ADVERTISEMENT

ಗ್ರಾ.ಪಂ ಚುನಾವಣೆಯಲ್ಲಿ ಸೋಲು: ಕಲ್ಲು ತೂರಾಟ; 14 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 14:46 IST
Last Updated 2 ಜನವರಿ 2021, 14:46 IST
ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು.
ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು.   

ಅರಸೀಕೆರೆ: ಗ್ರಾಮ ಪಂಚಾಯಿತಿ ಚುನಾವಣೆಯ ಸೋಲಿನಿಂದ ತಾಲ್ಲೂಕಿನ ಬೈರಗೊಂಡನಹಳ್ಳಿ ಬೋವಿ ಕಾಲೊನಿಯಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಅಭ್ಯರ್ಥಿ ಬೆಂಬಲಿಗರ ನಡುವೆ ಶುಕ್ರವಾರ ಸಂಜೆ ಗಲಾಟೆ ನಡೆದಿದ್ದು, ಘಟನೆಯಲ್ಲಿ ಎರಡೂ ಗುಂಪಿನ 16 ಮಂದಿ ಗಾಯಗೊಂಡಿದ್ದಾರೆ.

ಗ್ರಾಮದ ಆನಂದ್‌ ಹಾಗೂ ಉಮೇಶ್‌ ಸ್ಪರ್ಧೆ ಮಾಡಿದ್ದರು. ಬಿಜೆಪಿ ಬೆಂಬಲಿತ ಉಮೇಶ್‌ ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಪರಾಜಿತ ಅಭ್ಯರ್ಥಿ, ಬೆಂಬಲಿಗರು ಹಾಗೂ ಬಿಜೆಪಿ ಬೆಂಬಲಿಗರು ನಡು ರಸ್ತೆಯಲ್ಲಿ ನಿಂತು ಪರಸ್ಪರ ಕಲ್ಲು ತೂರಿಕೊಂಡಿದ್ದಾರೆ. ಕೈಯಲ್ಲಿ ದೊಣ್ಣೆ, ಬಡಿಗೆ ಹಿಡಿದು ಮಹಿಳೆಯರು ರಸ್ತೆಗಿಳಿದರು. ಮಹಿಳೆಯರ ಜಗಳದಲ್ಲಿ ಪುರುಷರು ಮಧ್ಯಪ್ರವೇಶ ಮಾಡಿದ್ದರಿಂದ ಕಲಹ ತೀವ್ರ ಸ್ವರೂಪ ಪಡೆದುಕೊಂಡಿತು. ಉದ್ರಿಕ್ತರನ್ನು ನಿಯಂತ್ರಿಸಲು ಬಾಣಾವರ ಠಾಣೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಹಲವರಿಗೆ ಕೈ, ಕಾಲಿಗೆ ಪೆಟ್ಟು ಬಿದ್ದಿದ್ದು, ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಉಮೇಶ್ ಅವರ ತಾಯಿ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದ್ದು, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಶಾಸಕ ಕೆ.ಎಂ.ಶಿವಲಿಂಗೇಗೌಡ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್‌.ಆರ್.ಸಂತೋಷ್ ಅವರು ಶನಿವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

‘ಸೋಲಿನ ಹತಾಶೆಯಿಂದ ಪರಾಜಿತ ಅಭ್ಯರ್ಥಿ ಮತ್ತು ಬೆಂಬಲಿಗರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ’ಎಂದು ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.