ADVERTISEMENT

ಮಠಾಧೀಶರು ಒಂದು ಜಾತಿ, ಒಬ್ಬ ವ್ಯಕ್ತಿ ಪರ ನಿಲ್ಲಬಾರದು: ಎ.ಟಿ. ರಾಮಸ್ವಾಮಿ

ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆಗೆ ಎ.ಟಿ. ರಾಮಸ್ವಾಮಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 6:32 IST
Last Updated 4 ಡಿಸೆಂಬರ್ 2025, 6:32 IST
<div class="paragraphs"><p>ಎ.ಟಿ. ರಾಮಸ್ವಾಮಿ</p></div>

ಎ.ಟಿ. ರಾಮಸ್ವಾಮಿ

   

ಹಾಸನ: ಕೆಲವು ಮಠಾಧೀಶರು ಒಂದು ಜಾತಿ, ವ್ಯಕ್ತಿ, ಪಕ್ಷದ ಪರವಾಗಿ ನಿಲ್ಲುವುದು ಸರಿಯಲ್ಲ ಎಂದು ಪರಿಸರಕ್ಕಾಗಿ ನಾವು ಸಂಘಟನೆ ಸಂಸ್ಥಾಪಕ ಎ.ಟಿ. ರಾಮಸ್ವಾಮಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿರುವ ಕುರಿತು ಅವರು ಪ್ರತಿಕ್ರಿಯೆ ನೀಡಿದರು.

ADVERTISEMENT

ಧರ್ಮ ಗುರುಗಳ ಹೇಳಿಕೆಗಳು ಎಲ್ಲರನ್ನೂ ಘಾಸಿಗೊಳಿಸುತ್ತವೆ. ಅತ್ಯಂತ ನೋವಿನಿಂದ ಪ್ರಸ್ತಾಪ ಮಾಡುತ್ತಿದ್ದೇನೆ. ನಮ್ಮದು ಸಂಪದ್ಭರಿತ ರಾಜ್ಯವಾಗಿತ್ತು. ಲೂಟಿಕೋರರು ರಾಜ್ಯದ ಸಂಪತ್ತನ್ನು ಲೂಟಿ ಮಾಡಿದರು. ಈಗ ಅತಿಭ್ರಷ್ಟ ರಾಜ್ಯ ಎಂದು ಹೆಸರು ಬಂದಿದೆ. ಅಸಂಸ್ಕೃತರು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅದಕ್ಕಾಗಿ ರಾಜ್ಯದ ಪರಿಸ್ಥಿತಿ ಈ ರೀತಿ ಇದೆ. ಅಭಿಪ್ರಾಯ ಹೇಳುವಾಗ ಮುಚ್ಚುಮರೆ ಇರಬಾರದು. ಧರ್ಮ ಗುರುಗಳು ಸರ್ವೇ ಜನ ಸುಖಿನೋ ಭವಂತು ಎಂದು ಎಲ್ಲೆಡೆ ಹೇಳಬೇಕಿದೆ ಎಂದು ಹೇಳಿದರು.

ಒಂದು ಜಾತಿ, ಪಕ್ಷ, ಒಬ್ಬ ವ್ಯಕ್ತಿಯ ಪರ ಮಠಾಧೀಶರು ಮಾತನಾಡುವ ಬದಲು, ಪರಿಸರ ರಕ್ಷಣೆ ಕುರಿತು ಸಮಾವೇಶ ಮಾಡಲಿ. ಇದರಿಂದ ಜನರಲ್ಲಿ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡುತ್ತದೆ ಎಂದರು.

ಇತ್ತೀಚಿನ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹವಾಮಾನ ಬದಲಾವಣೆ ಆಗುತ್ತಿದೆ. ಪರಿಣಾಮ ಜಗತ್ತಿನಾದ್ಯಂತ ವ್ಯಾಪಕವಾಗಿ ಚಂಡಮಾರುತ, ಅಕಾಲಿಕ ಮಳೆ, ಮೇಘ ಸ್ಪೋಟ, ಭೂಕುಸಿತ, ಭೂಕಂಪ ಸೇರಿದಂತೆ ಅನೇಕ ಪ್ರಾಕೃತಿಕ ವಿಕೋಪ ಕಾಣುತ್ತಿದ್ದೇವೆ. ಆದ್ದರಿಂದ ಜನರಲ್ಲಿ ಈ ಬಗ್ಗೆ ಹೆಚ್ಚು ಜಾಗೃತಿ ಅಗತ್ಯ ಎಂದರು.

ಮಠಾಧೀಶರು ಇಡೀ ಸಮಾಜವನ್ನು ಧರ್ಮ, ನ್ಯಾಯ, ಸತ್ಯದ ಹಾದಿಯಲ್ಲಿ ನಡೆಸಲು ಮಾರ್ಗದರ್ಶನ ಮಾಡಬೇಕು. ಆದರೆ ಕೆಲ ಮಠಾಧೀಶರು ಒಂದು ಜಾತಿ, ವ್ಯಕ್ತಿ ಪರವಾಗಿ ನಿಲ್ಲುತ್ತಿರುವುದು ಸರಿಯಲ್ಲ. ಅವರಿಗೇಕೆ ಅದರ ಗೊಡವೇ ಎಂದು ಪ್ರಶ್ನಿಸಿದರು.

