ADVERTISEMENT

ಹಾಸನ: ಕೋವಿಡ್ ನಿಯಮ ಪಾಲನೆಗೆ ಪ್ರವಾಸಿಗರ ಉದಾಸೀನ

ರಜೆಗಳಲ್ಲಿ ಪಶ್ಚಿಮಘಟ್ಟ ಸೌಂದರ್ಯ ನೋಡಲು ಜನಸಾಗರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 2:48 IST
Last Updated 28 ಅಕ್ಟೋಬರ್ 2020, 2:48 IST
ಹೆತ್ತೂರು ಹೋಬಳಿಯ ಪ್ರವಾಸಿ ತಾಣ ಬಿಸಲೆ ಅರಣ್ಯ ವೀಕ್ಷಣೆಗೆ ಬಂದವರು ವಾಹನ ನಿಲ್ಲಿಸಿರುವುದು
ಹೆತ್ತೂರು ಹೋಬಳಿಯ ಪ್ರವಾಸಿ ತಾಣ ಬಿಸಲೆ ಅರಣ್ಯ ವೀಕ್ಷಣೆಗೆ ಬಂದವರು ವಾಹನ ನಿಲ್ಲಿಸಿರುವುದು   

ಹೆತ್ತೂರು (ಹಾಸನ): ಲಾಕ್‌ಡೌನ್‌ ಸಡಿಲಿಕೆಯಾದ ಮೇಲೆ ಮಲೆನಾಡಿನತ್ತ ಪ್ರವಾಸಿಗರ ದಾಗುಂಡಿ ಜೋರಾಗಿದೆ. ಕೋವಿಡ್ ಹರಡದಂತೆ ಕ್ರಮ ಕೈಗೊಂಡ ಜಿಲ್ಲಾಡಳಿತ ಪ್ರವಾಸಿ ತಾಣಗಳ ವೀಕ್ಷಣೆಗೆ ಷರತ್ತುಬದ್ಧ ಅನುಮತಿ ನೀಡಿದೆ. ಆದರೆ ಬಹಳಷ್ಟು ಪ್ರವಾಸಿಗರು ನಿಯಮದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಮಾಸ್ಕ್ ಧರಿಸುವುದು ಕಡ್ಡಾಯ, ಗುಂಪಾಗಿ ಪ್ರಯಾಣಿಸುವಂತಿಲ್ಲ, ಅಂತರ ಪಾಲನೆ ಮೊದಲಾದ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ, ಬಹುತೇಕ ಪ್ರವಾಸಿಗರು ಅವುಗಳನ್ನು ಪಾಲಿಸದಿ ರುವುದು ಸ್ಥಳೀಯರ ನೆಮ್ಮದಿ ಹಾಳು ಮಾಡುತ್ತಿದೆ. ಅಲ್ಲದೇ ಎಲ್ಲಿ ಸಮಸ್ಯೆಯಾಗುತ್ತೋ ಎಂಬ ಅವ್ಯಕ್ತ ಭಯ ಶುರುವಾಗಿದೆ.

ವಾರಾಂತ್ಯ, ಸರಣಿ ರಜೆಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ಗಿಜಿಗಿಡುತ್ತಿವೆ. ಸಾವಿರಾರು ವಾಹನಗಳು ಪ್ರವಾಸಿ ತಾಣಗಳಲ್ಲಿ ಸಂಚರಿಸುತ್ತಿವೆ. ಮೂರು ದಿನ ( ಶನಿವಾರ, ಭಾನುವಾರ, ಸೋಮವಾರ) ಹೋಬಳಿಯ ಬಿಸಿಲೆ, ಮೂಕನಮನೆ ಫಾಲ್ಸ್, ಕಾಗಿನಹರೆ, ಪಟ್ಲಬೆಟ್ಟ ಹಾಗೂ ಇತರ ತಾಣಗಳಲ್ಲಿ ಪ್ರವಾಸಿಗರದ್ದೇ ದರ್ಬಾರ್‌ ಹೆಚ್ಚಿತ್ತು.

ADVERTISEMENT

ರಜಾ ದಿನಗಳಲ್ಲಿ ಪಶ್ಚಿಮಘಟ್ಟ ಗಿರಿ ಶ್ರೇಣಿಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಮಳೆಯಿಂದಾಗಿ ರಸ್ತೆ ಕೆಲವೆಡೆ ಕೊರಕಲಾಗಿದ್ದು ವಾಹನ ಗಳನ್ನು ನಿಧಾನವಾಗಿ ಓಡಿಸದೇ ಮನಬಂದಂತೆ ಓಡಿಸಿ ಸ್ಥಳೀಯರಿಗೂ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಕೊರೊನಾ ಷರತ್ತು ಪಾಲಿಸದ ಬಗ್ಗೆ, ವಾಹನ ದಟ್ಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಕ್ರಮ ವಹಿಸುತ್ತಿಲ್ಲ ಎಂದು ಮಲೆನಾಡಿಗರ ಕೊರಗಾಗಿದೆ.

