ADVERTISEMENT

ಅರಸೀಕೆರೆ | ಹೆಚ್ಚುತ್ತಿರುವ ಕಳ್ಳತನ: ಜನರಲ್ಲಿ ಆತಂಕ

ದೇವಾಲಯ, ಬೀಗ ಹಾಕಿದ ಮನೆಗಳಿಗೆ ಕಳ್ಳರ ಲಗ್ಗೆ: ಕಳವು ತಡೆಗೆ ಸಾರ್ವಜನಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 4:39 IST
Last Updated 25 ಡಿಸೆಂಬರ್ 2025, 4:39 IST
ಅರಸೀಕೆರೆ ತಾಲ್ಲೂಕಿನ ದೇವಸ್ಥಾನವೊಂದರ ಬಾಗಿಲು ಮುರಿದಿರುವುದು.
ಅರಸೀಕೆರೆ ತಾಲ್ಲೂಕಿನ ದೇವಸ್ಥಾನವೊಂದರ ಬಾಗಿಲು ಮುರಿದಿರುವುದು.   
ಹೋಬಳಿಗಳ ಪೋಲಿಸ್‌ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ | ಗ್ರಾಮಗಳಲ್ಲಿ ಸಭೆ ನಡೆಸಿ ಅರಿವು ಮೂಡಿಸಲು ಕ್ರಮ | ಮನೆ, ಮುಖ್ಯ ರಸ್ತೆಗಳಿಗೆ ಸಿಸಿಟಿವಿ ಅಳವಡಿಕೆ ಬಗ್ಗೆ ಮಾಹಿತಿ

ಅರಸೀಕೆರೆ: ನಗರ ಹಾಗೂ ಗ್ರಾಮೀಣ ಭಾಗಗಳ ದೇವಸ್ಥಾನಗಳು ಹಾಗೂ ಮನೆಗಳ ಕಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆತಂಕ ಪಡುವಂತಾಗಿದೆ. ಕಳ್ಳತನ ಪ್ರಕರಣಗಳ ಬಗ್ಗೆ ಸೂಕ್ತ ಕ್ರಮ ಹಾಗೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಇತ್ತೀಚಿಗೆ ಜವನಹಳ್ಳಿಯ ಜವರಲಿಂಗೇಶ್ವರ ಸ್ವಾಮಿ ದೇವಸ್ಥಾನ, ಬೆಟ್ಟದಪುರ ರಂಗನಾಥ ಸ್ವಾಮಿ ದೇವಸ್ಥಾನ, ಕೆಳಗಿನ ಕೆಂಚಪ್ಪ ದೇವಸ್ಥಾನದ ಕಬ್ಬಿಣದ ಡೋರ್‌ ತೆಗೆಯಲು ಗ್ಯಾಸ್‌ ಕಟ್ಟರ್‌ ಬಳಸಿ ಪ್ರಯತ್ನ ಪಟ್ಟಿರುವ ಘಟನೆಗಳು ನಡೆದಿವೆ. ಕೆಲವು ದೇವಸ್ಥಾನಗಳಲ್ಲೂ ಪ್ರಕರಣಗಳು ನಡೆದಿವೆ. ಕಳ್ಳರ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

ಭಾನುವಾರ ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಜೆ.ಸಿ.ಪುರ ಗ್ರಾಮದ ಕರಾಳಮ್ಮ ದೇವಸ್ಥಾನದ ಬಾಗಿಲು ತೆಗೆಯಲು ಪ್ರಯತ್ನಿಸಿದ್ದು, ಸಾಧ್ಯವಾಗದೇ ವಾಪಸ್‌ ತೆರಳಿದ್ದಾರೆ. ದೇವಸ್ಥಾನದ ಸುತ್ತಲಿನ ಬೀಗ ಹಾಕಿರುವ 4 ಮನೆಗಳನ್ನು ಒಡೆದಿದ್ದಾರೆ. ಮನೆಗಳಲ್ಲೂ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ಆದರೆ ಒಬ್ಬರ ಮನೆಯಲ್ಲಿ ಮಾತ್ರ ಬೆಳ್ಳಿ ವಸ್ತುಗಳು ಕಳವಾಗಿವೆ ಎಂದು ಪೋಲಿಸ್‌ ಇಲಾಖೆ ತಿಳಿಸಿದೆ.

