ಸಕಲೇಶಪುರ: ನಿತ್ಯ 40 ಸಾವಿರ ವಾಹನಗಳು ಸಂಚರಿಸುವ ಹಾಗೂ ರಾಜ್ಯದ ರಾಜಧಾನಿ ಹಾಗೂ ಕರಾವಳಿ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದ ತಡೆಗೋಡೆಗಳು ಕುಸಿಯುತ್ತಿದ್ದು, ಇದೀಗ ಹೆಗ್ಗದ್ದೆ ಗ್ರಾಮದಲ್ಲಿ ಚರ್ಚ್ ಕಟ್ಟಡ, ಬಿಎಸ್‌ಎನ್‌ಎಲ್ ಟವರ್ ನೆಲಕ್ಕುರುಳುವ ಆತಂಕ ಎದುರಾಗಿದೆ.
ಹೆಗ್ಗದ್ದೆ ಗ್ರಾಮದಲ್ಲಿ ಇರುವ ಸೆಂಟ್ ಮೇರೀಸ್ ಚರ್ಚ್ ಹೆದ್ದಾರಿಗಿಂತ ಸುಮಾರು 100 ಅಡಿ ಎತ್ತರದಲ್ಲಿದೆ. ಈ ಚರ್ಚ್ ಸುತ್ತಲೂ ಚತುಷ್ಪಥಕ್ಕಾಗಿ ಗುಡ್ಡವನ್ನು ಕತ್ತರಿಸಲಾಗಿದೆ. 100 ಅಡಿ ಎತ್ತರದ ಗುಡ್ಡಕ್ಕೆ ಕೇವಲ 5 ಅಡಿ ಎತ್ತರದ ತಡೆಗೋಡೆ ನಿರ್ಮಾಣ ಮಾಡಲಾಗಿದೆ.
ಒಂದೇ ಮಳೆಗೆ ಆ ತಡೆಗೋಡೆ ಸಹ ಅಲ್ಲಲ್ಲಿ ಕುಸಿದಿದೆ. ಜೊತೆಗೆ ಮೇಲ್ಬಾಗದಲ್ಲಿ ಚರ್ಚ್ ಹಾಗೂ ಚರ್ಚ್‌ನ ಧರ್ಮಗುರುಗಳ ಮನೆ ಇದೆ. ಮನೆಯಿಂದ ಕೇವಲ 10 ಅಡಿ ಅಂತರದಲ್ಲಿ ಗುಡ್ಡ ಕುಸಿದಿದ್ದು, ನಿರಂತರವಾಗಿ ಮಳೆ ಸುರಿದರೆ, ಮನೆ ಹಾಗೂ ಅದರ ಪಕ್ಕದಲ್ಲಿಯೇ ಇರುವ ಚರ್ಚ್ ಕಟ್ಟಡಕ್ಕೂ ಹಾನಿ ಆಗುವ ಸಾಧ್ಯತೆಗಳಿವೆ ಎಂದು ಜನರು ಹೇಳುತ್ತಿದ್ದಾರೆ.
ಒಂದು ಕಡೆ ಬಿದ್ದರೆ ಚರ್ಚ್ ಕಟ್ಟಡಕ್ಕೆ ಹಾನಿಯಾಗುತ್ತದೆ. ಹೆದ್ದಾರಿಯಲ್ಲಿ ಸದಾ ಸಂಚರಿಸುವ ವಾಹನಗಳ ಮೇಲೆ ಬಿದ್ದು ಭಾರಿ ಅನಾಹುತ ಉಂಟಾಗುತ್ತದೆ. ಹೆಗ್ಗದ್ದೆ, ಮಾರನಹಳ್ಳಿ ಭಾಗದ ಮೊಬೈಲ್ ಸಂಪರ್ಕವೇ ಕಡಿತವಾಗುತ್ತದೆ ಎಂದು ಗ್ರಾಮದ ರವಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯಿಂದಾಗಿ ಚರ್ಚ್ ಹಾಗೂ ಮನೆಯ ಕಟ್ಟಡ ಬೀಳುವ ಆತಂಕ ಉಂಟಾಗಿದೆ. ಈಗಾಗಲೆ ಸಾಕಷ್ಟು ಭೂಮಿ ಕುಸಿದಿದ್ದು ಇನ್ನೂ ಕುಸಿಯುವ ಸಾಧ್ಯತೆ ಕಂಡು ಬಂದಿದೆ.ಡಾ. ಫ್ರಾನ್ಸಿಸ್ ಚರ್ಚ್‌ನ ಫಾದರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.