ADVERTISEMENT

ಹೆತ್ತೂರಿನಲ್ಲಿ ಹೆಚ್ಚಿದ ನಾಯಿಗಳ ಉಪಟಳ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 1:57 IST
Last Updated 1 ಸೆಪ್ಟೆಂಬರ್ 2025, 1:57 IST
ಹೆತ್ತೂರು ಗ್ರಾಮದಲ್ಲಿ ಮಿತಿಮೀರಿದ ನಾಯಿಗಳ ಹಿಂಡು ಆತಂಕ ಮೂಡಿಸಿದೆ
ಹೆತ್ತೂರು ಗ್ರಾಮದಲ್ಲಿ ಮಿತಿಮೀರಿದ ನಾಯಿಗಳ ಹಿಂಡು ಆತಂಕ ಮೂಡಿಸಿದೆ    

ಹೆತ್ತೂರು: ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು, ಮಕ್ಕಳು ಭಯದಿಂದಲೇ ಓಡಾಡುವ ಸ್ಥಿತಿ ಎದುರಾಗಿದೆ.

ಹೋಬಳಿ ಕೇಂದ್ರವಾಗಿದ್ದು, ಎಲ್ಲೆಂದರಲ್ಲಿ ನಾಯಿಗಳ ಗುಂಪು ಎದುರಾಗುತ್ತವೆ. ಗ್ರಾಹಕರು ಅಂಗಡಿಗಳಿಗೆ ಬಂದಾಗ ನಾಯಿಗಳು ಕೂಡಿರುತ್ತವೆ. ಅವರನ್ನು ಹಿಂಬಾಲಿಸಿ ಭಯ ಉಂಟು ಮಾಡುತ್ತಿವೆ. ಕೋಳಿ, ಕುರಿ, ಮೀನು, ಹಂದಿ ಮಾಂಸದ ಮಳಿಗೆಗಳ ಭಾಗದಲ್ಲಂತೂ ಮಕ್ಕಳು, ಮಹಿಳೆಯರು ಹೋಗುವುದಕ್ಕೂ ಭಯ ಪಡುವಂತಾಗಿದೆ.

ಇಲ್ಲಿನ ಬಡಾವಣೆಗಳು ಸೇರಿದಂತೆ ಇತರ ಕಡೆಗಳಲ್ಲಿ ತೆರಳುವ ರಸ್ತೆಯಲ್ಲಿ 20ಕ್ಕೂ ಹೆಚ್ಚು ನಾಯಿಗಳು ಮಲಗುತ್ತಿದ್ದು, ಪ್ರತಿದಿನ ಬೆಳಿಗ್ಗೆ ಶಾಲೆಗೆ ತೆರಳುವ ಮಕ್ಕಳು, ವಾಯುವಿಹಾರಕ್ಕೆ ತೆರಳುವ ಸಾರ್ವಜನಿಕರ ಮೇಲೆ ಬೊಗಳುತ್ತ ದಾಳಿ ಮಾಡುತ್ತಿವೆ. ಹೀಗಾಗಿ ಹೊರಗೆ ಬರಲು ಭಯ ಪಡುವಂತಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ADVERTISEMENT

ಬೈಕ್, ಸೈಕಲ್, ಆಟೊ-ರಿಕ್ಷಾಗಳು ಸಂಚರಿಸುವ ಸಮಯದಲ್ಲಿ ಹಿಂಭಾಗದಲ್ಲಿಯೇ ಓಡಿ ಬರುತ್ತಿದ್ದು, ಹಲವು ಸವಾರರು ಬಿದ್ದು ಗಾಯಗೊಂಡಿದ್ದಾರೆ. ನಾಯಿಗಳ ಹಿಂಡು ಕಂಡಾಗ ಮಕ್ಕಳು ಹೆದರಿ ಓಡುವ ಸಂದರ್ಭದಲ್ಲಿ, ಅವರನ್ನು ಬೆನ್ನಟ್ಟಿ ಗಾಯಗೊಳಿಸಿದ ಉದಾಹರಣೆಗಳು ಬಹಳಷ್ಟು ಇವೆ.

ಐದಾರು ತಿಂಗಳಿನಿಂದ ಹೆತ್ತೂರು ಗ್ರಾಮದಲ್ಲಿ ನೂರಾರು ಬೀದಿ ನಾಯಿಗಳು ಬೀಡು ಬಿಟ್ಟಿದ್ದು, ರಾತ್ರಿ ವೇಳೆ ಮನೆಗಳ ಮುಂದೆ ಜಗಳವಾಡುವ ನಾಯಿಗಳಿಂದಾಗಿ ಜನರು ಕಿರಿಕಿರಿ ಅನುಭವಿಸುವಂತಾಗಿದೆ.

ಎಲ್ಲಿ ನಾಯಿಗಳ ಹಿಂಡು ದಾಳಿ ಮಾಡುತ್ತವೋ ಎಂಬ ಆತಂಕ ಎದುರಾಗಿದೆ. ಕೂಡಲೇ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತುರ್ತು ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಗ್ರಾಮದ ಎಚ್.ಜಿ. ಮೋಹನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು

ಮಾಂಸ ಮೀನು ಖರೀದಿಸಲು ತೆರಳಿದರೆ ನಾಯಿಗಳು ದುರುಗುಟ್ಟಿ ನಿಲ್ಲುತ್ತವೆ. ಖರೀದಿ ಮಾಡಲು ಭಯಪಡುವಂತಾಗಿದೆ. ಸಂಬಂಧಪಟ್ಟವರು ಕೂಡಲೇ ಗಮನ ಹರಿಸಬೇಕಿದೆ.
ದಿನೇಶ್ ಕುಮಾರ್, ಯಡಕೇರಿ ನಿವಾಸಿ
ಬೇರೆ ಕಡೆಗಳಿಂದ ನಾಯಿಗಳನ್ನು ಬಿಡಲಾಗುತ್ತಿದೆ. ನಾಯಿ ಹಿಡಿಯುವ ತಂಡಕ್ಕೆ ಮಾಹಿತಿ ನೀಡಿಹ ಮಳೆ ಕಡಿಮೆಯಾದ ಕೂಡಲೇ ಗ್ರಾಮಕ್ಕೆ ಬಂದು ನಾಯಿಗಳನ್ನು ಹಿಡಿಯಲಿದ್ದಾರೆ.
ಅನುಸೂಯ, ಗ್ರಾ.ಪಂ. ಉಪಾಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.