ಹಾಸನ: ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯಾದ ಯುವ ನಿಧಿ ಯೋಜನೆಯಡಿ ಅರ್ಹ ಫಲಾನುಭವಿಗಳ ನೋಂದಣಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವ ನಿಧಿ ಯೋಜನೆಯಡಿ ಪದವಿ, ಸ್ನಾತಕೋತ್ತರ ಪದವೀಧರರಿಗೆ ಮಾಸಿಕ ₹3 ಸಾವಿರ, ಹಾಗೂ ಡಿಪ್ಲೊಮಾ ತೇರ್ಗಡೆ ಆದವರಿಗೆ ಮಾಸಿಕ ₹1,500 ಅನ್ನು ಡಿಬಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.
ಯುವ ನಿಧಿ ಸೌಲಭ್ಯ ಪಡೆಯಲು 2022-2023 ಹಾಗೂ 2023- 2024 ರಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ, ಸ್ವಯಂ ಉದ್ಯೋಗ, ಖಾಸಗಿ ಉದ್ಯೋಗ ಹೊಂದಿಲ್ಲದವರು, ಉನ್ನತ ವ್ಯಾಸಂಗ ಮುಂದುವರಿಸದೇ ಇರುವವರು ಸೇವಾ ಸಿಂಧು ಪೋರ್ಟಲ್ https//:sevasindhugs.karnataka.gov.inನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಉಚಿತವಾಗಿ ಕರ್ನಾಟಕ ವನ್, ಗ್ರಾಮ ವನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ನೋಂದಣಿಯಲ್ಲಿ ಆಧಾರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹಾಗೂ ಆಧಾರ್ ಲಿಂಕ್ ಮೊಬೈಲ್ ಸಂಖ್ಯೆ ವಿವರ ನೀಡಬೇಕು. ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪ್ರಮಾಣ ಪತ್ರಗಳನ್ನು ನ್ಯಾಡ್ ಪೋರ್ಟಲ್‌ನಲ್ಲಿ ಇಂಡೀಕರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಅಧಿಕಾರಿ ವಿಜಯಲಕ್ಷ್ಮಿ ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.