ನುಗ್ಗೇಹಳ್ಳಿ: ‘ಭೈರಪ್ಪ ನನ್ನ ಒಡನಾಡಿ. ನನಗೆ ಓದಿನಲ್ಲೂ ಹೆಚ್ಚು ಸಹಾಯ ಮಾಡುತ್ತಿದ್ದರು. ತೀವ್ರ ಬಡ ಕುಟುಂಬದಿಂದ ಬಂದಿದ್ದವರು. ತುಂಬಾ ಕಷ್ಟವನ್ನು ಅರಿತಿದ್ದರು. ಯಾವಾಗಲೂ ಗ್ರಾಮದ ಬಗ್ಗೆ ಗ್ರಾಮದ ಇತಿಹಾಸದ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು’
ಎಸ್.ಎಲ್ ಭೈರಪ್ಪನವರ ಸಹಪಾಠಿ, 102 ವರ್ಷದ ರಾಜಶೇಖರಯ್ಯ ತಮ್ಮ ಬಾಂಧವ್ಯವನ್ನು ಬಿಚ್ಚಿಟ್ಟಿದ್ದು ಹೀಗೆ. ಭೈರಪ್ಪನವರಲ್ಲಿ ಇದ್ದ ಅನೇಕ ಉದಾತ್ತ ಗುಣಗಳನ್ನು ಅವರು ಮೆಲುಕು ಹಾಕಿದರು.
‘ಗ್ರಾಮದ ಅಭಿವೃದ್ಧಿಯೇ ಅವರ ಕನಸಾಗಿತ್ತು. ಅದಕ್ಕಾಗಿ ಗ್ರಾಮದಲ್ಲಿ ತಾಯಿಯ ಹೆಸರಿನಲ್ಲಿ ಗ್ರಂಥಾಲಯ ಆರಂಭಿಸಿದ್ದರು. ಗ್ರಾಮದ ಕೆರೆಗೆ ನೀರು ತುಂಬಿಸಿದ್ದಾರೆ. ಅಷ್ಟು ದೊಡ್ಡ ವ್ಯಕ್ತಿಯಾದರೂ ಹುಟ್ಟೂರನ್ನು ಮರೆತಿರಲಿಲ್ಲ. ಗ್ರಾಮಕ್ಕೆ ಬಂದಾಗಲೂ ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದ ಭೈರಪ್ಪ ಇಲ್ಲದಿರುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಗದ್ಗದಿತರಾದರು.
‘ಗ್ರಾಮದಲ್ಲಿ ಹಲವು ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಿದ್ದಾರೆ. ಅವರ ನಿಧನದಿಂದ ಇಡೀ ಗ್ರಾಮ ಬಡವಾಗಿದೆ. ಅವರ ಅಂತ್ಯಸಂಸ್ಕಾರ ಇಲ್ಲಿಯೇ ನಡೆದರೆ, ಅವರ ಪ್ರೀತಿಯ ತಾಯಿಯ ಆತ್ಮಕ್ಕೂ ಶಾಂತಿ ಸಿಗಲಿದೆ’ ಎಂದರು.
‘ನಮ್ಮ ತಂದೆ ಹಾಗೂ ಅವರ ತಂದೆ ಸ್ನೇಹಿತರಾಗಿದ್ದು, ಭೈರಪ್ಪನವರು ಅವರ ತಂದೆ ಲಿಂಗಣ್ಣಯ್ಯ ಅವರೊಂದಿಗೆ ನಮ್ಮ ಮನೆಗೆ ಬರುತ್ತಿದ್ದರು’ ಎಂದು ಮಾಜಿ ಪ್ರಧಾನ ದುಗ್ಗೇನಹಳ್ಳಿ ವೀರೇಶ್ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು.
‘ಗ್ರಾಮಕ್ಕೆ ಹಲವು ಬಾರಿ ಭೇಟಿ ನೀಡುತ್ತಿದ್ದರು. ಬಾಲ್ಯದಲ್ಲಿ ಓದಿನ ಕಡೆಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದರು. ಅವರ ತಂದೆಯ ನಿಧನದ ನಂತರ ಸಂಬಂಧಿಕರ ಮನೆಗಳಲ್ಲಿದ್ದು ಕಷ್ಟದಿಂದ ವಿದ್ಯಾಭ್ಯಾಸ ಮುಗಿಸಿದ್ದರು. ವಂಶವೃಕ್ಷ ಸೇರಿದಂತೆ ಅವರ ಅನೇಕ ಪುಸ್ತಕಗಳನ್ನು ನಾನು ಓದಿದ್ದೇನೆ. ಸಮಾಜಮುಖಿ ಕೆಲಸ ನಿರ್ವಹಿಸುತ್ತಿದ್ದರು. ಸದಾ ಗ್ರಾಮದ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದರು’ ಎಂದು ಹೇಳಿದರು.
