
ಬೇಲೂರು: ಪ್ರವಾಸಿಗರಿಗೆ ಮೂಲಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಇಲ್ಲಿನ ಚನ್ನಕೇಶವ ದೇಗುಲಕ್ಕೆ ಮಂಗಳವಾರ ಭೇಟಿ ನೀಡಿ, ಸುತ್ತ, ಮುತ್ತಲಿನ ಸ್ಥಳ ಪರಿಶೀಲನೆ ನಡೆಸಿದರು.
ದೇಗುಲದ ಮುಂಭಾಗದಲ್ಲಿರುವ ಸುಲಭ ಶೌಚಾಲಯದಲ್ಲಿನ ಅವ್ಯವಸ್ಥೆ ಕಂಡು ಪುರಾತತ್ವ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
100 ಮೀಟರ್ ವ್ಯಾಪ್ತಿಯೊಳಗಿನ ನಿವಾಸಿಗಳಿಗೆ ತೊಂದರೆ ಕೊಡುವ ಬದಲು ಸೂಕ್ತ ಪರಿಹಾರ ಕೊಟ್ಟು ವಶಕ್ಕೆ ಪಡೆಯಲಿ ಬಲಾಢ್ಯರಿಗೆ ಒಂದು ರೀತಿ, ಹಣ ಇಲ್ಲದವರಿಗೆ ಮತ್ತೊಂದು ರೀತಿ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಲತಾಕುಮಾರಿ, ‘ಪ್ರವಾಸಿಗರ ವಾಹನಗಳನ್ನು ಕೆಂಪೇಗೌಡರ ವೃತ್ತದಿಂದ ಡಾ.ಅಂಬೇಡ್ಕರ್ ವೃತ್ತದ ಮೂಲಕ ದೇಗುಲ ಹಿಂಬದಿ ಇರುವ ಪ್ರವಾಸೋದ್ಯಮ ಸ್ಥಳದಲ್ಲಿ ನಿಲುಗಡೆ ಮಾಡಲಾಗುವುದು. ಪ್ರವಾಸಿಗರು ಅಡುಗೆ ಮಾಡಿಕೊಳ್ಳಲು ಅನುಕೂಲ ಆಗುವಂತೆ ಡಾರ್ಮೆಂಟ್ರಿ ಜೊತೆಯಲ್ಲೇ ಶೌಚಾಲಯವನ್ನು ನಿರ್ಮಿಸಲಾಗುವುದು. ದೇಗುಲ ಮುಂಭಾಗದಲ್ಲಿ ನಡೆಸುವ ಕೆಲವೊಂದು ವ್ಯಾಪಾರಗಳನ್ನು ಈ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು. ದೇಗುಲ ಹಿಂಭಾಗದ ಓವರ್‌ಹೆಡ್ ಟ್ಯಾಂಕ್ ಇರುವ ಸ್ಥಳದಲ್ಲಿ ಫುಡ್‌ಕೋರ್ಟ್ ನಿರ್ಮಿಸಲಾಗುವುದು’ ಎಂದರು.
ದೇಗುಲ ಮುಂಭಾಗವಿರುವ ಪುರಾತತ್ವ ಇಲಾಖೆಯ ಶೌಚಾಲಯವನ್ನು 24 ಗಂಟೆ ತೆರೆಯಲು, ಮಹಿಳೆಯರು, ಪುರುಷರಿಗೆ ಪತ್ಯೇಕವಾಗಿಸಲು ಸೂಚಿಸಲಾಗಿದೆ. ದೇಗುಲದ 100 ಮೀಟರ್ ವ್ಯಾಪ್ತಿಯಲ್ಲಿ ಕೆಲವೊಂದು ಕೆಲಸ ಮಾಡದಂತೆ ತಡೆಯೊಡ್ಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ, ಅಸಮಾಧಾನ ವ್ಯಕ್ತಪಡಿಸಿದರು.
ಶಿಥಿಲಾವಸ್ಥೆಯಲ್ಲಿರುವ ನವರಾತ್ರಿ ಮಂಟಪ ವೀಕ್ಷಿಸಿ, ಜೀರ್ಣೋದ್ಧಾರ ಇಲ್ಲವೇ ಮರು ನಿರ್ಮಾಣವನ್ನು ಶೀಘ್ರ ಕೈಗೆತ್ತಿಕೊಳ್ಳುವಂತೆ ಪುರಾತತ್ವ ಇಲಾಖೆ ಅಧಿಕಾರಿಗೆ ಸೂಚಿಸಿದರು. ಪ್ರವಾಸಕ್ಕೆ ಬಂದಿದ್ದ ಶಾಲಾ ವಿದ್ಯಾರ್ಥಿಗಳ ಜೊತೆ ಕೆಲಕಾಲ ಕಳೆದರು.
ಸಕಲೇಶಪುರ ಉಪವಿಭಾಗಾಧಿಕಾರಿ ರಾಜೇಶ್, ತಹಶೀಲ್ದಾರ್ ಶ್ರೀಧರ್ ಕಂಕನವಾಡಿ, ಪುರಸಭೆ ಅಧ್ಯಕ್ಷೆ ಉಷಾಸತೀಶ್, ಸದಸ್ಯರಾದ ಬಿ.ಗಿರೀಶ್, ಜಗದೀಶ್, ತೀರ್ಥಕುಮಾರಿ ವೆಂಕಟೇಶ್, ಮೀನಾಕ್ಷಿ, ಭರತ್, ಜಿಲ್ಲಾ ಕೆಡಿಪಿ ಸದಸ್ಯೆ ಸೌಮ್ಯ ಆನಂದ್, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿಗ್ಗಾವಿ, ದೇವಾಲಯದ ಇ.ಒ .ಯೋಗೇಶ್, ಯೋಜನ ಅಭಿವೃದ್ಧಿ ಅಧಿಕಾರಿ ರುದ್ರಮುನಿ, ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ಆರೋಗ್ಯಾಧಿಕಾರಿ ಲೋಹಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.