ADVERTISEMENT

ಸಿದ್ದರಾಮಯ್ಯ ಅಸ್ತಿತ್ವಕ್ಕಾಗಿ ಸಿದ್ದರಾಮೋತ್ಸವ: ನಳಿನ್ ಕುಮಾರ್ ಕಟೀಲ್ ಟೀಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 9:09 IST
Last Updated 9 ಜುಲೈ 2022, 9:09 IST
 ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್    

ಹಾಸನ: ಸಿದ್ದರಾಮೋತ್ಸವ ಮೂಲಕ ತಮ್ಮ ಇರುವಿಕೆ, ಅಸ್ತಿತ್ವವನ್ನು ತೋರಿಸಲು ಸಿದ್ಧರಾಮಯ್ಯ ಹೊರಟಿದ್ದಾರೆ. ಇಂತಹ ಬೆಳವಣಿಗೆಯಿಂದ ಡಿ.ಕೆ. ಶಿವಕುಮಾರ್ ದುಃಖದಲ್ಲಿದ್ದು, ಇದನ್ನು ತಡೆಯಲು ವರಿಷ್ಠರು ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ‌‌ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಹಾಸನದಲ್ಲಿ ಎರಡು ದಿನಗಳ ಕಾಲ ಆಯೋಜಿಸ ಲಾಗಿರುವ ರಾಜ್ಯ ಪದಾಧಿಕಾರಿಗಳ ಸಭೆ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗುಂಪುಗಾರಿಕೆ ರಾಜಕಾರಣ, ಕಾಂಗ್ರೆಸ್ ಪಕ್ಷದ ಆಂತರಿಕ ಬೇಗುದಿ ಬೀದಿಗೆ ಬಂದಿದೆ ಎಂದರು.

ಕಾಂಗ್ರೆಸ್ ಗೆ ಮುಂದಿನ ಚುನಾವಣೆಯಲ್ಲಿ ಬಹುಮತ ಬರಲಿದೆ ಎಂಬ ಆಂತರಿಕ ಸಮೀಕ್ಷೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಸಿದ್ದರಾಮಯ್ಯ ಗುಂಪಿಗೆ ಎಷ್ಟು ಸೀಟು, ಶಿವಕುಮಾರ್ ಗುಂಪಿಗೆ ಎಷ್ಟು ಸೀಟು ಬರಲಿವೆ ಎಂಬ ಚರ್ಚೆಯಲ್ಲಿಯೇ ಕಾಂಗ್ರೆಸ್ಸಿಗರು ಕಾಲ ಕಳೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸಿಎಂ ಹುದ್ದೆಯ ಜಗಳದಿಂದ ಮುಂದೆ ಕಾಂಗ್ರೆಸ್ ಎರಡು ಹೋಳಾಗಲಿದೆ ಎಂದು ಭವಿಷ್ಯ ನುಡಿದ ನಳಿನ್ ಕುಮಾರ್, ಕಾಂಗ್ರೆಸ್ ಸ್ಪಷ್ಟವಾಗಿ ಎರಡು ತುಂಡಾಗಿ, ಬಿಜೆಪಿ 150 ಸ್ಥಾನವನ್ನು ಗೆಲ್ಲುವ ಮೂಲಕ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.

ಆಂತರಿಕ ಸಮೀಕ್ಷೆಯು ಜನರ ದೃಷ್ಟಿ ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಮಾಡಿರುವ ತಂತ್ರಗಾರಿಕೆ. ಆದರೆ ಗುಪ್ತಚರ ವರದಿ, ಮಾಧ್ಯಮ ಹಾಗೂ ಕೇಂದ್ರದ ವರದಿಯಂತೆ ಬಿಜೆಪಿ 150 ಸ್ಥಾನ ಪಡೆಯುತ್ತದೆ ಎಂದು ತಿಳಿದುಬಂದಿದೆ ಎಂದರು.

