ಹಾಸನ: ‘ನನ್ನ ಕೈಲಾದ ಕೆಲಸವನ್ನು ಈ ಜಿಲ್ಲೆಗೆ ಮಾಡುತ್ತೇನೆ. ಇಂತಹ 10 ಸಮಾವೇಶ ಮಾಡಿದರು ನಾನೇನು ತಲೆಕೆಡಿಸಿಕೊಳ್ಳುವುದಿಲ್ಲ. ಇವರಿಗೆ ತಾಕತ್ತಿದ್ದರೆ, ಕಾಂಗ್ರೆಸ್ ಪಕ್ಷವನ್ನು ಬಿಟ್ಟು ನಮ್ಮ ರೀತಿ ಪ್ರಾದೇಶಿಕ ಪಕ್ಷ ಕಟ್ಟಲಿ ಎಂದು ಶಾಸಕ ಎಚ್.ಡಿ. ರೇವಣ್ಣ ಸವಾಲು ಹಾಕಿದರು.
ಕಾಂಗ್ರೆಸ್ ಜನಕಲ್ಯಾಣ ಸಮಾವೇಶದಲ್ಲಿ ಮಾಡಿರುವ ಆರೋಪಗಳಿಗೆ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ತಿರುಗೇಟು ನೀಡಿದ ಅವರು, ‘ಇವರೆಲ್ಲ ಜೆಡಿಎಸ್ ಮುಗಿದು ಹೋಯಿತು ಎನ್ನುತ್ತಿದ್ದಾರೆ. 2028ಕ್ಕೆ ಜೆಡಿಎಸ್ ಏನು ಎಂಬುದು ಎಲ್ಲರಿಗೂ ಗೊತ್ತಾಗಲಿದೆ’ ಎಂದರು.
‘ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಪರಿಶ್ರಮ ಇದೆ ಎನ್ನುವುದಕ್ಕೆ ನೂರಾರು ಸಾಕ್ಷಿ ಗುಡ್ದೆಗಳಿವೆ. ದೇವೇಗೌಡರು ಪ್ರಧಾನಿ ಆಗಿದ್ದಾಗ, ಕೇಂದ್ರ ಸರ್ಕಾರದ ನಬಾರ್ಡ್‌ನಿಂದ ರೈತರಿಗೆ ಕಾರ್ಯಕ್ರಮ ರೂಪದಲ್ಲಿ ಸಾಲ ಕೊಡುವಂತೆ ಮಾಡಿದ್ದರು. ನಬಾರ್ಡ್ ಮೂಲಕ ರೈತರಿಗೆ ಸಾಲ ಕೊಡುವುದು, ರಸ್ತೆಗೆ ಹಣ ಕೊಡುವ ಪರಿಪಾಠ ಆರಂಭಿಸಿದ್ದು ದೇವೇಗೌಡರು’ ಎಂದ ಅವರು, ‘ಅಪೆಕ್ಸ್ ಬ್ಯಾಂಕ್‌ಗೆ ₹9,162 ಕೋಟಿ ಕೊಡಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ನಬಾರ್ಡ್‌ಗೆ ದೇವೇಗೌಡರು ಪತ್ರ ಬರೆದಿದ್ದಾರೆ’ ಎಂದರು.
‘ನಬಾರ್ಡ್‌ನಿಂದ ಅಪೆಕ್ಸ್ ಬ್ಯಾಂಕಿಗೆ ಶೇ 70 ರಷ್ಟು ಹಣ ಕೊಡುತ್ತಿದ್ದರು. ಕೇಂದ್ರದಿಂದ ಸಿಗುವ ಸೌಲಭ್ಯವನ್ನು ರಾಜ್ಯಕ್ಕೆ ದೊರಕುವಂತೆ ಮಾಡಿದ್ದೇ ದೇವೇಗೌಡರು. ಎಚ್.ಡಿ. ಕುಮಾರಸ್ವಾಮಿ ಸಾಲ ಮನ್ನಾ ಮಾಡದಿದ್ದರೆ, ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳು ಮುಳುಗಿ ಹೋಗುತ್ತಿದ್ದವು ಅಂತಹ ದೇವೇಗೌಡರನ್ನು ಸಾಕ್ಷಿಗುಡ್ಡೆ ಕೇಳುತ್ತಾರೆ’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಕುಮಾರಸ್ವಾಮಿ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‌ಗಳ ₹531 ಕೋಟಿ ಸಾಲಮನ್ನಾ ಮಾಡಿದರು. ರಾಷ್ಟ್ರೀಯ ಬ್ಯಾಂಕುಗಳ ₹9,600 ಕೋಟಿ ಸಾಲಮನ್ನಾ ಆಗಿದೆ. ರೈತರ ಬಗ್ಗೆ ಮಾತನಾಡುವ ಕಾಂಗ್ರೆಸ್‌ನವರು, ರೈತರ ಸಾಲ ಮನ್ನಾ ಮಾಡಲಿ’ ಎಂದು ಸವಾಲು ಹಾಕಿದರು.
‘ದೇವೇಗೌಡರ ರಾಜಕೀಯ ಜೀವನ ಮುಗಿದು ಹೋಯಿತು ಎಂದು ಕಾಂಗ್ರೆಸ್ ನಾಯಕರು ಭಾಷಣ ಮಾಡುತ್ತಾರೆ. ಆರು ಜಿಲ್ಲೆಯ ಜನರನ್ನು ಕರೆದುಕೊಂಡು ಬಂದು ಸಮಾವೇಶ ಮಾಡಿದ್ದಾರೆ. ಯಾವ ಆಂದೋಲನ ಇದು’ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಕೇಂದ್ರವನ್ನು ವಿಶ್ವಾಸದಲ್ಲಿ ಇಟ್ಟುಕೊಳ್ಳಬೇಕು. ಬೆಳಿಗ್ಗೆ ಎದ್ದರೆ ಪ್ರಧಾನಿಯನ್ನು ಬೈಯುತ್ತಾರೆ. ವಿಶ್ವಾಸ ಇಟ್ಟುಕೊಂಡರೆ ಮಾತ್ರ ಕೇಂದ್ರ ಸರ್ಕಾರ ರಾಜ್ಯದ ಪರ ನಿಲುವು ಹೊಂದಲಿದೆ.ಎಚ್.ಡಿ. ರೇವಣ್ಣ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.