
ಅರಸೀಕೆರೆ: ತಾಲ್ಲೂಕಿನ ಸುಕ್ಷೇತ್ರ ಅಮರಗಿರಿ ಮಾಲೇಕಲ್ಲು ತಿರುಪತಿಯಲ್ಲಿ ಡಿ.30 ರಂದು ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಸಂತೋಷಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿ ವರ್ಷ ಧನುರ್ಮಾಸ ವೈಕುಂಠ ಏಕಾದಶಿ ಗ್ರಾಮಸ್ಥರಿಗೆ ವಿಶೇಷ ದಿನವಾಗಿದೆ. ಕರವೇ ಅಧ್ಯಕ್ಷ ಟಿ.ಎ ನಾರಾಯಣಗೌಡ ಮತ್ತು ಸಹೋದರರು ದೇವಸ್ಥಾನದ ಹೂವಿನ ಅಲಂಕಾರ ಸೇವಾರ್ಥದಾರರಾಗಿದ್ದು, ಸಾಮೂಹಿಕ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ದೇವಾಲಯದಲ್ಲಿ ವೈಕುಂಠ ಮಂಟಪ ನಿರ್ಮಿಸಲಾಗಿದ್ದು, ಲಕ್ಷ್ಮೀ ವೆಂಕಟರಮಣ ಸ್ವಾಮಿ, ಗೊವಿಂದರಾಜ ಸ್ವಾಮಿ, ಪದ್ಮಾವತಿ ದೇವಿ, ಸೂರ್ಯ ನಾರಾಯಣ, ಆಂಜನೇಯ, ಕೆಂಚರಾಯ ಸ್ವಾಮಿ, ಗುಂಡಮ್ಮ ದೇವಿ, ಬೆಟ್ಟದ ಮೇಲಿನ ವೆಂಕಟೇಶ್ವರ ಮತ್ತು ಮಹಾಲಕ್ಷ್ಮಿ ದೇವರಿಗೆ ವಿಶೇಷ ಅಲಂಕಾರ, ಪೂಜೆಗಳನ್ನು ನೆರವೇರಿಸಲಾಗುತ್ತದೆ ಎಂದರು.
ನಾದಸ್ವರ , ಕೊಳಲು ವಾದನ, ವಿವಿಧ ಭಜನಾ ತಂಡಗಳಿಂದ ದೇವರ ಭಕ್ತಿ, ದೇವರ ನಾಮ, ಗೀತೆಗಳ ಭಜನೆ ಆಯೋಜಿಸಲಾಗಿದೆ. ನಗರದಿಂದ ಶ್ರೀಕ್ಷೇತ್ರಕ್ಕೆ ಕೆ.ಎಸ್.ಆರ್.ಟಿ.ಸಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಆರ್ಯವೈಶ್ಯ ಮಂಡಳಿಯಿಂದ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.