ಮೋದಿ ಮೇಲೂ ತನಿಖೆ:ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕಟೀಲ್, ಕಾಂಗ್ರೆಸ್ ತನ್ನ ಮೇಲೆ ಭ್ರಷ್ಟಾಚಾರ ಆರೋಪ ಬಂದರೆ ತಕ್ಷಣ ಅದನ್ನು ಇನ್ನೊಂದು ಪಕ್ಷದ ಮೇಲೆ ಹಾಕುವುದು ಜಾಯಮಾನವಾಗಿದೆ ಎಂದರು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆ ತನಿಖೆಯಾದರೆ ಅದಕ್ಕೆ ಬಿಜೆಪಿ ಕಾರಣ ಎನ್ನುತ್ತಾರೆ. ಡಿ.ಕೆ ಶಿವಕುಮಾರ್ ಮೇಲೆ ದಾಳಿಯಾದರೆ ಅದಕ್ಕೂ ಬಿಜೆಪಿ ಕಾರಣ ಎನ್ನುತ್ತಾರೆ. ಇ.ಡಿ ಮತ್ತು ಎಸಿಬಿಯವರು ನಮ್ಮ ಎಂಪಿಗಳ ಮನೆ ಮೇಲೆಯೂ ದಾಳಿ ಮಾಡಿದ್ದಾರೆ. ನಮ್ಮ ಜನಪ್ರತಿನಿಧಿಗಳ ಮೇಲೂ ದಾಳಿ ನಡೆದಿದ್ದು, ಯಾರು ಸಹ ಭಯಭೀತರಾಗಿಲ್ಲ ಎಂದು ಸಮರ್ಥಿಸಿಕೊಂಡರು.

ಗೋಧ್ರಾ ಗಲಭೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರನ್ನು ಆರೇಳು ಗಂಟೆ ವಿಚಾರಣೆ ಮಾಡಿದರು. ಅಮಿತ್ ಶಾ ಅವರನ್ನು ಬಂಧಿಸಿ ಜೈಲಿಗೆ ಹಾಕಿದರು. ನಾವೆಲ್ಲೂ ಆರೋಪ ಮಾಡಲಿಲ್ಲ. ಆದರೆ ಕಾಂಗ್ರೆಸ್ ಪಕ್ಷದವರು ತಮ್ಮ ಮುಖ ಉಳಿಸಿಕೊಳ್ಳಲು ವಿಪಕ್ಷಗಳ ಕಡೆ ಕೈ ತೋರಿಸುತ್ತಾರೆ ಎಂದು ಆರೋಪಿಸಿದರು.

ಇಡಿ ಮತ್ತು ಲೋಕಾಯುಕ್ತ ಮುಚ್ಚಿ ಹಾಕುವ ಕೆಲಸ ಬಿಜೆಪಿ ಮಾಡಲಿಲ್ಲ. ಅವರ ಸರ್ಕಾರದ ಅವಧಿಯಲ್ಲಿಯೇ ಲೋಕಾಯುಕ್ತ ಹಲ್ಲು ಕಿತ್ತಿದ್ದು ಸಿದ್ದರಾಮಯ್ಯ. ಲೋಕಾಯುಕ್ತ ಅಸ್ತಿತ್ವದಲ್ಲಿ ಇದ್ದಿದ್ದರೆ ಸಿದ್ದರಾಮಯ್ಯ ಎಂದೋ ಜೈಲಿಗೆ ಹೋಗುತ್ತಿದ್ದರು. ಇದೆಲ್ಲಾ ಅವರಿಗೆ ಗೊತ್ತಿತ್ತು. ಅಂತಹ ಕೆಲಸವನ್ನು ಬಿಜೆಪಿ ಎಂದಿಗೂ ಮಾಡಿಲ್ಲ. ದ್ವೇಷದ ರಾಜಕೀಯವನ್ನು ಸಹ ಮಾಡುವುದಿಲ್ಲ ಎಂದರು.

