ಹಾಸನ: ಜಿಲ್ಲೆಯ ಶಕ್ತಿದೇವತೆ, ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ನಗರದ ಹಾಸನಾಂಬ ದೇವಿಯ ಸ್ಥಳ ಮಹಾತ್ಮೆ ಅಪಾರವಾಗಿದ್ದು, ನಾಡಿನಾದ್ಯಂತ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಕಾತುರರಾಗಿದ್ದಾರೆ. ಹಾಸನಕ್ಕೆ ತನ್ನದೇ ಆದ ಇತಿಹಾಸವಿದ್ದು, ಪೌರಾಣಿಕವಾಗಿಯೇ ಸ್ಥಳವು ಹಲವು ಐತಿಹ್ಯಗಳನ್ನು ಹೊಂದಿದೆ.
12ನೇ ಶತಮಾನದಲ್ಲಿ ಕೃಷ್ಣಪ್ಪನಾಯಕ ಎಂಬ ಪಾಳೇಗಾರನು ದೇವಾಲಯ ಕಟ್ಟಿದ ಬಗ್ಗೆ ಹಾಸನ ತಾಲ್ಲೂಕಿನ ಕುದರಗುಂಡಿ ಎಂಬ ಗ್ರಾಮದಲ್ಲಿರುವ ಕ್ರಿ.ಶ. 1140ರ ವೀರಗಲ್ಲಿನ ಶಿಲಾಶಾಸನದಲ್ಲಿ ಕಂಡು ಬರುತ್ತದೆ. ಹಾಸನಾಂಬ ದೇವಿ ಹೆಸರಿನಿಂದಲೇ ನಗರಕ್ಕೆ ಹಾಸನ ಎಂದು ಹೆಸರು ಬಂದಿದೆ.
ಸ್ಥಳ ಪುರಾಣದ ಪ್ರಕಾರ ಸಪ್ತಮಾತೃಕೆಯರಾದ ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕುಮಾರಿ, ಬ್ರಾಹ್ಮಿದೇವಿ, ವರಾಹಿ ಮತ್ತು ಚಾಮುಂಡಿದೇವಿಯರು ವಿಹರಿಸುತ್ತಿದ್ದಾಗ ಈ ಪ್ರದೇಶದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆಸಲು ನಿರ್ಧರಿಸಿದರು.
ಅವರಲ್ಲಿ ವೈಷ್ಣವಿ, ಮಹೇಶ್ವರಿ, ಕುಮಾರಿಯರು ಈಗಿನ ಹಾಸನಾಂಬ ದೇಗುಲದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರು. ಬ್ರಾಹ್ಮಿದೇವಿಯು ಸಮೀಪದ ಕೆಂಚಮ್ಮನ ಹೊಸಕೋಟೆಯಲ್ಲಿ, ಇಂದ್ರಾಣಿ, ವರಾಹಿ, ಮತ್ತು ಚಾಮುಂಡಿ ದೇವಿಯರು ಹಾಸನ ನಗರ ಮಧ್ಯಬಾಗದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿದರು ಎಂದು ಹೇಳಲಾಗಿದೆ.
ಸುಂದರ ಶಿಲ್ಪಕಲೆಗಳಿಗೆ ಹೆಸರಾದ ಬೇಲೂರು, ಹಳೇಬೀಡು, ಶ್ರವಣಬೆಳಗೊಳಗಳನ್ನು ಒಳಗೂಂಡಿರುವ ಹಾಸನ ಜಿಲ್ಲೆಯ ಈ ದೇವಾಲಯದಲ್ಲಿ, ಆ ರೀತಿಯ ವಿಶೇಷ ಶಿಲ್ಪಕಲಾ ವೈಭವ ಇಲ್ಲದಿದ್ದರೂ, ದೇವಿಯ ಆರಾಧಕರೂ ಲಕ್ಷಾಂತರ ಸಂಖ್ಯೆಯಲ್ಲಿ ದರ್ಶನಕ್ಕೆ ಬರುತ್ತಾರೆ.
