
ಕೊಣನೂರು: ಕೆಲ ದಿನಗಳಿಂದ ನಿಂತಿದ್ದ ಹೊಗೆಸೊಪ್ಪು ಮಾರಾಟ ಪ್ರಕ್ರಿಯೆಯು ಗುರುವಾರದಿಂದ ಮತ್ತೆ ಪ್ರಾರಂಭವಾಯಿತು.
ತಂಬಾಕಿನ ಮೇಲೆ ಜಿಎಸ್‌ಟಿ ವಿಧಿಸಿದ್ದರಿಂದ ಸಮೀಪದ ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ವರ್ತಕರು ಕೊಳ್ಳುವಿಕೆಯಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ಮಾರಾಟ ಪ್ರಕ್ರಿಯೆಯನ್ನು ಹಲವು ದಿನ ನಿಲ್ಲಿಸಲಾಗಿತ್ತು. ಗುರವಾರದಿಂದ ಮತ್ತೆ ಮಾರಾಟಕ್ಕೆ ಚಾಲನೆ ದೊರೆಯಿತು. ಆದರೆ, ದರ ಏರಿಕೆಯಾಗಬಹುದು ಎಂದು ನಿರೀಕ್ಷಿಸಿದ್ದ ಬೆಳೆಗಾರರಿಗೆ ಬೇಸರ ಮೂಡಿಸಿತು.
ಜ. 22 ರವರೆಗೆ ನಡೆದ ವಹಿವಾಟಿನಲ್ಲಿ ಪ್ರತಿ ಕೆ.ಜಿ. ತಂಬಾಕಿಗೆ ₹320 ಗರಿಷ್ಠ ಬೆಲೆ ದೊರೆತಿದ್ದು, ಕನಿಷ್ಠ ₹250 ದರ ಸಿಕ್ಕಿತ್ತು. ಗುರುವಾರದ ವಹಿವಾಟಿನಲ್ಲಿ ಗರಿಷ್ಠ ಬೆಲೆ ₹311 ಮತ್ತು ಕನಿಷ್ಠ ₹210 ಸಿಕ್ಕಿದ್ದು ಬೆಳೆಗಾರರ ನಿರಾಸೆಗೆ ಕಾರಣವಾಯಿತು. ಪ್ರತಿ ಕೆ ಜಿ ತಂಬಾಕಿನ ಸರಾಸರಿ ಬೆಲೆಯು ₹292 ರ ಬದಲು ₹272 ದೊರೆತಿದೆ.
ಗುರುವಾರ ಫ್ಲಾಟ್ ಫಾರಂ 7 ರಲ್ಲಿ ನಡೆದ ವಹಿವಾಟಿನಲ್ಲಿ ಮಾರಾಟಕ್ಕೆ ಬಂದಿದ್ದ 521 ಬೇಲ್‌ಗಳ ಪೈಕಿ 409 ಬೇಲ್ ಮಾರಾಟವಾಗಿವೆ. ಗರಿಷ್ಠ ₹ 311, ಕನಿಷ್ಠ ₹210 ಮತ್ತು ಸರಾಸರಿ ₹272 ದರ ಸಿಕ್ಕಿದೆ ಒಟ್ಟು 10 ಕಂಪನಿಗಳು ಮಾರಾಟ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ₹8.9 ಕೋಟಿ ವಹಿವಾಟು ನಡೆಯಿತು. 37 ಸಾವಿರ ಕೆ.ಜಿ. ತಂಬಾಕು ಮಾರಾಟವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.