ADVERTISEMENT

ಹಾಸನ: ಸಾಮೂಹಿಕ ಸತ್ಯನಾರಾಯಣ ಪೂಜೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 14:03 IST
Last Updated 10 ಫೆಬ್ರುವರಿ 2025, 14:03 IST
ಹಾಸನದ ಬಿ.ಕಾಟೀಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮಿಕಾಂತ್‌ ಅವರನ್ನು ಸನ್ಮಾನಿಸಲಾಯಿತು
ಹಾಸನದ ಬಿ.ಕಾಟೀಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮಿಕಾಂತ್‌ ಅವರನ್ನು ಸನ್ಮಾನಿಸಲಾಯಿತು   

ಹಾಸನ: ಕೆಟ್ಟ ವಿಚಾರಗಳಿಂದ ದೂರ ಉಳಿದು ಉತ್ತಮ ಚಿಂತನೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಧಾರ್ಮಿಕ ವಿಚಾರಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯ ಎಂದು ಭಾರತ್ ಸ್ಕೌಟ್ಸ್‌ ಮತ್ತು ಗೈಡ್‌ ಜಿಲ್ಲಾ ಸಮಿತಿ ಕಾರ್ಯದರ್ಶಿ ಸುರೇಶ್ ಗುರೂಜಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಿ.ಕಾಟೀಹಳ್ಳಿಯ ಗೇಟ್‌ನಲ್ಲಿರುವ ಪುನೀತ್ ಕನ್ವೆನ್ಷನ್ ಹಾಲ್‍ನಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯ ವೇದಿಕೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ನಿತ್ಯ ನಮ್ಮ ಸುತ್ತ ಹಲವಾರು ಘಟನೆಗಳು ಘಟಿಸುತ್ತಿರುತ್ತವೆ. ಅಂಥವುಗಳಲ್ಲಿ ಯಾವುದು ನಮಗೆ ಬೇಕು, ಬೇಡ ಎಂಬುದನ್ನು ನಿರ್ಧರಿಸಿ ಮುನ್ನಡೆಯಬೇಕು. ನಮ್ಮ ಬದುಕಿಗೆ ಬೇಕಿರುವ ವಿಚಾರಗಳಲ್ಲಿ ನಮ್ಮನ್ನು ನಾವು ಕೇಂದ್ರೀಕರಿಸಿಕೊಳ್ಳುವುದನ್ನು ಕಲಿಯಬೇಕು. ಆಗ ಮಾತ್ರ ನಾವು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

ADVERTISEMENT

ಮನುಷ್ಯ ಯಾವ ಕಾರಣಕ್ಕೂ ಹಗೆತನ ಬೆಳೆಸಿಕೊಳ್ಳಬಾರದು. ನಮ್ಮಲ್ಲಿರುವ ಹಗೆತನ ನಮ್ಮ ವ್ಯಕ್ತಿತ್ವವನ್ನು ನಾಶ ಮಾಡುತ್ತದೆ. ನಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಕೊಂದು ನಮ್ಮನ್ನು ದುಸ್ಥಿತಿಗೆ ದೂಡುತ್ತದೆ ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕಿ ಮಮತಾ ಹರೀಶ್‍ರಾವ್ ಮಾತನಾಡಿ, ಯೋಜನೆ ಗ್ರಾಮೀಣ ಭಾಗದ ಮಹಿಳೆಯರ ಜೀವನಾಡಿಯಾಗಿ ಕೆಲಸ ಮಾಡುತ್ತಿದೆ. ಇದರಿಂದ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಕ್ರೊ ಫೈನಾನ್ಸ್ ವ್ಯಾಪ್ತಿಗೆ ಬರುವುದಿಲ್ಲ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ ಮಾತನಾಡಿದರು. ಸಮಾಜ ಸೇವಕ ಲಕ್ಷ್ಮೀಕಾಂತ್ ಅವರ ಸೇವೆಯನ್ನು ಗುರುತಿಸಿ ಯೋಜನೆ ವತಿಯಿಂದ ಸನ್ಮಾನಿಸಲಾಯಿತು.

ಕೋರವಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೇಶ್, ಲಯನ್ಸ್ ಮಾಜಿ ಅಧ್ಯಕ್ಷ ನಾಗೇಶ್, ಎಸ್‍ಕೆಡಿಆರ್‌ಡಿಪಿ ಶಾಂತಿಗ್ರಾಮ ಘಟಕದ ಯೋಜನಾ ನಿರ್ದೆಶಕ ನವೀನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.