ದೇವಿಯ ಮಹಿಮೆಯ ಬಗ್ಗೆ ಅಪಾರವಾಗಿ ನಂಬಿಕೆ ಭಕ್ತ ಸಮೂಹದಲ್ಲಿದ್ದು, ನಂಬಿಕೆ, ಭಕ್ತಿ, ಮಹಿಮೆಗಳೆ ಇಲ್ಲಿನ ವೈಶಿಷ್ಟ್ಯ. ಹಚ್ಚಿದ ದೀಪ, ಬಡಿಸಿದ ನೈವೇದ್ಯ, ಮುಡಿಸಿದ ಹೂವುಗಳು ವರ್ಷಪೂರ್ತಿ ಹಾಗೆಯೇ ಇರುವುದು ಇಲ್ಲಿನ ವಿಶೇಷ.
ಸಪ್ತಮಾತೃಕೆಯರ ಹುತ್ತದ ರೂಪದ ವಿಗ್ರಹ ದೇಗುಲದಲ್ಲಿದ್ದು, ಬೇರೆ ದೇವರಂತೆ ಹಾಸನಾಂಬ ದೇವಿಯನ್ನು ಭಕ್ತರು ಎಲ್ಲ ಸಮಯದಲ್ಲೂ ದರ್ಶನ ಮಾಡಲು ಸಾಧ್ಯವಿಲ್ಲ. ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಾರೆ. ಹಾಸನದ ಮೂಲದವರು ರಾಜ್ಯದ ಯಾವುದೇ ಭಾಗದಲ್ಲಿದ್ದರೂ, ದರ್ಶನೋತ್ಸವದ ಸಮಯದಲ್ಲಿ ದೇವಿಯ ದರ್ಶನಕ್ಕೆ ಬರುತ್ತಾರೆ.
ದೀಪಾವಳಿಯ ಮೊದಲ ದಿನ ದೇವಿಕೆರೆಯಲ್ಲಿ ಸಿದ್ದೇಶ್ವರ ಸ್ವಾಮಿಯ ತೆಪೋತ್ಸವ, ಎರಡನೇ ದಿನ ಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯುತ್ತದೆ. ಪ್ರತಿವರ್ಷವೂ ಸಿದ್ದೇಶ್ವರ ಸ್ವಾಮಿಯ ಉತ್ಸವಮೂರ್ತಿಯ ರಥೋತ್ಸವ ಇರುತ್ತದೆ. ಅಮಾವಾಸ್ಯೆಯಂದು ಸಿದ್ದೇಶ್ವರ ಸ್ವಾಮಿಯ ರಾವಣೋತ್ಸವವು ವಿದ್ಯುತ್ ದೀಪಾಲಂಕೃತಗೊಂಡ ನಗರದ ಮುಖ್ಯ ಬೀದಿಗಳಲ್ಲಿ ವಿಜೃಂಭಣೆಯಿಂದ ಸಂಚರಿಸುತ್ತದೆ.
ಇದರ ಪ್ರಮುಖ ಆಕರ್ಷಣೆ ಎಂದರೆ ಈಶ್ವರನು ರಾವಣನ ಹೆಗಲ ಮೇಲೆ ಸಂಚರಿಸುವುದು. ಈ ಸಂದರ್ಭದಲ್ಲಿ ಗ್ರಾಮೀಣ ಕುಣಿತಗಳಾದ ನಂದಿಧ್ವಜ, ವೀರಗಾಸೆ, ವೀರಭದ್ರನ ಖಡ್ಗ, ಕೀಲುಕುದುರೆ, ಕೊಂಬು – ಕಹಳೆಗಳು ವಿಜೃಂಭಿಸುತ್ತವೆ. ಕೊನೆಯ ದಿನ ಮುಂಜಾನೆಯ ಚಳಿಯಲ್ಲಿ ಸಿದ್ದೇಶ್ವರ ಸ್ವಾಮಿಯ ಕೆಂಡೋತ್ಸವ ಹಾಗೂ ವಿಶ್ವರೂಪ ದರ್ಶನ ಇರುತ್ತದೆ. ಆಕರ್ಷಕವಾದ ಪಟಾಕಿ, ಬಾಣ-ಬಿರುಸುಗಳ ಪ್ರದರ್ಶನದಿಂದ ಆಕಾಶದಲ್ಲಿ ಮೂಡುವ ಚಿತ್ತಾರಗಳು ನೋಡುಗರ ಗಮನ ಸೆಳೆಯುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.