ADVERTISEMENT

ಹಾಸನ: ಗುಂಡು ಹಾರಿಸಿ ಆನೆ ಹತ್ಯೆ: ಇಬ್ಬರ ಬಂಧನ

ಮರಣೋತ್ತರ ಪರೀಕ್ಷೆಯಲ್ಲಿ ದೃಢ; ಬೇಟೆಗೆ‌ ತೆರಳಿದ್ದ ವೇಳೆ ಕೃತ್ಯ

​ಪ್ರಜಾವಾಣಿ ವಾರ್ತೆ
Published 30 ಮೇ 2022, 16:01 IST
Last Updated 30 ಮೇ 2022, 16:01 IST
ಹಾಸನದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್. ಬಸವರಾಜು ಮಾತನಾಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಭು ಇದ್ದಾರೆ.
ಹಾಸನದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್. ಬಸವರಾಜು ಮಾತನಾಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಭು ಇದ್ದಾರೆ.   

ಹಾಸನ: ‘ಬೇಲೂರು ತಾಲ್ಲೂಕು ಗೂರ್ಗಿಹಳ್ಳಿ ತೋಟದಲ್ಲಿ ಕಾಡಾನೆಯನ್ನು ಗುಂಡುಹಾರಿಸಿ ಹತ್ಯೆ ಮಾಡಿರುವುದು ಮರಣೋತ್ತರ ಪರೀಕ್ಷೆ ವರದಿಯಿಂದ ದೃಢಪಟ್ಟಿದ್ದು,ಇಬ್ಬರು ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್. ಬಸವರಾಜು ತಿಳಿಸಿದರು.

‘ಅರೇಹಳ್ಳಿ‌ ನಿವಾಸಿ, ಸದ್ಯ ಹಾಸನದಲ್ಲಿ ವಾಸವಿರುವ ಸಯ್ಯದ್ ಹಫೀಜ್, ಅವರ ಅಣ್ಣನಮಗ ಖದೀರ್ ಬಂಧಿತ ಆರೋಪಿಗಳು. ಈ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ವಶಕ್ಕೆ ನೀಡಲು ಕೋರಲಾಗಿದೆ. ಮೇ 27ರಂದು ಗೂರ್ಗಿಹಳ್ಳಿ ಸಯ್ಯದ್ ಸತ್ತರ್ಎಂಬುವವರ ತೋಟದ ಸಮೀಪ ಆನೆಯ ಕಳೇಬರ ಪತ್ತೆಯಾಗಿತ್ತು. ಪಶುವೈದ್ಯಮಹಾವಿದ್ಯಾಲಯದ ಡಾ.ಗಿರೀಶ್, ಡಾ.ಯಶಸ್, ಡಾ.ನಾಗರಾಜು ಅವರ ತಜ್ಞರ ತಂಡ ಮರಣೋತ್ತರ ಪರೀಕ್ಷೆ ನಡೆಸಿ, ಗುಂಡೇಟಿನಿಂದ ಆನೆ ಸ್ಥಳದಲ್ಲಿಯೇಮೃತಪಟ್ಟಿರುವುದಾಗಿ ವರದಿ ನೀಡಿತ್ತು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿಹೇಳಿದರು.

‘ನಾಲ್ಕು ಜನರನ್ನು ವಶಕ್ಕೆ ತೆಗೆದುಕೊಂಡು ತನಿಖೆಗೆ ಒಳಪಡಿಸಲಾಗಿತ್ತು. ವಿಚಾರಣೆವೇಳೆ ಇಬ್ಬರು ಆರೋಪಿಗಳು ಹತ್ಯೆ ಮಾಡಿರುವುದು ತಿಳಿದು ಬಂತು. ಕಾಡು ಪ್ರಾಣಿಬೇಟೆಯಾಡಲು ತೆರಳುತ್ತಿದ್ದ ವೇಳೆ ಆನೆ ಎದುರಾಗಿದೆ. ಆಗ ಪರವಾನಗಿ ಹೊಂದಿದತಮ್ಮ ಬಂದೂಕಿನಲ್ಲಿ ಹಫೀಜ್ ಗುಂಡು ಹಾರಿಸಿದ್ದಾರೆ. ಆನೆ ದಂತಕ್ಕಾಗಿ ಹತ್ಯೆ ಮಾಡಿರುವ ಶಂಕೆ ಇದ್ದು, ಹೆಚ್ಚಿನ ವಿಚಾರಣೆಯಿಂದ ತಿಳಿದು ಬರಬೇಕಿದೆ. ಆರೋಪಿಗಳುಈ ಹಿಂದೆಯೂ ಅರಣ್ಯದಲ್ಲಿ ಜಿಂಕೆ ಬೇಟೆಯಾಡಿದ ಮಾಹಿತಿ ಇದೆ’ ಎಂದು ಬಸವರಾಜ್ಮಾಹಿತಿ ನೀಡಿದರು.

ADVERTISEMENT

‘ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಆರೋಪಿಗಳಿಗೆ ಏಳು ವರ್ಷ ಶಿಕ್ಷೆ ಹಾಗೂ₹ 50 ಸಾವಿರ ದಂಡ ವಿಧಿಸಲು ಅವಕಾಶವಿದೆ’ ಎಂದರು.

‘ಅರಸೀಕೆರೆ ಅರಣ್ಯ ವ್ಯಾಪ್ತಿಯಲ್ಲಿ 80 ವರ್ಷದ ವೃದ್ಧೆಯ ಶವ ದೊರೆತಿದ್ದು,ವೈದ್ಯಕೀಯ ಪರೀಕ್ಷೆ ನಡೆಸಿದಾಗ ಯಾವುದೇ ರೀತಿಯ ಪ್ರಾಣಿಯಿಂದ ಜೀವ ಕಳೆದುಕೊಂಡಿಲ್ಲ ಎಂಬುದು ತಿಳಿದು ಬಂದಿದೆ’ ಎಂದರು.

‘ಕೊಡಗಿನಿಂದ ಹಾಸನಕ್ಕೆ ಬರುವ ಆನೆಗಳನ್ನು ತಡೆಯುವ ಉದ್ದೇಶದಿಂದ ರೈಲ್ವೆ ಕಂಬಿ ಬಳಸಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ಈಗಾಗಲೇ 9 ಕಿ.ಮೀ. ತಡೆಗೋಡೆ ನಿರ್ಮಾಣವಾಗಿದೆ. ಮತ್ತೆ ಎಂಟು ಕಿ.ಮೀ. ತಡೆಗೋಡೆ ನಿರ್ಮಿಸಲು ಹಣ ಬಿಡುಗಡೆಯಾಗಿದೆ. ಸುಮಾರು 45 ಕಿ.ಮೀ. ತಡೆಗೋಡೆ ನಿರ್ಮಾಣವಾದರೆ ಬಹುತೇಕ ಆನೆ ನಾಡಿಗೆ ಬರುವುದನ್ನು ನಿಯಂತ್ರಿಸಬಹುದು’ ಎಂದು ತಿಳಿಸಿದರು.

ಜೂನ್ 5 ರಂದು ವಿಶ್ವ ಪರಿಸರ ದಿನದ ಅಂಗವಾಗಿ ಎಂಟು ದಿನ ಶಾಲಾ ಮಕ್ಕಳುಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಬೀಜ ಬಿತ್ತನೆ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಗೋಷ್ಠಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.