ಈಶ್ವರ ಖಂಡ್ರೆ
– ಪ್ರಜಾವಾಣಿ ಚಿತ್ರ
ಹಾಸನ: ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯರಗಳ್ಳಿಯಲ್ಲಿ ಮರಗಳ ಕಡಿತಲೆ ಆಗಿದೆ ಎನ್ನಲಾದ ಪ್ರಕರಣದ ಸಮಗ್ರ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.
ಕಚೇರಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿರುವ ಸಚಿವ ಖಂಡ್ರೆ, ಅತ್ತಿಹಳ್ಳಿ ಸಮೀಪದ ಯರಗಳ್ಳಿಯಲ್ಲಿ ಮರಗಳನ್ನು ಕತ್ತರಿಸಿ ರಾಶಿ ಹಾಕಿರುವುದು ಜಿಪಿಎಸ್ ಚಿತ್ರದಿಂದ ಸ್ಪಷ್ಟವಾಗುತ್ತಿದೆ. ಈ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಂಡದಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಸರ್ಕಾರಿ, ಅರಣ್ಯ ಅಥವಾ ಪರಿಭಾವಿತ ಅರಣ್ಯದಲ್ಲಿ ಮರ ಕಡಿದಿದ್ದಲ್ಲಿ ಅರಣ್ಯ ಅಪರಾಧ ಪ್ರಕರಣ ದಾಖಲಿಸಿ, ನಿಯಮಾನುಸಾರ ಕ್ರಮ ಜರುಗಿಸಲು, ಪಟ್ಟಾ ಜಮೀನಿನಲ್ಲಿ ಅನುಮತಿ ಪಡೆದು ಮರ ಕಡಿದಿದ್ದರೆ ಇಷ್ಟೊಂದು ಪ್ರಮಾಣದ ಮರ ಕಡಿಯಲು ಅನುಮತಿ ನೀಡಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಅನುಮತಿಯೇ ಇಲ್ಲದೆ ಅಕ್ರಮವಾಗಿ ಕಡಿತಲೆ ಮಾಡಿದ್ದಲ್ಲಿ ಈ ವಲಯದ ಅರಣ್ಯ ಸಿಬ್ಬಂದಿಯ ನಿರ್ಲಕ್ಷ್ಯವೂ ಸೇರಿದಂತೆ ಸಮಗ್ರ ತನಿಖೆ ನಡೆಸಿ, ಕೈಗೊಳ್ಳಬೇಕು. ಕ್ರಮದ ವಿವರದೊಂದಿಗೆ 3 ದಿನಗಳ ಒಳಗಾಗಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.