ಹಿರೀಸಾವೆ: ಇಲ್ಲಿನ ಶ್ರೀಕಂಠಯ್ಯ ವೃತ್ತದಲ್ಲಿ ಪ್ರಯಾಣಿಕರಿಗೆ ತಂಗುದಾಣ ಇಲ್ಲದೇ, ಜನರು, ವಿದ್ಯಾರ್ಥಿಗಳು ಬಿಸಿಲು, ಮಳೆಯಲ್ಲಿ ರಸ್ತೆ ಬದಿ ನಿಂತು ಬಸ್‌ಗಳಿಗೆ ಕಾಯಬೇಕಿದೆ.
ಚನ್ನರಾಯಪಟ್ಟಣ ಮತ್ತು ಹಾಸನ ಕಡೆಗೆ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಸರ್ಕಲ್‌ನಿಂದ ನಿತ್ಯ ಪ್ರಯಾಣ ಬೆಳೆಸುತ್ತಾರೆ. ಬೆಂಗಳೂರು ಕಡೆಯಿಂದ ಬರುವ ಬಸ್‌ಗಳು ಇಲ್ಲಿಯೇ ನಿಂತು, ಪ್ರಯಾಣಿಕರನ್ನು ಹತ್ತಿಸಿ–ಇಳಿಸಿ ಹೋಗುತ್ತವೆ.
ಬೇಸಿಗೆಯ ಬಿಸಿಲು ಮತ್ತು ಮಳೆಗಾಲದ ಮಳೆಯಲ್ಲಿ ಜನರು ಬಸ್‌ಗಳು ಬರುವ ವರೆಗೆ ರಸ್ತೆಯಲ್ಲಿ ನಿಲ್ಲಬೇಕಿದೆ. ರಸ್ತೆ ಅಕ್ಕಪಕ್ಕ ಯಾವುದೇ ಅಂಗಡಿಗಳೂ ಇಲ್ಲ. ಮಳೆ ಬಂದಾಗ ವೃದ್ಧರು, ಮಕ್ಕಳು ಸೇರಿದಂತೆ ಸಾರ್ವಜನಿಕರು ಎಲ್ಲಿಯೂ ಹೋಗಲಾಗದೆ, ಮಳೆಯಲ್ಲಿ ಒದ್ದೆಯಾಗಿ ರಸ್ತೆ ಬದಿ ನಿಂತು ಬಸ್ ಹತ್ತುತ್ತಿದ್ದಾರೆ.
ಬೇಸಿಗೆಯ ಸಮಯದಲ್ಲಿ ಕೆಲವರು ಬಿಸಿಲಿನ ತಾಪಕ್ಕೆ ತಲೆಸುತ್ತಿ ಪ್ರಜ್ಞೆತಪ್ಪಿದ್ದಾರೆ. ಶ್ರವಣಬೆಳಗೊಳ ಹಾಗೂ ನುಗ್ಗೇಹಳ್ಳಿ ಕಡೆಗೆ ಹೋಗುವವವರು ಈ ವೃತ್ತದಲ್ಲಿ ಬಸ್‌ಗೆ ಗಂಟೆಗಟ್ಟಲೆ ಕಾಯುತ್ತಾರೆ. ಹೋಬಳಿ ಕೇಂದ್ರವಾಗಿರುವುದರಿಂದ ನೂರಾರು ಹಳ್ಳಿಗಳ ಜನರು, ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿನ ಕೆಲಸ ಕಾರ್ಯಗಳಿಗೆ ಇಲ್ಲಿಂದಲೇ ಹೋಗಬೇಕಿದೆ.
ರಾಷ್ಟ್ರೀಯ ಹೆದ್ದಾರಿ–75ಕ್ಕೆ ಅಂಡರ್‌ಪಾಸ್ ಹಾಗೂ ಸರ್ವಿಸ್ ರಸ್ತೆ ಮಾಡಿದ್ದಾರೆ. ಆದರೆ ಜನರು ನಿಲ್ಲಲು ತಂಗುದಾಣ ನಿರ್ಮಾಣ ಮಾಡಿಲ್ಲ. ಈ ಸರ್ಕಲ್‌ನಲ್ಲಿ ಸಾರ್ವಜನಿಕರ ತಂಗುದಾಣವನ್ನು ನಿರ್ಮಾಣ ಮಾಡುವಂತೆ ವಿವಿಧ ಸಂಘಟನೆಗಳ ಪ್ರಮುಖರು ಶಾಸಕ ಸಿ.ಎನ್. ಬಾಲಕೃಷ್ಣ, ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದು ವರ್ಷ ಕಳೆದರೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಜನರು ದೂರುತ್ತಿದ್ದಾರೆ.
ಶ್ರೀಕಂಠಯ್ಯ ವೃತ್ತದಲ್ಲಿ ಸರ್ವಿಸ್ ರಸ್ತೆಯ ಬದಿ ಸಾರ್ವಜನಿಕರು ನಿಲ್ಲಲು ತಂಗುದಾಣ ನಿರ್ಮಿಸಲು ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.ಮಂಜುನಾಥ್ ಮೌರ್ಯ ಹಿರೀಸಾವೆ ಡಾ.ಪರಮೇಶ್ವರ ಯುವಕ ಸಂಘದ ಅಧ್ಯಕ್ಷ
ವಿದ್ಯಾರ್ಥಿಗಳು ಜನರು ಬಿಸಿಲು ಮಳೆಯಲ್ಲಿ ಬಸ್‌ಗಾಗಿ ಗಂಟೆಗಟ್ಟಲೆ ರಸ್ತೆಯಲ್ಲಿ ನಿಲ್ಲಬೇಕಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಅಂಜನ್ ಜಿನ್ನೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.