ADVERTISEMENT

ಹೊಳೆನರಸೀಪುರ: ಚಾವಣಿ ಗಾರೆ ಬಿದ್ದು ವಿದ್ಯಾರ್ಥಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 5:07 IST
Last Updated 13 ಜೂನ್ 2022, 5:07 IST
ಹೊಳೆನರಸೀಪುರ ತಾಲ್ಲೂಕಿನ ತೆವಡಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಾವಣಿ ಗಾರೆ ಕಳಚಿ ಬಿದ್ದಿರುವುದು
ಹೊಳೆನರಸೀಪುರ ತಾಲ್ಲೂಕಿನ ತೆವಡಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಾವಣಿ ಗಾರೆ ಕಳಚಿ ಬಿದ್ದಿರುವುದು   

ಹೊಳೆನರಸೀಪುರ: ತಾಲ್ಲೂಕಿನ ತೆವಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಠ ನಡೆಯುವ ವೇಳೆ ಚಾವಣಿ ಗಾರೆ ಕಳಚಿ ಬಿದ್ದು 6ನೇ ತರಗತಿ ಬಾಲಕ ಚಂದ್ರಶೇಖರ್‌ ಎಂಬಾತನ ತೆಲೆಗೆ ಪೆಟ್ಟು ಬಿದ್ದು ರಕ್ತ ಸುರಿದಿದೆ.

ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ತಕ್ಷಣ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಬಾಲಕನಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಇತ್ತೀಚೆಗೆ ಪುರಸಭೆ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾಂತರಾಜ್‌ ನಡೆಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಶಾಲೆಯನ್ನು ತಕ್ಷಣ ದುರಸ್ತಿಗೊಳಿಸಲು ಆದೇಶಿಸಿದ್ದರು. ಆದರೂ ಯಾರೂ ಈ ಶಾಲೆಯ ದುರಸ್ತಿಗೆ ಕ್ರಮ ತೆಗೆದುಕೊಂಡಿಲ್ಲ.

ADVERTISEMENT

ಚಾವಣಿಯ ಗಾರೆ ಕುಸಿದು ಬಾಲಕನ ತಲೆಗೆ ಏಟು ಬಿದ್ದು ಸ್ವಲ್ಪದರಲ್ಲಿ ಪ್ರಾಣಾಪಾಯ ತಪ್ಪಿದೆ. ಉಳಿದ ವಿದ್ಯಾರ್ಥಿಗಳು ಅದೃಷ್ಟವಶಾತ್‌ ಪಾರಾಗಿದ್ದಾರೆ.ವಿದ್ಯಾರ್ಥಿಗಳ ಜೀವಕ್ಕೆ ಹಾನಿಯಾಗಿದ್ದರೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ತಾಲ್ಲೂಕಿನ ಉದ್ದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದೆ. ಗ್ರಾಮಸ್ಥರು ಕೆಲ ದಿನಗಳ ಹಿಂದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಪ್ರತಿಭಟನೆ ನಡೆಸಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ವಿಷಯ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ತಹಶೀಲ್ದಾರ್‌ ಕೆ.ಕೆ. ಕೃಷ್ಣಮೂರ್ತಿ ಗ್ರಾಮಕ್ಕೆ ತೆರಳಿ ತಾತ್ಕಾಲಿಕವಾಗಿ ಮಕ್ಕಳನ್ನು ರೇಷ್ಮೆ ಇಲಾಖೆಯ ಕಟ್ಟಡಕ್ಕೆ ಸ್ಥಳಾಂತರಿಸಿ ಹೊಸಕಟ್ಟಡ ಕಟ್ಟಿಸಿಕೊಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ವ್ಯವಸ್ಥೆ ಆಗಿಲ್ಲ. ಹೊಸಕಟ್ಟಡ ಕಟ್ಟಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಶಾಲೆಯ ಶಿಕ್ಷಕರು ಮಕ್ಕಳನ್ನು ಶಾಲೆಯ ಬಯಲಲ್ಲಿ ಕೂರಿಸಿಕೊಂಡು ಪಾಠ ಮಾಡುತ್ತಿದ್ದಾರೆ. ಆದರೂ ಯಾವ ಅಧಿಕಾರಿಗಳೂ ಮತ್ತೆ ಇತ್ತ ತಿರುಗಿ ನೋಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.