ADVERTISEMENT

ಹಾಸನ | ಸ್ಪೀಕರ್‌ ಖಾದರ್‌ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 5:52 IST
Last Updated 6 ಫೆಬ್ರುವರಿ 2026, 5:52 IST
ಪ್ರದೀಪ್‌ ಈಶ್ವರ್‌ ಮತ್ತು ಸ್ಪೀಕರ್‌ ಯು.ಟಿ ಖಾದರ್‌
ಪ್ರದೀಪ್‌ ಈಶ್ವರ್‌ ಮತ್ತು ಸ್ಪೀಕರ್‌ ಯು.ಟಿ ಖಾದರ್‌   

ಹಾಸನ: ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರು ಅಸಾಂವಿಧಾನಿಕ ಪದಬಳಕೆ ಮೂಲಕ ಸದನದ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ
ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ
ಸಂಪೂರ್ಣ ಹಕ್ಕಿದೆ. ಆದರೆ ಶಿವಲಿಂಗೇಗೌಡರ ಅಸಂಬದ್ಧ ಪದ ಬಳಕೆ ಸೇರಿದಂತೆ ಇಡೀ ಬೆಳವಣಿಗೆ ಗಮನಿಸುತ್ತಿದ್ದ
ಸಭಾಧ್ಯಕ್ಷರು ನಗುತ್ತ ಕುಳಿತಿದ್ದು, ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿರುವುದು ಖಂಡನಾರ್ಹ. ಇಂತಹ ವರ್ತನೆಗೆ ಸಭಾಧ್ಯಕ್ಷರು ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು
ಆಗ್ರಹಿಸಿದರು.

ಆರ್‌ಎಸ್‌ಎಸ್ ಸಂಘಟನೆ ದೇಶ ಸೇರಿದಂತೆ ವಿಶ್ವದಾದ್ಯಂತ ಉತ್ತಮ ಸಂಘಟನೆಯಾಗಿದ್ದು, ಸಮಾಜಮುಖಿ ಕೆಲಸಗಳ ಜೊತೆಗೆ ಹಿಂದುತ್ವ ಉಳಿದಿರುವುದಕ್ಕೆ ಆರ್‌ಎಸ್‌ಎಸ್ ಪ್ರಮುಖ ಕಾರಣ. ಈ ಸಂಘಟನೆ ವಿರುದ್ಧವೇ ಶಿವಲಿಂಗೇಗೌಡ ಮಾತನಾಡಿರುವುದು ಎಷ್ಟು ಸರಿ ಎಂದು
ಪ್ರಶ್ನಿಸಿದರು.

ADVERTISEMENT

ಸದನದಲ್ಲಿ ಶಾಸಕ ಶಿವಲಿಂಗೇಗೌಡರು ಹೆಣ್ಣುಮಗಳ ಕುರಿತು ಅವಹೇಳನಕಾರಿ ಮಾತನಾಡಿದ್ದರೂ ಸಭಾಧ್ಯಕ್ಷರು ಕ್ರಮ ಕೈಗೊಳ್ಳದಿರುವುದು ಖಂಡನೀಯ. ಅದೇ ಸದನದಲ್ಲಿ ಮುಸ್ಲಿಂ ಸಮುದಾಯ‌ ಹಾಗೂ ಮಹಿಳೆಯರ ಕುರಿತು
ಮಾತನಾಡಿದ್ದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಹಿಂದೂ
ಹೆಣ್ಣುಮಗಳ ಬಗ್ಗೆ ಅವಹೇಳನ ಮಾಡಿದಾಗ ಮೌನ ವಹಿಸುವುದು ಸಭಾಧ್ಯಕ್ಷರ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು
ದೂರಿದರು.

ಈ ಹಿಂದೆ ಸದನದಲ್ಲಿ ಅಸಂಬದ್ಧ ಪದ ಬಳಕೆ ಮಾಡಿದ ಸಿ.ಟಿ. ರವಿ ವಿರುದ್ಧ ಕ್ರಮ ಕೈಗೊಂಡಿರುವ ಸಭಾಧ್ಯಕ್ಷರು, ಶಿವಲಿಂಗೇಗೌಡ ಅವರ ವಿರುದ್ಧ ಕ್ರಮ ಕೈಗೊಳ್ಳ
ದಿರುವುದು ಅಕ್ಷಮ್ಯ. ಈ ರೀತಿಯ ವರ್ತನೆ ಸದನದ ಗೌರವಕ್ಕೆ ಧಕ್ಕೆ ತರುವುದರ ಜೊತೆಗೆ ಧರ್ಮದ ಮಾನವನ್ನೇ ಹರಾಜು ಹಾಕುವಂತಿದೆ. ಶಿವಲಿಂಗೇಗೌಡರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲೇಬೇಕು ಎಂದು
ಒತ್ತಾಯಿಸಿದರು.

