್ಮ ಪೊಲೀಸ್, ನಮ್ಮ ಹೆಮ್ಮೆ’, ‘ಎಲ್ಲರಿಗೂ ಫಿಟ್‌ನೆಸ್’, ಡ್ರಗ್ಸ್ ಮುಕ್ತ ಕರ್ನಾಟಕ ಮತ್ತು ಸೈಬರ್ ಅಪರಾಧ ಜಾಗೃತಿ ಘೋಷವಾಕ್ಯಗಳಡಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮ್ಯಾರಥಾನ್ ಓಟ ನಡೆಯಿತು.
ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಶ್ರಯದಲ್ಲಿ ಬೆಳಿಗ್ಗೆ 7 ಗಂಟೆಗೆ ನಗರದ ಡೈರಿ ಸರ್ಕಲ್‌ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಿಂದ 5 ಕಿ.ಮೀ. ಮ್ಯಾರಥಾನ್ ಆರಂಭಗೊಂಡಿತು. ಪೊಲೀಸರು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಓಟದ ದಾರಿಯಲ್ಲ ಪೊಲೀಸ್ ಇಲಾಖೆಯಿಂದ ಅಗತ್ಯ ಸಲಹೆ-ಸೂಚನೆ ನೀಡಲಾಯಿತು.
ಮ್ಯಾರಥಾನ್‌ಗೆ ಚಾಲನೆ ನೀಡಿದ ಸಂಸದ ಶ್ರೇಯಸ್ ಪಟೇಲ್, ಯುವಕರು ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಿ, ನಶೆಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಇದು ಅತ್ಯಂತ ಉತ್ತಮ ಹಾಗೂ ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಸಮಾಜದಲ್ಲಿ ಸಕಾರಾತ್ಮಕ ಸಂದೇಶ ಸಾರುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಮಾತನಾಡಿ, ಮಾದಕ ವಸ್ತುಗಳ ನಿಷೇಧ ಹಾಗೂ ಡ್ರಗ್ಸ್ ವಿರುದ್ಧ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಯುವಕರು ದೈಹಿಕ ಆರೋಗ್ಯ ಕಾಪಾಡಿಕೊಂಡು, ಯಾವುದೇ ವ್ಯಸನಕ್ಕೂ ಒಳಗಾಗಬಾರದು. ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣದಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಇಂದು ಏಕಕಾಲದಲ್ಲಿ ಮ್ಯಾರಥಾನ್ ಆಯೋಜಿಸಲಾಗಿದೆ. 5 ಕಿ.ಮೀ. ದೂರದ ಈ ಮ್ಯಾರಥಾನ್‌ನಲ್ಲಿ ವಿಶೇಷವಾಗಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ದಾಕ್ಷಾಯಣಿ ಜಿ.ಕೆ., ಡಿಸಿಎಫ್ ಸೌರಭ್ ಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಗೂರು ಕೃಷ್ಣೇಗೌಡ, ಹಿರಿಯ ಪೊಲೀಸ್ ಅಧಿಕಾರಿಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಾರ್ವಜನಿಕರು ಸೇರಿ ಸುಮಾರು 3,500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ನಶೆ ಮುಕ್ತ ಭಾರತ ಘೋಷವಾಕ್ಯದಡಿ ಮ್ಯಾರಥಾನ್ ಆಯೋಜಿಸಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಪಣ ತೊಡುವ ಕೆಲಸ ಮಾಡೋಣಸ್ವರೂಪ್ ಪ್ರಕಾಶ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.