ADVERTISEMENT

ಹಾಸನ | ಕೇಂದ್ರ ಸರ್ಕಾರದಿಂದ ಮೂಗಿಗೆ ತುಪ್ಪ ಸವರುವ ಕೆಲಸ; ಕುಮಾರಸ್ವಾಮಿ

₹ 10 ಸಾವಿರ ಕೋಟಿ ಪ್ಯಾಕೇಜ್‌ ಅಗತ್ಯ

​ಪ್ರಜಾವಾಣಿ ವಾರ್ತೆ
Published 16 ಮೇ 2020, 13:41 IST
Last Updated 16 ಮೇ 2020, 13:41 IST
ಎಚ್‌.ಕೆ.ಕುಮಾರಸ್ವಾಮಿ
ಎಚ್‌.ಕೆ.ಕುಮಾರಸ್ವಾಮಿ   

ಹಾಸನ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಸಮುದಾಯಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ ಸಾಕಾಗುವುದಿಲ್ಲ. ರಾಜ್ಯ ಸರ್ಕಾರ ಕನಿಷ್ಠ ₹ 10 ಸಾವಿರ ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಆಗ್ರಹಿಸಿದರು.

ರಾಜ್ಯದಲ್ಲಿ 200ಕ್ಕೂ ಹೆಚ್ಚು ವಿವಿಧ ರೀತಿಯ ಅಸಂಘಟಿತ ಕಾರ್ಮಿಕರು ಇದ್ದಾರೆ. ಸರ್ಕಾರಗಳ ಈ ಸಹಾಯ ಕೂಲಿಕಾರರು, ಮಹಿಳೆಯರು, ದಲಿತರಿಗೆ ಸಾಲುವುದಿಲ್ಲ. ಆಶಾ ಕಾರ್ಯಕರ್ತೆಯರು ನಿರಂತರ 50 ದಿನ ಕೆಲಸ ಮಾಡಿದ್ದಾರೆ. ಅವರಿಗೆ ₹ 3 ಸಾವಿರ ಪ್ರೋತ್ಸಾಹ ಧನ ಸಾಕಾಗದು. ಕನಿಷ್ಠ ₹ 10 ಸಾವಿರ ನೀಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.

‘ಪ್ಯಾಕೇಜ್ ಘೋಷಣೆ ನಂತರ ಹಣದ ಲಭ್ಯತೆಯಿಲ್ಲವೆಂದು ಮುಖ್ಯಮಂತ್ರಿಮಾತುಗಳನ್ನಾಡಿರುವುದು ಸರ್ಕಾರಕ್ಕೆ ಶೋಭೆ ತರುವ ವಿಚಾರವಲ್ಲ. ಸರ್ಕಾರದ ಬಳಿ ಹಣ ಇದೆಯೋ ಇಲ್ಲವೋ ಗೊತ್ತಿಲ್ಲ. ಯಾವುದಾದರೂ ಮೂಲದಿಂದ ಹಣ ತಂದು ಎಲ್ಲಾ ವೃತ್ತಿಪರರಿಗೂ ನೆರವು ನೀಡಬೇಕು’ ಎಂದರು.

ADVERTISEMENT

‘ಹೂವು ಬೆಳೆಗಾರಿಗೆ ಹೆಕ್ಟೇರ್‌ಗೆ ₹ 25 ಸಾವಿರ ಪರಿಹಾರ ನೀಡಲಾಗುತ್ತಿದೆ. ಎಕರೆ ಪ್ರದೇಶದಲ್ಲಿ ಹೂವು ಬೆಳೆಯಲು ಕನಿಷ್ಟ 50 ಸಾವಿರದಿಂದ ₹ 5 ಲಕ್ಷ ವರೆಗೆ ಖರ್ಚಾಗಲಿದೆ. ಪಾಲಿ ಹೌಸ್‌ ನಲ್ಲಿ ಎಕರೆಗೆ ₹ 20 ಲಕ್ಷ ಖರ್ಚು. ಆದರೆ, ಸರ್ಕಾರ ನೀಡಿರುವ ಪರಿಹಾರ ಮೊತ್ತ ತುಂಬಾ ಕಡಿಮೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲೈಸೆನ್ಸ್‌ ಹೊಂದಿರುವ ಹಾಗೂ ಪೊಲೀಸ್‌ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟಿರುವ ಎಲ್ಲಾ ಆಟೊ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ ಚಾಲಕರಿಗೂ ಪರಿಹಾರ ಹಣ ಸಿಗುವಂತೆ ಸರ್ಕಾರ ನಿಯಮ ರೂಪಿಸಬೇಕು ಎಂದರು.

‘ಲಾಕ್‌ಡೌನ್ ನಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಗೊಬ್ಬರ, ಕ್ರಿಮಿನಾಶಕ ಔಷಧಿ ಹಾಗೂ ಯಂತ್ರೋಪಕರಣಗಳ ದರ ಏರಿಕೆಯಾಗಿದೆ. ಬಿತ್ತನೆ ಬೀಜಗಳಿಗೆ ನೀಡುತ್ತಿರುವ ಸಬ್ಸಿಡಿಯೂ ಕಡಿಮೆ ಇದೆ. ಆದ್ದರಿಂದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಸಬ್ಸಿಡಿ ದರ ಹೆಚ್ಚಿಸಬೇಕು, ಬಡ್ಡಿ ರಹಿತ ಸಾಲ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಯಾವುದಕ್ಕೂ ನಿರ್ಧಿಷ್ಟ ಪರಿಹಾರ ನೀಡದೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಮಹಿಳಾ ಸಾಂತ್ವನ ಕೇಂದ್ರಗಳನ್ನು ರಾಜ್ಯ ಸರ್ಕಾರ ಮುಚ್ಚಲು ಹೊರಟಿದೆ. ಮಹಿಳೆಯರ ಎಷ್ಟೋ ಸಮಸ್ಯೆಗಳು ಆಪ್ತ ಸಮಾಲೋಚನೆ ಮೂಲಕ ಬಗೆಹರಿಸಲಾಗುತ್ತಿತ್ತು. ಮದ್ಯ ಮಾರಾಟದಿಂದಲೇ ಸರ್ಕಾರ ನಡೆಯಬೇಕೆಂದರೆ ಸರ್ಕಾರ ಅಷ್ಟೊಂದು ದಿವಾಳಿಯಾಗಿದೆಯೆ? ರಾಜ್ಯದಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಲ್ಲಿಸಬೇಕು. ಸರ್ಕಾರದ ಆದಾಯಕ್ಕಿಂತ ಜನರ ಆರೋಗ್ಯ ಮುಖ್ಯ. ಮಾತೃ ಪೂರ್ಣ ಯೋಜನೆಯನ್ನು ಮೊದಲಿನಂತೆಯೇ ಮುಂದುವರೆಸಬೇಕು’ ಎಂದು ಆಗ್ರಹಿಸಿದರು.

ಜೇಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ದ್ಯಾವೇಗೌಡ ಹಾಗೂ ಜಿಲ್ಲಾ ವಕ್ತಾರ ಹೊಂಗೆರೆ ರಘು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.