‘ಭೈರಪ್ಪನವರ ಹೆಸರು ಕರ್ನಾಟಕವಲ್ಲದೆ ಇಡೀ ವಿಶ್ವದಲ್ಲಿ ಇದೆ. ಅವರ ಅಗಲಿಕೆಯಿಂದ ಗ್ರಾಮಕ್ಕೆ ಹಾಗೂ ಸಾಹಿತ್ಯ ಲೋಕಕ್ಕೆ ಹೆಚ್ಚು ನಷ್ಟವಾಗಿದೆ. ಅವರ ಪರಿಶ್ರಮದಿಂದಲೇ ಇಂದು ಸುಮಾರು ₹ 5 ಕೋಟಿ ವೆಚ್ಚದಲ್ಲಿ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ನಿರ್ಮಾಣಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ಗ್ರಾಮದಲ್ಲಿ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಲಿ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ರಾಜಣ್ಣ( ಗಂಗೇಗೌಡ) ಒತ್ತಾಯಿಸಿದರು.
ಭೈರಪ್ಪನವರು ಹುಟ್ಟೂರಿನ ಬಗ್ಗೆ ಹೆಚ್ಚು ಪ್ರೀತಿ ಹೊಂದಿದ್ದರು. ತಾಯಿ ಹೆಸರಿನಲ್ಲಿ ಭವನ ಟ್ರಸ್ಟ್ ಸ್ಥಾಪನೆ ಮಾಡಿ ಪ್ರತಿವರ್ಷ ತಾಯಿಯನ್ನು ಸ್ಮರಿಸುವ ಕೆಲಸ ಮಾಡುತ್ತಿದ್ದರು. ಅವರ ಹೆಸರು ಚಿರವಾಗಿ ಉಳಿಸಲು ಸರ್ಕಾರ ಮುಂದಾಗಬೇಕು. ವೇಣುಗೋಪಾಲ್ ಭೈರಪ್ಪನವರ ದೊಡ್ಡಪ್ಪನ ಮಗ
ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ: ಗ್ರಾಮಸ್ಥರ ಆಗ್ರಹ
ಗ್ರಾಮದ ಒಳಿತಿಗಾಗಿ ನೀರಾವರಿ ಯೋಜನೆ ಸೇರಿದಂತೆ ಜನಪರ ಅಭಿವೃದ್ಧಿಗೆ ಸರ್ಕಾರಗಳಿಂದ ಹೆಚ್ಚಿನ ಅನುದಾನ ಕೊಡಿಸುವಲ್ಲಿ ಹೆಚ್ಚು ಶ್ರಮ ವಹಿಸಿದ್ದವರು ಭೈರಪ್ಪ. ಗ್ರಾಮದಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಯಲು ಇಲ್ಲಿಯೇ ಅವರ ಅಂತ್ಯಸಂಸ್ಕಾರ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಭೈರಪ್ಪನವರ ಸಂಬಂಧಿ ನಿವೃತ್ತ ರೇಷ್ಮೆ ಅಧಿಕಾರಿ ಕೃಷ್ಣಪ್ರಸಾದ್ ‘ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ಭೈರಪ್ಪ ಉಯಿಲು ಬರೆದಿದ್ದಾರೆ. ಅವರ ಆಸೆಯಂತೆ ಗ್ರಾಮದಲ್ಲಿ ನೆರವೇರಿದರೆ ಅವರ ಆತ್ಮಕ್ಕೂ ಶಾಂತಿ ಸಿಗುತ್ತದೆ. ಈ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಗಮನಹರಿಸಬೇಕು’ ಎಂದು ಒತ್ತಾಯಿಸಿದರು. ಇದೇ ವೇಳೆ ಗ್ರಾಮಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಗ್ರಾಮಸ್ಥರ ಜೊತೆಗೆ ಸಮಾಲೋಚನೆ ನಡೆಸಿದರು.
ಗ್ರಾಮದಲ್ಲಿ ನೀರವ ಮೌನ
ಭೈರಪ್ಪನವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಹುಟ್ಟೂರು ಸಂತೇಶಿವರದಲ್ಲಿ ನೀರವ ಮೌನ ಆವರಿಸಿದೆ. ಗ್ರಾಮದಲ್ಲಿ ತಮ್ಮ ತಾಯಿಯ ಸ್ಮರಣಾರ್ಥ ಭೈರಪ್ಪನವರು ನಿರ್ಮಾಣ ಮಾಡಿದ್ದ ಗೌರಮ್ಮ ಟ್ರಸ್ಟ್ ಗ್ರಂಥಾಲಯದ ಮುಂಭಾಗ ಸೇರಿದ ಗ್ರಾಮಸ್ಥರು ಭೈರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಸಂತೇಶಿವರದಲ್ಲಿ ಹುಟ್ಟಿರುವುದೇ ನಮ್ಮೆಲ್ಲರ ಸೌಭಾಗ್ಯ. ಅವರ ಹುಟ್ಟೂರಿನ ಅಭಿಮಾನದಿಂದ ಸುಮಾರು ₹ 25 ಕೋಟಿ ವೆಚ್ಚದ ಏತ ನೀರಾವರಿ ಯೋಜನೆ ಪೂರ್ಣಗೊಂಡು ಕೆರೆಗಳನ್ನು ತುಂಬಿಸುತ್ತಿದೆ. ಅವರ ಈ ನಿಸ್ವಾರ್ಥ ಸೇವೆ ಅನನ್ಯ ಎಂದು ಗ್ರಾಮಸ್ಥರು ಭೈರಪ್ಪನವರ ಸೇವೆ ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.