ಅರಸೀಕೆರೆಯಲ್ಲಿ ಸಿಎ ಜಾಗವನ್ನು ಅಕ್ರಮವಾಗಿ ಕಬಳಿಸಿಕೊಂಡ ಪ್ರಕರಣದಲ್ಲಿ ಅಂದಿನ ಜಿಲ್ಲಾಧಿಕಾರಿ
ರೋಹಿಣಿ ಸಿಂಧೂರಿ ಅವರು ಶಿವಲಿಂಗೇಗೌಡರ ವಿರುದ್ಧ ಭೂಕಬಳಿಕೆ ವರದಿ ಸಲ್ಲಿಸಿದ್ದನ್ನು ಮರೆತಿದ್ದೀರಾ ಎಂದು ಪ್ರಶ್ನಿಸಿದ ದೇವರಾಜೇಗೌಡ, ಅಂದು ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು‌ ಒತ್ತುವರಿ ಮಾಡಿ ನಿರ್ಮಿಸಿದ್ದ ಮನೆಯ ಜಾಗಕ್ಕೆ ಬದಲಿ ನಿವೇಶನ ನೀಡಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದೇ ತಪ್ಪಾಯಿತು ಎಂದು
ಟೀಕಿಸಿದರು.

ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ತಲಾ ₹ 500 ಹಂಚಿಕೆ ಮಾಡಲು ನಿರ್ದೇಶನ ನೀಡಿರುವುದು ಆಡಿಯೋದಿಂದ ಬಯಲಾಗಿದೆ. ಹುಡಾ ಅಧಿಕಾರಿ ವರ್ಗಾವಣೆಗೆ ಲಂಚ ಪಡೆದಿದ್ದು, ಈ ಕುರಿತು ಎಲ್ಲರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು
ಒತ್ತಾಯಿಸಿದರು.

ಕಾಂಗ್ರೆಸ್ ದೇಶ ಹಾಗೂ ರಾಜ್ಯಕ್ಕೆ ನೀಡಿರುವ ಕೊಡುಗೆಯನ್ನು
ನಾವು ಇಂದಿಗೂ ಸ್ಮರಿಸಬೇಕು. ಆದರೆ ಶಿವಲಿಂಗೇಗೌಡ ಅವರಂತಹ ವ್ಯಕ್ತಿಗಳನ್ನು ಯಾವುದೇ ಪಕ್ಷದಲ್ಲೂ ನೋಡಿಲ್ಲ. ಕೂಡಲೇ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು
ಆಗ್ರಹಿಸಿದರು.

ಪ್ರೀತಂ ವಿರುದ್ಧ ನಾಯಕರಿಗೆ ದೂರು
ಬಿಜೆಪಿಯು ಸಜ್ಜನ ಹಾಗೂ ಯೋಗ್ಯ ನಾಯಕರನ್ನು ಒಳಗೊಂಡ ಪಕ್ಷವಾಗಿದೆ. ಸಂಘ ಪರಿವಾರದ ಜೊತೆಗೆ ಬೆಳೆದಿರುವ ಪಕ್ಷದಲ್ಲಿ ಪ್ರೀತಂಗೌಡ ವರ್ತನೆ, ನಡೆ– ನುಡಿ ಕುರಿತು ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಪತ್ರ ಬರೆಯುವ ಮೂಲಕ ಗಮನ ಸೆಳೆಯಲಾಗಿದೆ ಎಂದು ದೇವರಾಜೇಗೌಡ ಹೇಳಿದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಪ್ರೀತಂ ಗೌಡ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ತತ್ವ, ಸಿದ್ಧಾಂತದ ವಿರುದ್ಧವಾಗಿ ನಡೆದುಕೊಳ್ಳುವವರಿಗೆ, ಭೂ ಮಾಫಿಯಾ ಮಾಡುತ್ತ ಹಾಸನದಲ್ಲಿ ಲೂಟಿ ಮಾಡುತ್ತಿರುವವರಿಗೆ ಯಾವುದೇ ಹುದ್ದೆ ನೀಡದಂತೆ ಈ ಹಿಂದೆಯೇ ತಿಳಿಸಲಾಗಿತ್ತು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.