ADVERTISEMENT

ಅರಸೀಕೆರೆ: ವೈಭವದ ಮಾಲೇಕಲ್ಲು ಮಹಾರಥೋತ್ಸವ

ಅರಸೀಕೆರೆ: ಗೋವಿಂದರಾಜ, ಲಕ್ಷ್ಮಿ–ವೆಂಕಟರಮಣ ದರ್ಶನ ಪಡೆದ ಭಕ್ತರು

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 2:17 IST
Last Updated 8 ಜುಲೈ 2025, 2:17 IST
ಅರಸೀಕೆರೆಯ ಮಾಲೇಕಲ್ಲು ತಿರುಪತಿ ಕ್ಷೇತ್ರದಲ್ಲಿ ಸೋಮವಾರ ವಿಜೃಂಭಣೆಯ ಮಹಾರಥೋತ್ಸವ ನೆರವೇರಿತು.
ಅರಸೀಕೆರೆಯ ಮಾಲೇಕಲ್ಲು ತಿರುಪತಿ ಕ್ಷೇತ್ರದಲ್ಲಿ ಸೋಮವಾರ ವಿಜೃಂಭಣೆಯ ಮಹಾರಥೋತ್ಸವ ನೆರವೇರಿತು.   

ಅರಸೀಕೆರೆ: ಮುಗಿಲು ಮುಟ್ಟಿದ ಗೋವಿಂದ ನಾಮಸ್ಮರಣೆಯೊಂದಿಗೆ, ರಾಜ್ಯದ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ತಾಲ್ಲೂಕಿನ ಮಾಲೇಕಲ್ ಅಮರಗಿರಿಯ ಲಕ್ಷ್ಮಿ ವೆಂಕಟರಮಣಸ್ವಾಮಿ ಮಹಾರಥೋತ್ಸವವು ಸೋಮವಾರ ವಿಜೃಂಭಣೆಯಿಂದ ಜರುಗಿತು.

ದ್ವಾದಶಿಯಂದು ಜರುಗಿದ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ದೇವಾಲಯಕ್ಕೆ ಬಂದ ಸಾವಿರಾರು ಭಕ್ತರು, ಸರತಿ ಸಾಲಿನಲ್ಲಿ ನಿಂತು ಬೆಟ್ಟದ ತಪ್ಪಲಿನಲ್ಲಿರುವ ಲಕ್ಷ್ಮಿ ಸಮೇತ ಗೋವಿಂದರಾಜ ಸ್ವಾಮಿಗೆ ಪೂಜೆ ಸಲ್ಲಿಸಿ ದರ್ಶನ ಮಾಡಿದರು. ಮತ್ತೆ ಕೆಲವು ಭಕ್ತರು, ಕಡಿದಾದ ಬೆಟ್ಟವನ್ನೇರಿ ಬೆಟ್ಟದ ಮೇಲೆ ನೆಲೆಸಿರುವ ಪದ್ಮಾವತಿ ಸಮೇತನಾದ ವೆಂಕಟರಮಣ ಸ್ವಾಮಿಯ ದರ್ಶನ ಮಾಡಿದರು.

ಮಧ್ಯಾಹ್ನ ಶ್ರೀದೇವಿ-ಭೂದೇವಿ ಸಮೇತನಾದ ವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಯನ್ನು, ಶೃಂಗಾರ ಮಾಡಿದ್ದ ರಥದ ಮೇಲೆ ಪ್ರತಿಷ್ಠಾಪಿಸಿ, ಮಹಾ ಮಂಗಳಾರತಿ ಬೆಳಗುತ್ತಿದ್ದಂತೆಯೇ ಭಕ್ತರು, ಗೋವಿಂದ ನಾಮಸ್ಮರಣೆಯೊಂದಿಗೆ ರಥವನ್ನು ಎಳೆದರು.

ADVERTISEMENT

ರಥೋತ್ಸವದಲ್ಲಿ ಪಾಲ್ಗೊಂಡು ಅಲಂಕೃತ ರಥದ ಮೇಲೆ ಬಾಳೆಹಣ್ಣು ಎಸೆದರೆ, ಮನದ ಇಷ್ಟಾರ್ಥಗಳು ಈಡೇರಲಿವೆ ಎಂಬ ನಂಬಿಕೆ ಇರುವುದರಿಂದ ಹೆಚ್ಚಾಗಿ ನೂತನ ವಧು– ವರರು ರಥೋತ್ಸವ ವೇಳೆ ತೇರಿಗೆ ಬಾಳೆಹಣ್ಣು ಎಸೆದು ಅಂದುಕೊಂಡಿದ್ದನ್ನು ಈಡೇರಿಸು ಎಂದು ಪ್ರಾರ್ಥಿಸುತ್ತಾರೆ.

ಜಾತ್ರೆ ಅಂಗವಾಗಿ ಲಕ್ಷ್ಮಿ ಹಾಗೂ ಗೋವಿಂದರಾಸ್ವಾಮಿಗೆ ಹಾಗೂ ಬೆಟ್ಟದ ಮೇಲೆ ನೆಲೆಸಿರುವ ಪದ್ಮಾವತಿ, ಲಕ್ಷ್ಮಿ ವೆಂಕಟರಮಣ ಸ್ವಾಮಿಗೆ ಮಾಡಲಾಗಿದ್ದ ವಿಶೇಷ ಅಲಂಕಾರ ಮೆರುಗು ನೀಡಿತು. ದೇವಾಲಯದ ಆವರಣದ ಉದ್ದಗಲಕ್ಕೂ ಕಟ್ಟಿದ್ದ ತಳಿರು ತೋರಣ ಭಕ್ತರನ್ನು ಸ್ವಾಗತಿಸಿದವು.

ಅಲಂಕಾರ ಪ್ರಿಯನಾದ ವೆಂಕಟರಮಣ ಸ್ವಾಮಿಯು ತನ್ನ ಪತ್ನಿಯರಾದ ಶ್ರೀದೇವಿ-ಭೂದೇವಿ ಸಮೇತ ವಿವಿಧ ಚಿನ್ನಾಭರಣಗಳ ಅಲಂಕಾರದೊಂದಿಗೆ ಭಕ್ತರಿಗೆ ದರ್ಶನ ಕರುಣಿಸಿದ.

ರಥೋತ್ಸವ ಸಂದರ್ಭದಲ್ಲಿ ರಾಜ್ಯ ಗೃಹಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ. ಶಿವಲಿಂಗೇಗೌಡ, ತಹಶೀಲ್ದಾರ್ ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷ ಎಂ. ಸಮೀವುಲ್ಲಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಸತೀಶ್, ಉಪ ತಹಶೀಲ್ದಾರ್ ಶಿವಶಂಕರ್, ದೇವಾಲಯದ ಅಭಿವೃದ್ಧಿ ಸಮಿತಿಯ ನಾಗರಾಜು, ತಿರುಪತಿ ಚಂದ್ರು, ಎಸ್‌ವಿಟಿ ಬಾಬು, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾಬಾಯಿ ಚಂದ್ರನಾಯ್ಕ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ರಾಜಕೀಯ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದೇವಾಲಯದ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಮಲಗಿದ ಭಂಗಿಯಲ್ಲಿರುವ ಗೋವಿಂದರಾಜ ಸ್ವಾಮಿಗೆ ಅಲಂಕಾರ ಮಾಡಿರುವುದು.
ಲಕ್ಷ್ಮಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.