ನಮ್ಮ ಪಕ್ಷದ ಸಿದ್ಧಾಂತ, ವಿಚಾರಧಾರೆಯನ್ನು ಒಪ್ಪಿ ಬಿಜೆಪಿ ಸೇರಲು ಬರುವವರನ್ನು ಪಕ್ಷ ಎಂದಿಗೂ ಸ್ವಾಗತಿಸುತ್ತದೆ. ಮುಂದಿನ ಚುನಾವಣೆಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಪಕ್ಷ ಮುನ್ನಡೆಯಲ್ಲಿದ್ದು, ಯಡಿಯೂರಪ್ಪ ನಮ್ಮ ಸರ್ವ ಸಮ್ಮತಿ ನಾಯಕ. ಅವರ ಮಾರ್ಗದರ್ಶನ, ಬೊಮ್ಮಾಯಿ ನೇತೃತ್ವ ಹಾಗೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ADVERTISEMENT

ಆದಷ್ಟು ಶೀಘ್ರ ಸಮವಸ್ತ್ರ ವಿತರಣೆ: ಕಟೀಲ್ ಭರವಸೆ
ಹಾಸನ:
ರಾಜ್ಯದ ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಮಕ್ಕಳು ಕಲಿಯಲು ಶಾಲೆಗೆ ಬರುತ್ತಾರೆ. ಸಮವಸ್ತ್ರ, ಶೂ ಪಡೆಯಲು ಅಲ್ಲ ಎಂಬ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಿದ್ದಾರೆ. ಕೋವಿಡ್ ನಿಂದ ಶಾಲೆಗಳು ಇಲ್ಲದ ಕಾರಣ ಸಮವಸ್ತ್ರ ವಿತರಣೆ ವಿಳಂಬವಾಗಿದೆ. ಈಗಾಗಲೇ ಅನುದಾನ ಬಿಡುಗಡೆ ಮಾಡಿದ್ದು, ಅತಿ ಶೀಘ್ರದಲ್ಲಿಯೇ ಸಮವಸ್ತ್ರ ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ಐದಾರು ಜಿಲ್ಲೆಗಳಲ್ಲಿ ನೆರೆ ಮತ್ತು ಭೂಕಸಿತವಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳು ಸಮರೋಪಾದಿಯಲ್ಲಿ ಪರಿಹಾರ ವಿತರಣೆಗೆ ಕ್ರಮ ಕೈಗೊಂಡಿದ್ದು, ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸುವ ಮೂಲಕ ಸೂಚನೆಗಳನ್ನು ನೀಡಿದ್ದಾರೆ.

ನೆರೆಪೀಡಿತ ಜಿಲ್ಲೆಗಳಿಗೆ ತಕ್ಷಣದಿಂದ ಅನುದಾನ ಬಿಡುಗಡೆ ಮಾಡುವಂತಹ ಕೆಲಸ ಮಾಡಿದ್ದಾರೆ ಎಂದರು.

ನೆರೆ ಹಾವಳಿಯಿಂದ ಮನೆಗಳು ಬಿದ್ದು ಹೋಗಿವೆ. ಅವರಿಗೆ ಸೂಕ್ತ ಪರಿಹಾರ ಬಿಡುಗಡೆ ಮಾಡಿದ್ದು, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರವನ್ನು ಬಿಡುಗಡೆ ಮಾಡುವ ಪ್ರಯತ್ನಗಳು ಆಗಿದೆ ಎಂದರು.

ಅಮರನಾಥ್ ಯಾತ್ರೆಗೆ ಹೋದ ಸಾಕಷ್ಟು ಮಂದಿ ಸಿಲುಕಿಕೊಂಡಿದ್ದಾರೆ. ನಮ್ಮ ರಾಜ್ಯದವರು ಯಾರು ಸಿಲುಕಿಕೊಂಡಿದ್ದಾರೆ ಎಂಬುದನ್ನು ರಾಜ್ಯ ಸರ್ಕಾರ ಪರಿಶೀಲನೆ ನಡೆಸುತ್ತಿದ್ದು, ತಕ್ಷಣ ಅವರನ್ನು ರಾಜ್ಯಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಅನಾಹುತಗಳಾಗಿದ್ದರೆ ಅವರಿಗೆ ಸೌಲಭ್ಯ ಒದಗಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.