ನುಗ್ಗೇಹಳ್ಳಿ: ‘ಈ ಭಾಗದ ರೈತರ ದಶಕದ ಕನಸು ಈಡೇರಿದೆ. ನಾನು ನನ್ನ ಹುಟ್ಟೂರಿನ ಜನರಿಗೆ ಶಾಶ್ವತ ಯೋಜನೆ ಮಾಡಬೇಕೆನ್ನುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈ ಹಂಗಾಮಿನಿಂದಲೇ ಗ್ರಾಮದ ಕೆರೆಗೆ ಈ ಯೋಜನೆಯ ಮೂಲಕ ನೀರು ಬರುತ್ತಿದೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ’ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ತಿಳಿಸಿದರು.
ಹೋಬಳಿಯ ಸಂತೇಶಿವರ ಗ್ರಾಮದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಕೃತಜ್ಞತಾರ್ಪಣಾ ಕಾರ್ಯಕ್ರಮದಲ್ಲಿ ಭಗೀರಥ ಸ್ವರೂಪಿ ಬಿರುದು ಸ್ವೀಕರಿಸಿ ಅವರು ಮಾತನಾಡಿದರು.
‘ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಸಹಕಾರದಿಂದ ಯೋಜನೆಗೆ ಅನುಮೋದನೆ ದೊರೆಯಿತು. ಇಂದಿನ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ ಬಿಡುಗಡೆ ಮಾಡುವ ಮೂಲಕ ಯೋಜನೆ ಅನುಷ್ಠಾನಗೊಳ್ಳಲು ಪಕ್ಷಾತೀತವಾಗಿ ಸಹಕಾರ ನೀಡಿದ್ದಾರೆ’ ಎಂದರು.
ಸಂಸದ ಬಸವರಾಜ್ ಬೊಮ್ಮಾಯಿ ಮಾತನಾಡಿ, ‘ಈ ಹಿಂದೆ ನಾನು ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ನುಗ್ಗೇಹಳ್ಳಿ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿದ್ದೆ. ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಎಸ್.ಎಲ್. ಭೈರಪ್ಪನವರ ಮನವಿಯಂತೆ ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆಗಳನ್ನು ತುಂಬಿಸುವ ಯೋಜನೆಗೆ ₹25 ಕೋಟಿ ಅನುದಾನ ನೀಡಲಾಗಿತ್ತು’ ಎಂದರು.
‘ಸಾಹಿತ್ಯ ಕ್ಷೇತ್ರದಲ್ಲಿ ಇಡೀ ವಿಶ್ವದ ಗಮನವನ್ನು ಅವರು ಸೆಳೆದಿದ್ದಾರೆ. ಅವರ ಹಲವಾರು ಕೃತಿಗಳನ್ನು ನಾನು ಓದಿದ್ದೇನೆ. ತಮ್ಮ ಕೃತಿಗಳಲ್ಲಿ ಹುಟ್ಟೂರಿನ, ಬಾಲ್ಯದ ಜೀವನ, ಈ ಭಾಗದ ಸಂಸ್ಕೃತಿಯ ಆಚರಣೆಯ ಬಗ್ಗೆ ಹೆಚ್ಚು ಗಮನ ಸೆಳೆದಿದ್ದಾರೆ. ಅವರ ಸಾಹಿತ್ಯ ಲೋಕದ ಪಯಣ ಹೀಗೆ ಮುಂದುವರಿಯಲಿ’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ‘ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆ ತುಂಬಿಸುವ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಮೋದನೆ ದೊರೆತಿತ್ತು. ಆದರೆ ಈಗಿನ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ₹25 ಕೋಟಿ ಬಿಡುಗಡೆ ಮಾಡುವ ಮೂಲಕ ಯೋಜನೆ ಪೂರ್ಣಗೊಳ್ಳಲು ಹೆಚ್ಚಿನ ಸಹಕಾರ ನೀಡಿದ್ದಾರೆ’ ಎಂದರು.
‘ಈ ಯೋಜನೆಗೆ ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಿದ್ದಾರೆ. ಯೋಜನೆಗೆ ಕಾರೇಹಳ್ಳಿ ಸಮೀಪ ಪೈಪ್‌ಲೈನ್ ಕಾಮಗಾರಿ ನಡೆಸಲು ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಭೈರಪ್ಪನವರ ಮನವಿ ಮತ್ತು ನಾನು ಹಾಗೂ ಕ್ಷೇತ್ರದ ಶಾಸಕರು ರೈತರೊಂದಿಗೆ ಮಾತುಕತೆ ನಡೆಸುವ ಮೂಲಕ ಮನವೊಲಿಸಿದ್ದೆವು. ಇಂದು ಯೋಜನೆ ಪೂರ್ಣಗೊಂಡು ಕೆರೆಗೆ ನೀರು ಬಂದಿದೆ ಇದೊಂದು ಶಾಶ್ವತ ಯೋಜನೆ’ ಎಂದು ಹೇಳಿದರು.