ನಮ್ಮ ರಾಜ್ಯದ ರಾಜಕಾರಣ ತುಂಬಾ ಕೊಳಕಾಗಿದೆ. ಆ ಕೊಳಕು, ಅಂಕು–ಡೊಂಕುಗಳನ್ನು ತಿದ್ದಲು ಮಾರ್ಗದರ್ಶನ ಮಾಡಬೇಕಿರುವುದು ಧರ್ಮಗುರುಗಳ ಕರ್ತವ್ಯ. ನಮ್ಮದು ಧರ್ಮ ನಿರಪೇಕ್ಷಿತ ರಾಷ್ಟ್ರ. ನುಡಿಯಲ್ಲಿ ಅಲ್ಲ, ನಡೆಯಲ್ಲಿ ಮಾರ್ಗದರ್ಶನ ಇರಬೇಕು. ಅದನ್ನು ಜನರು ಹೆಚ್ಚಾಗಿ ಬಯಸುತ್ತಾರೆ. ಸಮಾಜದ ವಿವಿಧ ಜಾತಿ, ಧರ್ಮವನ್ನು ಬೆಸೆಯುವುದು ಧರ್ಮ ಗುರುಗಳ ಕೆಲಸ. ಜಾತಿ ಕೇಂದ್ರೀತವಾಗಿ ಮಾತನಾಡುತ್ತಿರುವುದನ್ನು ನೋಡಿದರೆ, ದುಃಖ ಆಗುತ್ತಿದೆ. ಭಿನ್ನ ಭೇದಗಳಿಗೆ ಮದ್ದು, ಮುಲಾಮು ಹಚ್ಚುವ ಕೆಲಸ ಅವರು ಮಾಡಬೇಕಿತ್ತು. ಇದು ನನ್ನ ವಿನಮ್ರ ಮನವಿ ಎಂದರು.

ಒಲೆ ಹತ್ತಿ ಉರಿದರೆ ನಿಲ್ಲಿಸಬಹುದು. ಧರೆ ಹತ್ತಿ ಉರಿದರೆ ಆರಿಸಲು ಸಾಧ್ಯವಾಗುವುದಿಲ್ಲ. ಅವರವರ ಸಮುದಾಯ, ಜಾತಿ, ಪರ ನಿಂತರೆ ಗತಿ ಏನಾಗುತ್ತದೆ? ಧರ್ಮರಕ್ಷಕರೇ ಅಧರ್ಮವನ್ನು ಪೋಷಿಸಿದಂತಾಗುತ್ತದೆ. ಆ ಕೆಲಸವನ್ನು ಧರ್ಮ ಗುರುಗಳು ಮಾಡುವುದು ಬೇಡ. ಬದಲಿಗೆ ಒಂದುಗೂಡಿಸುವ ಕೆಲಸ ಮಾಡಬೇಕು ಎಂದರು.

ಸಾಮಾಜಿಕ ಹೋರಾಟಗಾರ ಆರ್‌.ಪಿ. ವೆಂಕಟೇಶಮೂರ್ತಿ ಮಾತನಾಡಿ, ಮಠಾಧೀಶರು ವ್ಯಕ್ತಿಪರ ಹೇಳಿಕೆ ನೀಡುವುದು ಸರಿಯಲ್ಲ. ಇತ್ತೀಚಿನ ಧರ್ಮ ಗುರುಗಳ ಕೆಲ ಹೇಳಿಕೆಗಳು ಮಿತಿ ಮೀರಿವೆ. ಈ ರೀತಿಯ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲ ಉಂಟು ಮಾಡುವ ಬದಲು, ಪರಿಸರ ರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿ. ರಚನಾತ್ಮಕವಾಗಿ ಸಮಾಜವನ್ನು ಮುನ್ನಡೆಸಲು ಅವರು ಪ್ರೇರಣೆಯಾಗಲಿ ಎಂದು ಸಲಹೆ ನೀಡಿದರು.

ಸಾಹಿತಿ ರೂಪ ಹಾಸನ ಮಾತನಾಡಿ, ಇತ್ತೀಚಿನ ಹವಾಮಾನ, ಮಾಸಗಳು ಕಾಲಕಾಲಕ್ಕೆ ಇರದೇ ಅಕಾಲಿಕವಾಗಿದೆ. ಹಿಂದೆ ವರ್ಷದಲ್ಲಿ ಒಂದೆರಡು ಚಂಡಮಾರುತ ನೋಡುತ್ತಿದ್ದೆವು. ಆದರೆ ಇತ್ತೀಚಿಗೆ ವರ್ಷದಲ್ಲಿ 15 ರಿಂದ 16 ಚಂಡಮಾರುತಗಳನ್ನು ಕಾಣುತ್ತಿದ್ದೇವೆ. ಇದೆಲ್ಲ ಪ್ರಕೃತಿ ನಮಗೆ ನೀಡುತ್ತಿರುವ ಹವಾಮಾನ ಬದಲಾವಣೆಯ ಮುನ್ಸೂಚನೆ. ಮುಂದಿನ ದಿನದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಪರಿಸರ ಮತ್ತಷ್ಟು ಹದಗೆಡಲಿದೆ ಎಂದು ಎಚ್ಚರಿಸಿದರು.

ಗಿರಿಜಾಂಬಿಕಾ, ಪರಶುರಾಮೇಗೌಡ, ಹೇಮಂತ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.