ADVERTISEMENT

ನಗರದಲ್ಲಿ ಕೆಲವು ದಿನಗಳಿಂದ ಹಾಡಹಗಲೇ ಹಾಗೂ ಜನನಿಬಿಡ ಸ್ಥಳದಲ್ಲೇ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದು, ನಗರದ ಹೊರ ಭಾಗದ ವಾರ್ಡ್‌ಗಳಲ್ಲಿ ಕಳ್ಳರ ಭಯದಿಂದ ರಾತ್ರಿಯಾದರೆ ಓಡಾಡಲು ಜನರು ಭಯಪಡುವಂತಾಗಿದೆ. ಕಳ್ಳರು ಒಂಟಿ ಮನೆಗಳನ್ನು ಹಾಗೂ ಮನೆಯಲ್ಲಿ ಇಲ್ಲದ ಸಮಯವನ್ನು ಗುರಿಯಾಗಿಟ್ಟುಕೊಂಡು ಕಳ್ಳತನ ನಡೆಸುತ್ತಿದ್ದು, ರಾತ್ರಿ ವೇಳೆ ಓಡಾಡಲು ರಕ್ಷಣೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

ಕೆಲವು ದಿನಗಳ ಹಿಂದೆ ನಗರದ ಮಧ್ಯಭಾಗದಲ್ಲಿರುವ ಶ್ಯಾನುಭೋಗರ ಬೀದಿಗೆ ಹೊಂದಿಕೊಂಡಿರುವ ಮಲ್ಲಿಗೆಮ್ಮ ದೇವಸ್ಥಾನದ ರಸ್ತೆಯಲ್ಲಿ ಸಂಜೆ 8ರ ಸಮಯದಲ್ಲಿ ಮನೆಗೆ ನುಗ್ಗಿ 35 ಗ್ರಾಂ ಆಭರಣ ಕದ್ದೊಯ್ದಿದ್ದಾರೆ. ಇದರಿಂದ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ. ಇದೇ ರೀತಿ ಸುನ್ನಿಚೌಕ್, ಮಿನಿ ವಿಧಾನಸೌಧದ ಹತ್ತಿರ ಸೇರಿದಂತೆ ಹಲವು ಸ್ಥಳಗಳಲ್ಲಿ ಕಳ್ಳತನ ನಡೆದಿವೆ.

ನಗರ ಠಾಣಾ ವ್ಯಾಪ್ತಿಯಲ್ಲಿ 2024ರಲ್ಲಿ 19 ಮನೆ ಕಳ್ಳತನ, 2025ರಲ್ಲಿ 14 ಮನೆ ಕಳ್ಳತನವಾಗಿದೆ. ತಾಲ್ಲೂಕಿನ ಇತರೆ ಗ್ರಾಮೀಣ ಭಾಗದ ಠಾಣಾ ವ್ಯಾಪ್ತಿಯಲ್ಲೂ ಕಳ್ಳತನ ನಡೆಯುತ್ತಿದ್ದು, ಈ ಬಗ್ಗೆ ಇಲಾಖೆ ಗಮನಹರಿಸಬೇಕು ಎಂದು ಜನತೆ ಒತ್ತಾಯಿಸಿದ್ದಾರೆ.

ರಾತ್ರಿ ವೇಳೆ ಪೊಲೀಸ್‌ ಬೀಟ್ ಹೆಚ್ಚಳ ಮಾಡಲಾಗುವುದು. ಜನರಲ್ಲಿ ಅರಿವು ಮೂಡಿಸುವುದು ವಾರ್ಡ್‌ಗಳಲ್ಲಿ ಸಭೆ ಕರೆದು ತಂಡ ರಚನೆಗೆ ಒತ್ತು ನೀಡಲಾಗುವುದು.
ಗೋಪಿ ಡಿವೈಎಸ್ಪಿ
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳ ದೇವಸ್ಥಾನಗಳ ಕಳ್ಳತನಗಳ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿದ್ದು ಇದ್ದರ ಬಗ್ಗೆ ಗಮನ ವಹಿಸಲಾಗುವುದು.
ಅರುಣ್‌ಕುಮಾರ್‌ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.