ಸಂಸದ ಶ್ರೇಯಸ್ ಪಟೇಲ್, ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿದರು. ತಿಪಟೂರು ಶಾಸಕ ಷಡಕ್ಷರಿ, ಉದ್ಯಮಿ ರಮಣಶ್ರೀ ಷಡಕ್ಷರಿ, ಭೈರಪ್ಪನವರ ಪುತ್ರ ಉದಯಶಂಕರ್, ಅಭಿನಂದನಾ ಕಾರ್ಯಕ್ರಮದ ಸಂಚಾಲಕ ಕೃಷ್ಣಪ್ರಸಾದ್, ಚನ್ನರಾಯಪಟ್ಟಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎ. ರಂಗಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಪರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ರಾಜಣ್ಣ( ಗಂಗೇಗೌಡ ), ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್, ಚಿರಂಜೀವಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಹೋಬಳಿ ಘಟಕದ ಅಧ್ಯಕ್ಷ ದೊರೆಸ್ವಾಮಿ, ಸಬ್ ಇನ್‌ಸ್ಪೆಕ್ಟರ್ ಭರತ್ ರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು.
ಯೋಜನೆ ಭೈರಪ್ಪ ಹೆಸರು: ಮನವಿ
‘ಇದು ಶಾಶ್ವತ ಯೋಜನೆಯಾಗಿದ್ದು ಮುಂದಿನ ತಲೆಮಾರಿನವರು ಕೂಡ ನೆನೆಯುತ್ತಾರೆ. ಈ ಯೋಜನೆಗೆ ಡಾ.ಎಸ್.ಎಲ್. ಭೈರಪ್ಪ ಏತ ನೀರಾವರಿ ಯೋಜನೆ ಎಂದು ಹೆಸರಿಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ’ ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
‘ಸಾಹಿತ್ಯ ಕ್ಷೇತ್ರದ ಅವರ ಗಣನೀಯ ಸೇವೆ ಗುರುತಿಸಿ ಜ್ಞಾನಪೀಠ ಪ್ರಶಸ್ತಿ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸುವುದಾಗಿ’ ಹೇಳಿದರು. ‘ಎಸ್.ಎಲ್. ಭೈರಪ್ಪನವರಿಗೆ ‘ಭಗೀರಥ ಸ್ವರೂಪಿ ನಮ್ಮ ಭೈರಪ್ಪ ನಮ್ಮ ಹೆಮ್ಮೆ’ ಎಂದು ಬಿರುದು ನೀಡುವ ಮೂಲಕ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿದೆ ಅವರ ಕಾಳಜಿಯಿಂದ ಈ ಯೋಜನೆ ಅನುಷ್ಠಾನಗೊಂಡಿದ್ದು ಸುಮಾರು 11 ಕಿ.ಮೀ.ನಿಂದ ಪೈಪ್‌ಲೈನ್ ಮೂಲಕ ನೀರನ್ನು ತಂದು ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆಗಳಿಗೆ ನೀರು ಹರಿಸಲಾಗಿದೆ’ ಎಂದರು.
‘ಮೈಸೂರಿನವರೇ ಎಂದು ತಿಳಿದಿದ್ದೇವು’
‘ಎಸ್.ಎಲ್. ಭೈರಪ್ಪ ಅವರನ್ನು ನಾವು ಮೈಸೂರಿನವರೇ ಎಂದು ತಿಳಿದಿದ್ದೇವು. ಆದರೆ ಅವರ ಹುಟ್ಟೂರು ಸಂತೇಶಿವರ ಗ್ರಾಮ’ ಎಂದು ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
‘ಅವರ ಸಾಹಿತ್ಯದಲ್ಲಿ ಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಜೊತೆಗೆ ರಾಜರ ಆಳ್ವಿಕೆಯ ಬಗ್ಗೆಯೂ ತಮ್ಮ ಕಾದಂಬರಿಗಳಲ್ಲಿ ಬರೆದಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸುವ ಮೂಲಕ ಗ್ರಾಮದ ವತಿಯಿಂದ ಸನ್ಮಾನಿಸುತ್ತಿರುವುದು ಶ್ಲಾಘನೀಯ’ ಎಂದರು
‘ನಮ್ಮ ಮೈಸೂರು ಸಂಸ್ಥಾನದ ವತಿಯಿಂದ ಹಿಂದಿನ ಮಹಾರಾಜರು ರಾಜ್ಯದ ಅನೇಕ ಕಡೆಗಳಲ್ಲಿ ಜಲಾಶಯಗಳು ಸೇರಿದಂತೆ ಕೆರೆಕಟ್ಟೆಗಳನ್ನು ಕಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿ ಕೃಷಿಗೆ ಹೆಚ್ಚಿನ ಅನುಕೂಲವಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.