ಪ್ರವಾಸಿ ತಾಣಗಳಲ್ಲಿ ಧೂಮಪಾನ, ಮದ್ಯಪಾನದಲ್ಲಿ ತೊಡಗುವವರ ಸಂಖ್ಯೆ ಹೆಚ್ಚಾಗಿದೆ. ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವುದು, ದ್ವಿಚಕ್ರ ವಾಹನದಲ್ಲಿ ಮೂವರು ಸವಾರಿ ಮಾಡುವುದು, ಕಾರು, ಜೀಪಿನಲ್ಲಿ ಬರುವ ಜನ ಪ್ರಕೃತಿ ಸೌಂದರ್ಯ ಸವಿಯಲೆಂದು ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ತಿರುವುಗಳಲ್ಲಿ ವಾಹನ ನಿಲ್ಲಿಸಿದಾಗ ಹಿಂದಿನಿಂದ ಬರುವ ವಾಹನಗಳಿಗೆ ಕಾಣದೇ ಅಪಘಾತವಾಗುವ ಸಂಭವ ಹೆಚ್ಚಾಗಿದೆ.

ಎಲ್ಲೆಂದರಲ್ಲಿ ಪ್ಲಾಸ್ಟಿಕ್‌: ಪ್ರವಾಸಿಗರು ತಿಂಡಿ– ತಿನಿಸುಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿಕೊಂಡು ಬಂದು ತಿಂದು, ಕವರ್‌, ತಟ್ಟೆ, ಲೋಟಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದಕ್ಕೆ ಕಡಿವಾಣವೇ ಇಲ್ಲದಾಗಿದೆ. ಇದನ್ನೂ ಮೀರಿ, ಗಿಡಗಳ ಬುಡದಲ್ಲಿ ಕಲ್ಲು ಬಂಡೆಗಳ ಮಧ್ಯೆ ಖಾಲಿ ಬಾಟಲಿ, ಟಿನ್‌ಗಳನ್ನು ಎಸೆಯುತ್ತಿದ್ದಾರೆ. ಕೆಲವರಂತೂ ಬಾಟಲಿ ಒಡೆದು ಬೀಸಾಕಿರುತ್ತಾರೆ. ಇದರಿಂದ ಹಿಂದೆ ಬರುವ ಪ್ರವಾಸಿಗರಿಗೂ ಕಷ್ಟ, ಪರಿಸರಕ್ಕೂ ಹಾನಿ, ವನ್ಯಜೀವಿಗಳ ಪ್ರಾಣಕ್ಕೂ ಕುತ್ತು ಬರುತ್ತಿದೆ.

ಪ್ರವಾಸಿಗರಿಗೆ ಪ್ರೇಕ್ಷಣೀಯ ತಾಣಗಳ ದರ್ಶನಕ್ಕೆ ಅವಕಾಶ ನೀಡಿರುವುದು ಪ್ರವಾಸೋದ್ಯಮ ಚೇತರಿಕೆ ಅನುಕೂಲವಾಗಿದೆ. ವ್ಯಾಪಾರಿಗಳು ಹೋಟೆಲ್, ಲಾಡ್ಜ್, ರೆಸಾರ್ಟ್‌ಗಳಿಗೆ ವಹಿವಾಟು ಶುರುವಾಗಿದೆ ಪ್ರವಾಸಿಗರು ಷರತ್ತು ಪಾಲಿಸುವಂತೆ ಮಾಡುವುದೇ ಈಗ ಬಹು ದೊಡ್ಡ ಸವಾಲಾಗಿದೆ.

‘ಇಲ್ಲಿ ಬರುವ ಬಹುತೇಕ ಪ್ರವಾಸಿಗರಿಗೆ ಕೋವಿಡ್ ಭಯವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ನೋಡಿದವರು ಯಾರಾ ದರೂ ಹೇಳಲು ಹೋದರೆ ಜಗಳಕ್ಕೆ ಬರುತ್ತಾರೆ. ಸ್ವಚ್ಛಂದ ಪರಿಸರ ಹಾಳು ಮಾಡುತ್ತಿರುವ ಪ್ರವಾಸಿ ಗರ ಹುಚ್ಚಾಟಕ್ಕೆ ಜಿಲ್ಲಾಡಳಿತ ಕಡಿ ವಾಣ ಹಾಕಬೇಕು, ನಿಯಮ ಪಾಲಿಸದವರಿಗೆ ಬಿಸಿ ಮುಟ್ಟಿಸಬೇಕು’ ಎಂದು ರಮೇಶ್ ಬಿಸಿಲೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.