ಕೃಷ್ಣ ಬೈರೇಗೌಡ
ಹಾಸನ: ದುರಂತದಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ಆಗಿರುವ ನೋವು ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ಅವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ, ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದ್ದು, ವೈದ್ಯರಿಗೆ ಅಗತ್ಯ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಜನಸಂದಣಿ ಇರುವ ಸ್ಥಳಕ್ಕೆ ಟ್ರಕ್ ಹರಿದಿರುವುದು ನೋವು ತರುವಂಥ ಘಟನೆಯಾಗಿದ್ದು, ಚಾಲಕನ ಮೇಲೆ ಯಾವುದಾದರೂ ಪ್ರಭಾವ ಇದೆಯೇ ಎಂಬುದರ ಬಗ್ಗೆಯೂ ಸೂಕ್ತ ತನಿಖೆಗೆ ಎಸ್ಪಿಗೆ ಸೂಚನೆ ನೀಡಿದ್ದೇನೆ ಎಂದರು.
ಅಪಘಾತ ಎಲ್ಲಿ ಹೇಗೆ ಏಕೆ ನಡೆದಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದಕ್ಕೂ ಮೀರಿ ಏನಾದರೂ ಇದೆಯೇ ಎಂಬುದನ್ನು ನೋಡಬೇಕಿದೆ. ರಸ್ತೆ ದಾಟಿ ಹಾರಿ ಬಂದಿರುವ ಕಾರಣ ಎಲ್ಲದಕ್ಕೂ ಮೀರಿದ ದುರಂತ ಇದಾಗಿದೆ ಎಂದು ಹೇಳಿದರು.
ದುರ್ಘಟನೆ ನಡೆದಿರುವ ವಿಡಿಯೋವನ್ನು ಗಮನಿಸಿದ್ದು, ವಾಹನಗಳ ಓಡಾಟಕ್ಕೆ ಪ್ರತ್ಯೇಕ ರಸ್ತೆ ಇದ್ದರೂ ಟ್ರಕ್ ಚಾಲಕ ನಿಧಾನವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ವೇಗ ಹೆಚ್ಚಿಸಿ ವಿಭಜಕ ಹಾರಿ, ಮೆರವಣಿಗೆ ಮೇಲೆ ಟ್ರಕ್ ಚಾಲನೆ ಮಾಡಿದ್ದು ಅಪಘಾತ ಸಂಭವಿಸಲು ಪ್ರಮುಖ ಕಾರಣವಾಗಿದೆ. ಈ ಸಂಬಂಧ ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ ಎಂದರು.
ದುರಂತದ ಮಾಹಿತಿ ತಿಳಿದ ಕೂಡಲೇ ಮುಖ್ಯಮಂತ್ರಿ, ರಾತ್ರಿ ನನ್ನೊಡನೆ ಮಾತನಾಡಿದ್ದು, ಇಲ್ಲಿಗೆ ಬಂದು ಸರ್ಕಾರದ ಕಡೆಯಿಂದ ಆಗಬೇಕಾದ ಸಹಾಯ, ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾಡಳಿತವು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ವೈದ್ಯಕೀಯ ಸೇವೆ ಒದಗಿಸಿದೆ. ಕಾನೂನು ನೆರವಿನೊಂದಿಗೆ ಮೃತದೇಹಗಳನ್ನು ಕುಟುಂಬಸ್ಥರಿಗೆ ರಾತ್ರಿ ಮೂರು ಗಂಟೆಗೆ ಹಸ್ತಾಂತರ ಮಾಡಲಾಗಿದ್ದು, ಮುಂದಿನ ಪ್ರಕ್ರಿಯೆಗೆ ನೆರವಾಗಿದ್ದಾರೆ ಎಂದರು.
ಮೃತಪಟ್ಟವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂಬುದರ ಬಗ್ಗೆ ಸ್ಥಳ ಪರಿಶೀಲನೆ ವೇಳೆ ಮನವಿ ಕೇಳಿ ಬಂದಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಘಟನೆಯ ಸ್ಥಳ ಭೇಟಿ ನೀಡಿದ ನಂತರ ಈ ರಸ್ತೆಯಲ್ಲಿ ವೇಗ ನಿಯಂತ್ರಕ ಇಲ್ಲದಿರುವುದು ಅಪಘಾತಕ್ಕೆ ಮತ್ತೊಂದು ಕಾರಣ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ವೇಗ ನಿಯಂತ್ರಕ ಅಳವಡಿಕೆ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.
ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದಾಗ, ಸ್ಥಳೀಯರು ಡಿಜೆ ಏಕೆ ಅವಕಾಶ ಕೊಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಜನರ ಭಾವನೆಗೆ ವಿರುದ್ಧವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಟೀಕೆ ಮಾಡುತ್ತಾರೆ. ಈ ರೀತಿಯ ಮೆರವಣಿಗೆಗಳು ಮುಖ್ಯರಸ್ತೆಯಲ್ಲಿ ಸಾಗುವಾಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಹೇಳಿದರು.
ದುರಂತದ ಬಳಿಕ 20 ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಇಬ್ಬರು ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,. ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಬೆಳಗಿನ ಜಾವ ಕರುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.
ಇಬ್ಬರು ಡ್ರೈವರ್ ಇದ್ದರೆ ಪರಿಶೀಲನೆಗೆ ಸೂಚನೆ...
ದುರಂತಕ್ಕೆ ಕಾರಣವಾದ ಟ್ರಕ್‌ನಲ್ಲಿ ಇಬ್ಬರು ಚಾಲಕರು ಇದ್ದರೆ ಎಂಬುದರ ಬಗ್ಗೆ ಸೂಕ್ತ ಪರಿಶೀಲನೆ ನಡೆಸಲು ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ದುರಂತ ನಡೆದ ನಂತರ ಟ್ರಕ್‌ನಲ್ಲಿ ಇಬ್ಬರು ಚಾಲಕರು ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅದ್ದರಿಂದ ಈ ಟ್ರಕ್ ಹಾದು ಬಂದ ಟೋಲ್ ಹಾಗೂ ಇತರೆಡೆ ಸಂಗ್ರಹವಾಗಿರುವ ಸಿಸಿಟಿವಿ ಕ್ಯಾಮೆರಾ ವಿಡಿಯೋ ಪರಿಶೀಲಿಸಿ ಮಾಹಿತಿ ಕಲೆ ಹಾಕಲಾಗುವುದು. ನಂತರ ಈ ಬಗ್ಗೆ ಸ್ಪಷ್ಟ ಉತ್ತರ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.
ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಯಲ್ಲಿ ಹಾಜರಾಗುವುದು ಕಷ್ಟ. ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ ಅಂತಹ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡುವ ಕುರಿತು ಚರ್ಚಿಸಲಾಗುವುದು.ಕೃಷ್ಣ ಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.